ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಖಾಲಿ ಚೊಂಬು : ಎಸ್.ಎಸ್. ಮಲ್ಲಿಕಾರ್ಜುನ

KannadaprabhaNewsNetwork |  
Published : Jul 24, 2024, 12:19 AM ISTUpdated : Jul 24, 2024, 12:15 PM IST
SS Mallikarjun

ಸಾರಾಂಶ

ಈ ಬಾರಿಯ ಕೇಂದ್ರ ಸರ್ಕಾರದ ಚೊಚ್ಚಲ ಬಜೆಟ್‍ನಲ್ಲಿ ಕರ್ನಾಟಕಕ್ಕೆ ಏನನ್ನೂ ನೀಡದೇ, ರಾಜ್ಯದ ಸಮಸ್ತ ಜನತೆಗೆ ದ್ರೋಹ ಬಗೆಯಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ದೂರಿದ್ದಾರೆ.

ದಾವಣಗೆರೆ :ಈ ಬಾರಿಯ ಕೇಂದ್ರ ಸರ್ಕಾರದ ಚೊಚ್ಚಲ ಬಜೆಟ್‍ನಲ್ಲಿ ಕರ್ನಾಟಕಕ್ಕೆ ಏನನ್ನೂ ನೀಡದೇ, ರಾಜ್ಯದ ಸಮಸ್ತ ಜನತೆಗೆ ದ್ರೋಹ ಬಗೆಯಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ದೂರಿದ್ದಾರೆ.

ರಾಜ್ಯ ಸಭೆಯಲ್ಲಿ ಕರ್ನಾಟಕ ಪ್ರತಿನಿಧಿಸುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಮಂಡಿಸಿದ 2024-25ನೇ ಸಾಲಿನ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಖಾಲಿ ಚೊಂಬು ಕೊಟ್ಟಿದ್ದಾರೆ, ಈ ರಾಜ್ಯಕ್ಕೂ ಪಂಗನಾಮ ಹಾಕಿದ್ದಾರೆ ಎಂದು ಬಜೆಟ್ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಆಂಧ್ರ, ಬಿಹಾರಕ್ಕೆ ವಿಶೇಷಾನುದಾನ ನೀಡಿ, ಬೇರೆ ರಾಜ್ಯಗಳನ್ನೇ ಕಡೆಗಣಿಸಲಾಗಿದೆ. ರಾಜ್ಯದ ಪ್ರಮುಖ ಯೋಜನೆ ಭದ್ರಾ ಮೇಲ್ದಂಡೆ ಯೋಜನೆಗೆ ಕಳೆದ ಬಾರಿಯೇ ಅನುದಾನ ಬಿಡುಗಡೆ ಮಾಡುತ್ತೇವೆ ಎಂದಿದ್ದ ಕೇಂದ್ರವು ಈ ಸಲ ಅದರ ಬಗ್ಗೆ ಚಕಾರ ಎತ್ತಿಲ್ಲ. ದಾವಣಗೆರೆ ಸೇರಿದಂತೆ ಏಳೆಂಟು ಜಿಲ್ಲೆಗಳ ರೈತರಿಗೆ ದ್ರೋಹ ಬಗೆಯಲಾಗಿದೆ. ನಿರ್ಮಲಾ ಸೀತಾರಾಮನ್ ಕರ್ನಾಟಕದ ಹಿತ ಕಾಪಾಡಿ, ನ್ಯಾಯ ಕೊಡುವರೆಂಬ ನಿರೀಕ್ಷೆ ಹುಸಿಯಾಗಿದೆ ಎಂದಿದ್ದಾರೆ.

ಏತ ನೀರಾವರಿ ಯೋಜನೆಗಳ ಅನುಷ್ಠಾನದ ನಿರೀಕ್ಷೆಯಲ್ಲಿದ್ದೆವು. ಅದಕ್ಕೂ ಸ್ಪಂದಿಸಿಲ್ಲ. ಕಲ್ಯಾಣ ಕರ್ನಾಟಕಕ್ಕೆ ಮ್ಯಾಚಿಂಗ್ ಗ್ರ್ಯಾಂಟ್ ಕೊಟ್ಟಿಲ್ಲ. ಭದ್ರಾ ಮೇಲ್ದಂಡೆ, ಮಹಾದಾಯಿ, ಮೇಕೆದಾಟು ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ. ರೈತರಿಗೂ ಯಾವುದೂ ಪ್ರಯೋಜನ ಆಗಿಲ್ಲ, ರೈತರು- ಬಡವರಿಗೆ ದೊಡ್ಡ ಅನ್ಯಾಯ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.

ಕನಿಷ್ಠ ಬೆಂಬಲ ಬೆಲೆ ನಿಗದಿಗೆ ಕಾಯ್ದೆ ಮಾಡಿ ಅಂತಾ ರೈತರಿಂದ ಬಹಳ ದಿನಗಳ ಬೇಡಿಕೆ ಇತ್ತು, ಆದೂ ಆಗಿಲ್ಲ. ಇಲಾಖಾವಾರು ಅನುದಾನ ತುಂಬಾ ಕಡಿಮೆ ಕೊಟ್ಟಿದ್ದಾರೆ. ಶಿಕ್ಷಣಕ್ಕೆ 1.25 ಲಕ್ಷ ಕೋಟಿ ಅಷ್ಟೇ ನೀಡಿದ್ದಾರೆ. ದಲಿತರ ಬಗ್ಗೆ ಮಾತನಾಡುವವರು ಅನುದಾನ ಕಡಿಮೆ ಮಾಡಿದ್ದಾರೆ. ಮಧ್ಯಂತರ ಬಜೆಟ್‍ನಲ್ಲಿ ₹9409 ಕೋಟಿ ಮೀಸಲಿಟ್ಟಿದ್ದರು. ಈಗ ₹6300 ಕೋಟಿ ಮಾತ್ರ ಇಟ್ಟಿದ್ದಾರೆ. ಐವರು ಕೇಂದ್ರ ಸಚಿವರಿದ್ದರೂ ರಾಜ್ಯಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ಕೈಗಾರಿಕಾ, ರೈಲ್ವೆ ಕೃಷಿ ಕ್ಷೇತ್ರಕ್ಕೂ ಯಾವುದೆ ಕೊಡುಗೆ ಇಲ್ಲ. ಕೇಂದ್ರವು ಕರ್ನಾಟಕಕ್ಕೆ ಪಂಗನಾಮ ಹಾಕಿದೆ ಎಂದು ದಾವಣಗೆರೆ ದಕ್ಷಿಣ ಕ್ಷೇತ್ರ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುರ್ಚಿ ಕಿತ್ತಾಟ ರಾಜ್ಯದವರೇ ಬಗೆಹರಿಸಿಕೊಳ್ಳಬೇಕು: ಖರ್ಗೆ
ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ