ಬಸವರಾಜ ಹಡಪದ
ಜನಪದ ಕಲೆಯನ್ನು ಬದುಕಾಗಿಸಿಕೊಂಡು, ಡೋಲಕ್ ವಾದನ ಹಾಗೂ ಚರ್ಮವಾದ್ಯ ತಯಾರಿಕೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಶಿಗ್ಗಾಂವಿಯ ಖ್ಯಾತ ಜಾನಪದ ಕಲಾವಿದ ಕಲ್ಲಪ್ಪ ಬಗರಿಕಾರ ಅವರಿಗೆ ಕರ್ನಾಟಕ ಜಾನಪದ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಲಭಿಸಿರುವುದು ಕಲಾವಲಯದಲ್ಲಿ ಸಂತಸ ಮೂಡಿಸಿದೆ.
ಇಂದಿನ ದಿನಮಾನಗಳಲ್ಲಿ ಅನೇಕ ಪ್ರಶಸ್ತಿಗಳು ಶಿಫಾರಸು, ರಾಜಕೀಯ ಪ್ರಭಾವ, ಜಾತಿ ಮಾನದಂಡ ಹಾಗೂ ಹಣದ ಪ್ರಭಾವಕ್ಕೆ ಒಳಗಾಗುತ್ತಿವೆ ಎಂಬ ಟೀಕೆಗಳ ನಡುವೆ, ಯಾವುದೇ ವಸೂಲಿ ಅಥವಾ ಪ್ರಭಾವಿ ಶಿಫಾರಸುಗಳಿಲ್ಲದೆ ನೈಜ ಕಲಾವಿದನೊಬ್ಬನ ಪ್ರತಿಭೆಯನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ವಿಶೇಷ ಮಹತ್ವ ಪಡೆದುಕೊಂಡಿದೆ.ಸಾಮಾಜಿಕವಾಗಿ ಹಿಂದುಳಿದ, ಅಲೆಮಾರಿ ಸಮುದಾಯದ ಹಿನ್ನೆಲೆಯಿಂದ ಬಂದಿರುವ ಕಲ್ಲಪ್ಪ ಬಗರಿಕಾರ ಅವರು ತಮ್ಮ ಕಲಾ ಕೌಶಲ್ಯ, ನಿರಂತರ ಪರಿಶ್ರಮ ಹಾಗೂ ಜನಪದ ಕಲೆಯ ಮೇಲಿನ ಅಪಾರ ಪ್ರೀತಿಯಿಂದ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರ ಪರಿಚಯ ಪತ್ರದಲ್ಲಿನ ಕಲಾ ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು, ನೈಜ ಪ್ರತಿಭೆ ಮತ್ತು ಕಲಾಸೇವೆಗೆ ಇಂದಿಗೂ ಮನ್ನಣೆ ದೊರೆಯುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಪ್ರಶಸ್ತಿ ಎಂದರೆ ಕೇವಲ ಸನ್ಮಾನವಲ್ಲ, ಅದು ಕಲಾವಿದನ ಬದುಕಿನ ಹೋರಾಟ, ಪರಿಶ್ರಮ ಮತ್ತು ಕಲಾಸೇವೆಗೆ ದೊರೆಯುವ ಮಾನ್ಯತೆ, ಈ ನಿಟ್ಟಿನಲ್ಲಿ ಕಲ್ಲಪ್ಪ ಬಗರಿಕಾರ ಅವರಿಗೆ ಸಂದಿರುವ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಯು ಗ್ರಾಮೀಣ ಭಾಗದ ಪ್ರತಿಭಾವಂತ ಕಲಾವಿದರಿಗೆ ಹೊಸ ಭರವಸೆ ಮೂಡಿಸಿದ್ದು, ಜನಪದ ಕಲೆಯ ಉಳಿವು ಮತ್ತು ಬೆಳವಣಿಗೆಗೆ ಮತ್ತಷ್ಟು ಪ್ರೋತ್ಸಾಹ ನೀಡಿದಂತಾಗಿದೆ.
ಅಪರೂಪದ ಬಡ ಕಲಾವಿದನಾಗಿರುವ ಕಲ್ಲಪ್ಪ ಬಗರಿಕಾರ ಬಡವನಾದರೂ ತನ್ನ ಕಲಾಸೇವೆಯನ್ನು ಪ್ರಾಮಾಣಿಕವಾಗಿ ಮಾಡುವ ವ್ಯಕ್ತಿ, ನಿಸ್ವಾರ್ಥ ಸೇವೆಯನ್ನೇ ತನ್ನ ಉಸಿರಾಗಿಸಿಕೊಂಡು ಸೇವೆ ಮಾಡುವ ಪ್ರಾಮಾಣಿಕ ಬಡ ಕಲಾವಿದನಾಗಿದ್ದಾನೆ, ಸರ್ಕಾರ ಇಂತಹ ತೆರೆಮರೆಯ ಕಲಾವಿದರನ್ನು ಇನ್ನು ಹೆಚ್ಚು ಗುರುತಿಸುವ ಕಾರ್ಯ ಮಾಡಬೇಕು ಎಂದು 2020ರ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಖ್ಯಾತ ಕಲಾವಿದ ಬಸವರಾಜ ಶಿಗ್ಗಾಂವಿ ಹೇಳಿದರು.