ಕನ್ನಡಪ್ರಭ ವಾರ್ತೆ ಮಂಡ್ಯ
ದಲಿತ ಹಕ್ಕುಗಳ ಸಮಿತಿ ನೇತೃತ್ವದಲ್ಲಿ ಹುಲಿವಾನ, ಚಾಮಲಾಪುರ, ಎಸ್.ಐ.ಕೋಡಿಹಳ್ಳಿ, ಬೊಕ್ಕೇಗೌಡನದೊಡ್ಡಿ ಗ್ರಾಮಗಳ ಜನರು ನಿವೇಶನದ ಹಕ್ಕು ಪತ್ರ ವಿತರಿಸಲು ಗ್ರಾಪಂ ಅಭಿವೃದ್ಧಿ ಅಧಿಕಾರಿ ಮೂಲಕ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಹುಲಿವಾನ ಗ್ರಾಪಂ ವ್ಯಾಪ್ತಿಯಲ್ಲಿ ಸ. ನಂ. 44/ಪಿ14 ರಲ್ಲಿ 8.09 ಎಕರೆ ಭೂಮಿಯನ್ನು ನಿವೇಶನ ರಹಿತರಿಗೆ ನಿವೇಶನ ನೀಡಲು 8 ವರ್ಷಗಳ ಹಿಂದೆ ಮಂಜೂರು ಮಾಡಲಾಗಿದೆ. ಪಂಚಾಯಿತಿ ವ್ಯಾಪ್ತಿಯ ಹುಲಿವಾನ, ಚಾಮಲಾಪುರ, ಎಸ್.ಐ.ಕೋಡಿಹಳ್ಳಿ, ಬೊಕ್ಕೇಗೌಡನದೊಡ್ಡಿ ಗ್ರಾಮದ ಸುಮಾರು 500ಕ್ಕೂ ಹೆಚ್ಚು ಫಲಾನುಭವಿಗಳು ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದರು.ಗ್ರಾಮ ಪಂಚಾಯಿತಿ ಸಭೆಯಲ್ಲಿ ಸುಮಾರು 285 ಜನರು ನಿವೇಶನ ಪಡೆಯಲು ಅರ್ಹರಿದ್ದಾರೆ ಎಂದು ತೀರ್ಮಾನಿಸಿ ನಿವೇಶನ ಹಂಚಿಕೆ ಮಾಡಲು ನಡೆದ ವಿಶೇಷ ಗ್ರಾಮ ಸಭೆಯಲ್ಲಿ ಫಲಾನುಭವಿಗಳಾಗಿ ಆಯ್ಕೆ ಮಾಡಲಾಗಿದೆ. ಆದರೆ, ಇದುವರೆಗೂ ನಿವೇಶನ ಹಂಚಿಕೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹುಲಿವಾನ ಗ್ರಾಮದ ಜನತಾ ಕಾಲೋನಿಯಲ್ಲಿ ಪರಿಶಿಷ್ಟರು ಹಾಗೂ ದಲಿತೇತರ 200 ಕುಟುಂಬ ವಾಸ ಮಾಡುತ್ತಿದ್ದು, ಆದರೆ, ಇಲ್ಲಿನ ಜನತೆಗೆ ಯಾರಾದರೂ ಸಾವನ್ನಪ್ಪಿದ್ದರೆ ಅಂತ್ಯಕ್ರಿಯೆ ಮಾಡಲು ಸ್ಮಶಾನ ಇಲ್ಲ. ಈಗ ಮೃತಪಟ್ಟವರನ್ನು ವಿಶ್ವೇಶ್ವರಯ್ಯ ನಾಲೆ ಜಾಗದಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತಿದೆ. ಸ್ಮಶಾನಕ್ಕೆ ಗುರುತಿಸಿದ್ದ ಜಾಗವನ್ನು ಪಟ್ಟಭದ್ರರು ಅತಿಕ್ರಮಿಸಿದ್ದು, ವಿವಾದ ನ್ಯಾಯಾಲಯದ ಮೆಟ್ಟಿಲೇರಿದೆ. ಪ್ರಕರಣ ಇತ್ಯರ್ಥಪಡಿಸಿ ಗ್ರಾಮದ ಜನರಿಗೆ ಸ್ಮಶಾನ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು.