ಜೈನ ಮುನಿಗಳ ಧರ್ಮಪ್ರಭಾವನೆಯಿಂದ ಆದರ್ಶ ಸಮಾಜ ನಿರ್ಮಾಣ: ದಿನೇಶ್‌ ಗುಂಡೂರಾವ್‌

KannadaprabhaNewsNetwork | Updated : Mar 02 2024, 03:14 PM IST

ಸಾರಾಂಶ

ಮಾ.2ರಂದು ಶನಿವಾರ ಬೆಳಗ್ಗೆ 6.30ಕ್ಕೆ ವೇಣೂರಿನಿಂದ ಯುಗಳ ಮುನಿಗಳು ವಿಹಾರ ಆರಂಭಿಸಿ ವಾಮದಪದವು, ಬಿ.ಸಿ.ರೋಡ್ ಮೂಲಕ ಮಂಗಳೂರಿಗೆ ವಿಹಾರ ಮಾಡಲಿರುವರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಜೈನರು ಅಲ್ಪಸಂಖ್ಯಾತರಾದರೂ ಜೈನರ ಜೀವನ ಶೈಲಿ, ದಿಗಂಬರ ಮುನಿಗಳ ಆಚಾರ-ವಿಚಾರ, ಆಹಾರ- ವಿಹಾರ ಮತ್ತು ಉಪದೇಶಾಮೃತಗಳು ಸಮಾಜದ ಮೇಲೆ ಗಾಢ ಪರಿಣಾಮ ಬೀರುತ್ತದೆ. 

ಧರ್ಮಪ್ರಭಾವನೆಯೊಂದಿಗೆ ಆರೋಗ್ಯಪೂರ್ಣ ಜೀವನಕ್ಕೆ ನಿರಂತರ ಪ್ರೇರಣೆ, ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡುತ್ತದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಅವರು ಶುಕ್ರವಾರ ವೇಣೂರಿನಲ್ಲಿ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದ ಭಾರತದಲ್ಲಿ ಜೈನರ ಜೀವನಶೈಲಿ, ವ್ರತ- ನಿಯಮಗಳು, ನಾಯಕತ್ವ ಗುಣ, ಪರೋಪಕಾರ ಸೇವಾ ಕಳಕಳಿ ಎಲ್ಲರಿಗೂ ಆದರ್ಶ ಹಾಗೂ ಅನುಕರಣೀಯವಾಗಿದೆ. 

ದಿಗಂಬರ ಮುನಿಗಳ ವಿಹಾರ ಮತ್ತು ಉಪದೇಶದಿಂದ ಧರ್ಮಜಾಗೃತಿ ಮತ್ತು ಧರ್ಮ ಪ್ರಭಾವನೆಯೊಂದಿಗೆ ಆದರ್ಶ ಸಮಾಜ ರೂಪುಗೊಳ್ಳುತ್ತದೆ ಎಂದ ಸಚಿವರು, ವೇಣೂರಿನಲ್ಲಿ ಮಹಾಮಸ್ತಕಾಭಿಷೇಕ ಅತ್ಯಂತ ವೈಭವದಿಂದ ಮತ್ತು ವ್ಯವಸ್ಥಿತವಾಗಿ ನಡೆದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಅಮೋಘಕೀರ್ತಿ ಮುನಿಮಹಾರಾಜರು ಮಂಗಲಪ್ರವಚನ ನೀಡಿ ಮಸ್ತಕಾಭಿಷೇಕದಿಂದ ಎಲ್ಲರಲ್ಲೂ ಅರಿಷಡ್ವರ್ಗಗಳು ದೂರವಾಗಿ ಮನಸು ಪವಿತ್ರವಾಗಿದೆ. ನವಚೈತನ್ಯ ಮೂಡಿ ಬಂದಿದೆ. 

ಮುಖದಲ್ಲಿ ಮಂದಹಾಸವಿದೆ. ಇದನ್ನು ನೋಡಿ ಬಾಹುಬಲಿ ಸ್ವಾಮಿ ಕೂಡಾ ಮಂದಸ್ಮಿತರಾಗಿ ಸಂತಸ ಪಡುತಿದ್ದಾರೆ ಎಂದು ಹೇಳಿದರು. ಧರ್ಮದ ಮರ್ಮ ಅರಿತು, ಪಾಲಿಸಿ, ಸತ್ಸಂಗದಲ್ಲಿದ್ದು ಜೀವನ ಪಾವನ ಮಾಡಬೇಕು. 

ಮೋಕ್ಷ ಮಾರ್ಗದಲ್ಲಿ ಸಾಗಬೇಕು ಎಂದು ಹೇಳಿದರು. .ವೇಣೂರು ಮಸ್ತಕಾಭಿಷೇಕವು ಐತಿಹಾಸಿಕ ದಾಖಲೆಯಾಗಿ ಸದಾ ಎಲ್ಲರ ಸ್ಮರಣೆಯಲ್ಲಿರುತ್ತದೆ, ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ದೇಶದ ಬೆನ್ನೆಲುಬು. ಆದರ್ಶ ಸಮಾಜ ಸುಧಾರಕ ಎಂದು ಶ್ಲಾಘಿಸಿ ಆಶೀರ್ವದಿಸಿದರು.

ಅಮರಕೀರ್ತಿ ಮುನಿಮಹಾರಾಜರು ಆಶೀರ್ವಚನ ನೀಡಿ ಜೈನ ಧರ್ಮದ ಪ್ರಕಾರ ಪರಿಶುದ್ಧ ಭಕ್ತಿಯಿಂದ ಮುಕ್ತಿ ಪ್ರಾಪ್ತಿಯಾಗುತ್ತದೆ. ಬಾಹುಬಲಿಯ ಜೀವನ ಮತ್ತು ಸಂದೇಶ ಆದರ್ಶ ಬದುಕಿಗೆ ಮಾರ್ಗದರ್ಶಿಯಾಗಿದೆ ಎಂದರು.

ಮೂಡುಬಿದಿರೆ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ ಮಾತನಾಡಿ, ದಾನಕ್ಕೆ ಧರ್ಮಸ್ಥಳ, ದಯೆಗೆ ಮುನಿಗಳು ಹಾಗೂ ಧರ್ಮಕ್ಕೆ ಶಾಸ್ತ್ರ ಪ್ರೇರಕ ಹಾಗೂ ಮಾರ್ಗದರ್ಶಿಯಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು, ಎಲ್ಲರೂ ಭಾವನೆಯಿಂದ ಬಾಹುಬಲಿ ಆಗಬೇಕು. ಮಸ್ತಕಾಭಿಷೇಕದ ಸವಿ ನೆನಪನ್ನು ಸದಾ ಸ್ಮರಿಸಿಕೊಂಡು ಸಾರ್ಥಕ ಹಾಗೂ ಪವಿತ್ರ ಜೀವನ ನಡೆಸಬೇಕು ಎಂದರು.

ಮಾತಾಜಿಯವರು, ಆರಿಕೆಯವರು, ರಾಜ್ಯ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್, ಮಾಜಿ ಸಚಿವ ಅಭಯಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಪ್ರತಾಪಸಿಂಹ ನಾಯಕ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ನಾಸಿಕ್‌ನ ರವೀಂದ್ರ ಪಾಟೀಲ, ಎಸ್ .ಡಿ.ಎಂ.ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಿ.ಹರ್ಷೇಂದ್ರ ಕುಮಾರ್, ಡಿ.ಸುರೇಂದ್ರ ಕುಮಾರ್, ದ.ಕ.ಜಿಲ್ಲಾ ಕೇಂದ್ರ ಸಹಕಾರಿ‌ ಬ್ಯಾಂಕ್‌ ಅಧ್ಯಕ್ಷ ಎಂ.ಎನ್.ರಾಜೇಂದ್ರಕುಮಾರ್, ಮಹಾಮಸ್ತಕಾಭಿಷೇಕ ಸಮಿತಿ ಕೋಶಾಧಿಕಾರಿ ಜಯರಾಜ ಕಂಬಳಿ ಉಪಸ್ಥಿತರಿದ್ದರು.

ಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷ ಡಾ. ಪದ್ಮಪ್ರಸಾದ ಅಜಿಲ ಸ್ವಾಗತಿಸಿದರು, ಕಾರ್ಯದರ್ಶಿ ವಿ.ಪ್ರವೀಣ್ ಕುಮಾರ್ ಇಂದ್ರ ವಂದಿಸಿದರು. ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರ್ವಹಿಸಿದರು. 

ಸನ್ಮಾನ: ವೇಣೂರು ಕ್ಷೇತ್ರಕ್ಕೆ ವಿವಿಧ ರೀತಿಯಲ್ಲಿ ಕೊಡುಗೆ ನೀಡಿದ ಸಚಿವ ಡಿ.ಸುಧಾಕರ್, ಉದ್ಯಮಿಗಳಾದ ಸನತ್ ಕುಮಾರ್, ಮಹಾಪದ್ಮಪ್ರಸಾದ್, ರವೀಂದ್ರ ಪಾಟೀಲ್ ನಾಸಿಕ್ ಅವರನ್ನು ಗೌರವಿಸಲಾಯಿತು. ಎಂಜಿನಿಯರ್ ಸಂದೀಪ್ ಜೈನ್, 18 ಲಕ್ಷ ರು. ವೆಚ್ಚದಲ್ಲಿ ಶೌಚಾಲಯ ನಿರ್ಮಿಸಿದ ಎಂ.ಆರ್.ಪಿ.ಎಲ್.ನ ವಿಭಾಗೀಯ ಮುಖ್ಯ ಪ್ರಬಂಧಕ‌ ಸ್ವಾಮಿ ಪ್ರಸಾದ್, ರಾಜ್ಯ ಸರ್ಕಾರದಿಂದ 4 ಕೋಟಿ ರು. ನೆರವನ್ನು ಒದಗಿಸಿದ ಮಾಜಿ ಸಚಿವ ಅಭಯಚಂದ್ರ ಜೈನ್, ಮಹಾಮಸ್ತಕಾಭಿಷೇಕ‌ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಡಾ. ಪದ್ಮಪ್ರಸಾದ ಅಜಿಲರನ್ನು ಹಾಗೂ ಪ್ರಧಾನ‌ ಕಾರ್ಯದರ್ಶಿ ಪ್ರವೀಣಚಂದ್ರ ಜೈನ್ ಅವರನ್ನು ಸನ್ಮಾನಿಸಲಾಯಿತು.ಯುಗಳ ಮುನಿಗಳ ವಿಹಾರ ಇಂದಿನಿಂದ

ಮಾ.2ರಂದು ಶನಿವಾರ ಬೆಳಗ್ಗೆ 6.30ಕ್ಕೆ ವೇಣೂರಿನಿಂದ ಯುಗಳ ಮುನಿಗಳು ವಿಹಾರ ಆರಂಭಿಸಿ ವಾಮದಪದವು, ಬಿ.ಸಿ.ರೋಡ್ ಮೂಲಕ ಮಂಗಳೂರಿಗೆ ವಿಹಾರ ಮಾಡಲಿರುವರು.

Share this article