ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸಂಜೆ 4 ಗಂಟೆ ವೇಳೆಗೆ ನಗರದ ಬಸವೇಶ್ವರ ಮೈದಾನದಿಂದ ಎರಡು ಪ್ರತ್ಯೇಕ ಮಾರ್ಗದ ಘೋಷ ಪಥಸಂಚಲನಗಳು ಹೊರಟವು. ಪ್ರತಿ ಮಾರ್ಗದಲ್ಲಿ ತಲಾ ಮೂರು ಘೋಷ್ ವಾಹಿನಿಗಳಿದ್ದವು. ಪಥಸಂಚಲನ ಕಣ್ತುಂಬಿಕೊಳ್ಳಲು ಸುತ್ತಮುತ್ತಲಿನ ಊರುಗಳಿಂದ ಭಾರೀ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು. ನಗರದಾದ್ಯಂತ ಕೇಸರಿ ಕಮಾನುಗಳು, ಬಂಟಿಂಗ್ಸ್, ಫ್ಲೆಕ್ಸ್ ಗಳು ಗಮನಸೆಳೆದವು. ಪಥಸಂಚಲನ ಆಗಮಿಸುವ ಮಾರ್ಗದಲ್ಲಿ ಮಹಿಳೆಯರು ರಂಗೋಲಿ ಬಿಡಿಸಿ ಪಥಸಂಚಲನ ಸ್ವಾಗತಿಸಿದರು. ಕ್ರಾಂತಿಕಾರಿಗಳ ವೇಷಭೂಷಣದಲ್ಲಿ ಮಕ್ಕಳು ಮಿಂಚಿದರು.
ಎರಡು ಮಾರ್ಗಗಳ ಪಥಸಂಚಲನ ಮುಖಾಮುಖಿಯಾಗುವ ಸನ್ನಿವೇಶ ಕಣ್ತುಂಬಿಕೊಳ್ಳಲು ಭಾರೀ ಸಂಖ್ಯೆಯಲ್ಲಿ ಜನ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ್ದರು. ವೃತ್ತದ ಸುತ್ತಲಿರುವ ಬೃಹತ್ ಕಟ್ಟಡಗಳುದ್ದಕ್ಕೂ ಜನರ ದಂಡು ಕಂಡು ಬಂದಿತು. ಜನ ಪಥಸಂಚಲನದ ಮಧ್ಯೆ ಬಾರದಂತೆ ತಡೆಯಲು ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು.ಎಸ್ಪಿ ಸಿದ್ದಾರ್ಥ ಗೋಯಲ್, ಎಎಸ್ಪಿ ಎಂ.ಜಗದೀಶ, ಡಿವೈಎಸ್ಪಿ ಗಜಾನನ ಸುತಾರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.
ಮಾರ್ಗ-2ರ ಪಥಸಂಚಲನ ಬಸವೇಶ್ವರ ಕಾಲೇಜು ಮೈದಾನ, ಸಾಸನೂರ ಪೆಟ್ರೋಲ್ ಬಂಕ್, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ದುರ್ಗಾ ವಿಹಾರ ವೃತ್ತ, ಶಾಂತಿನಗರ ಕ್ರಾಸ್, ಹಳೆ ಐಬಿ, ಹರಣಶಿಖಾರಿ ಗಲ್ಲಿ, ವಾಸವಿ ಚಿತ್ರ ಮಂದಿರ, ದುರ್ಗಾ ನಗರ ಕ್ರಾಸ್, ಶಾರದಾ ಲಾಡ್ಜ್, ಹೊಳೆ ಆಂಜನೇಯ ದೇವಸ್ಥಾನ, ಬಸವೇಶ್ವರ ವೃತ್ತದ ಮೂಲಕ ಸಾಗಿ ಬಸವೇಶ್ವರ ಮೈದಾನದಲ್ಲಿ ಸಮಾವೇಶಗೊಂಡಿತು.
ಸಂಸದರಾದ ಪಿ.ಸಿ.ಗದ್ದಿಗೌಡರ, ನಾರಾಯಣಸಾ ಭಾಂಡಗೆ, ಮಾಜಿ ಶಾಸಕ, ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ, ವಿಧಾನ ಪರಿಷತ್ತಿನ ಸದಸ್ಯ ಪಿ.ಎಚ್.ಪೂಜಾರ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ. ಪಾಟೀಲ, ಜಿಲ್ಲಾ ಸಂಘಚಾಲಕ ಚಂದ್ರಶೇಖರ ದೊಡ್ಡಮನಿ, ನಿಕಟಪೂರ್ವ ಜಿಲ್ಲಾ ಸಂಘಚಾಲಕ ಸಿ.ಎಸ್.ಪಾಟೀಲ ಇತರರು ಪಥಸಂಚಲನ ವೀಕ್ಷಿಸಿದರು.