ಸಾರ್ವಜನಿಕರ ಸಂಪರ್ಕವಿಲ್ಲದೆ ಹಾಳುಬಿದ್ದ ಉದ್ಯಾನವನ
ಕನ್ನಡಪ್ರಭ ವಾರ್ತೆ ಹನುಮಸಾಗರ
ಗ್ರಾಮದಲ್ಲಿ ಕೋಟ್ಯಂತರ ಅನುದಾನದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಿ ಎರಡು ವರ್ಷಗಳು ಕಳೆದರೂ ಉದ್ಘಾಟನೆಯ ಭಾಗ್ಯ ಕಂಡಿಲ್ಲ. ಇದು ಕ್ರೀಡಾಪಟುಗಳಲ್ಲಿ ನಿರಾಸಕ್ತಿ ಮೂಡಿಸಿದೆ.ಕಲ್ಯಾಣ ಕರ್ನಾಟಕ ವಿಶೇಷ ಅನುದಾನದ ₹೧ ಕೋಟಿ ವೆಚ್ಚದಲ್ಲಿ ನ. ೨೦೨೧ರಲ್ಲಿ ಅಂದಿನ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಒಳಾಂಗಣ ಕ್ರೀಡಾಂಗಣದ ಭೂಮಿಪೂಜೆ ನೆರೆವೇರಿಸಿ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿದರು. ಇದನ್ನು ನಿರ್ಮಿತಿ ಕೇಂದ್ರದವರು ಗುತ್ತಿಗೆ ಪಡೆದಿದ್ದರು. ಈ ಮೊದಲು ಎಲ್ಲ ಕಾಮಗಾರಿ ಸಂಪೂರ್ಣ ಮುಗಿದಿತ್ತು. ಇನ್ನೇನು ಉದ್ಘಾಟನೆ ನೆರೆವೇರಿಸಬೇಕು ಎನ್ನುವಷ್ಟರಲ್ಲಿ ಕಳಪೆಮಟ್ಟದಾಗಿದೆ, ಮಳೆಗಾಲದಲ್ಲಿ ಸೋರುತ್ತಿದೆ ಎಂಬ ಆರೋಪ ಕ್ರೀಡಾಭಿಮಾನಿಗಳಿಂದ ಕೇಳಿ ಬಂತು. ಸದ್ಯ ಅದನ್ನು ದುರಸ್ತಿಗೊಳಿಸಿ ಯಾವುದೇ ರೀತಿಯ ತೊಂದರೆಯಾಗದಂತೆ ಎಲ್ಲ ಕೆಲಸ ಪೂರ್ಣಗೊಳಿಸಲಾಗಿದೆ.
ಏನೇನಿದೆ:ಗ್ರಾಮದ ಕನ್ನೂರು ಲೇಔಟ್‌ನಲ್ಲಿ ಗ್ರಾಪಂ ಸಾರ್ವಜನಿಕರಿಗೆ ಕಾಯ್ದಿರಿಸಿದ ನಿವೇಶನದಲ್ಲಿ ಜಂಪ್ ರೋಪ್ ಸಂಸ್ಥೆಗೆ ಒಳಾಂಗಣಕ್ರೀಡಾಂಗಣ ನಿರ್ಮಿಸಲು ನಿವೇಶನ ನೀಡಿದೆ. ಇದರಲ್ಲಿ ೨ ಶಟಲ್ ಬ್ಯಾಡ್ಮಿಂಟನ್, ೧ ಟೇಬಲ್ ಟೆನಿಸ್, ಜಂಪ್ ರೂಪ್, ಮೂತ್ರಾಲಯ, ಶೌಚಾಲಯ ಕೊಠಡಿ, ಮಹಿಳಾ ಹಾಗೂ ಪುರುಷ ಕ್ರೀಡಾ ಪಟುಗಳಿಗೆ ಡ್ರೇಸಿಂಗ್ ರೂಮ್ ಸೇರಿದಂತೆ ಮೂಲಸೌಲಭ್ಯದ ವ್ಯವಸ್ಥೆ ಕಲ್ಪಿಸಲಾಗಿದೆ.ಗ್ರಾಪಂಯಿಂದ ಉದ್ಯಾನವನ:ಕ್ರೀಡಾಪಟುಗಳಿಗೆ ಕ್ರೀಡೆಯ ನಂತರ ವಿಶ್ರಾಂತಿ ಪಡೆಯಲು, ವಾಯು ವಿಹಾರಕ್ಕೆ ಅನಕೂಲವಾಗಲಿ ಎನ್ನುವ ಉದ್ದೇಶದಿಂದ ನರೇಗಾ ಯೋಜನೆಯಡಿಯಲ್ಲಿ ಅಂದಾಜು ₹೬ ಲಕ್ಷ ವೆಚ್ಚದಲ್ಲಿ ಉದ್ಯಾನವನ ನಿರ್ಮಿಸಿದ್ದಾರೆ. ಅದರಲ್ಲಿ ಕ್ರೀಡಾಪಟುಗಳಿಗೆ ಹಾಗೂ ಸಾರ್ವಜನಿಕರಿಗೆ ಸಿಮೆಂಟಿನ ವಾಕಿಂಗ್ ಪಾತ್‌ನ್ನು (ನೆಲದ ಹಾಸು ಬಂಡೆ) ಹಾಕಲಾಗಿದ್ದು, ಜತೆಗೆ ಅರ್ಧಕ್ಕೆ ಮಾತ್ರ ತಂತಿ ಬೇಲಿ ಹಾಕಲಾಗಿದೆ. ಆದಷ್ಟು ಬೇಗನೆ ಉದ್ಘಾಟನೆಗೊಂಡರೆ, ಸಾರ್ವಜನಿಕರಿಗೆ, ಕ್ರೀಡಾಪಟುಗಳಿಗೆ ಅನುಕೂಲವಾಗುತ್ತದೆ. ಕೋಟ್ಯಂತರ ವೆಚ್ಚದ ಕ್ರೀಡಾಂಗಣ ಮತ್ತು ಉದ್ಯಾನವನ ರಕ್ಷಿಸಿದಂತಾಗುತ್ತದೆ ಎಂಬ ಮಾತುಗಳು ಕ್ರೀಡಾಪಟುಗಳು ಹಾಗೂ ಸಾರ್ವಜನಿಕರಿಂದ ಕೇಳಿಬರುತ್ತಿದೆ.