ಕನ್ನಡಪ್ರಭ ವಾರ್ತೆ ಮೈಸೂರುಮೈಸೂರಿನ ಕುವೆಂಪುನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಅಕ್ಷಯ ದಾಸೋಹ ಯೋಜನೆಗೆ ಶನಿವಾರ ಶಾಸಕ ಟಿ.ಎಸ್. ಶ್ರೀವತ್ಸ ಚಾಲನೆ ನೀಡಿದರು.ಕಾಲೇಜು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರೂ ಆದ ಶಾಸಕ ಟಿ.ಎಸ್. ಶ್ರೀವತ್ಸ, ಸಮಿತಿಯ ಸದಸ್ಯರು, ಪ್ರಾಂಶುಪಾಲರು, ಪ್ರಾಧ್ಯಾಪಕರು, ಅಧ್ಯಾಪಕೇತರರೇ ಸೇರಿ ಈ ಯೋಜನೆಗೆ ವೈಯಕ್ತಿಕವಾಗಿ ದೇಣಿಗೆ ನೀಡಿರುವುದು ವಿಶೇಷ. ಇಸ್ಕಾನ್‌ನ ಅಕ್ಷಯ ಪಾತ್ರೆ ಯೋಜನೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಅವರು ಮಧ್ಯಾಹ್ನದ ಊಟ ಪೂರೈಸುವರು. ನಗರ ಪ್ರದೇಶದವರಲ್ಲದ, ಹಾಸ್ಟೆಲ್‌ಗಳಲ್ಲಿ ವಾಸಸದ, ಗ್ರಾಮೀಣ ಪ್ರದೇಶದಿಂದ ಬರುವ 80 ಹೆಣ್ಣು ಮಕ್ಕಳನ್ನು ಮೊದಲ ಹಂತದಲ್ಲಿ ಯೋಜನೆಗೆ ಆಯ್ಕೆ ಮಾಡಲಾಗಿದೆ. ಈ ರೀತಿ ಸರ್ಕಾರಿ ಪದವಿ ಕಾಲೇಜಿನಲ್ಲಿ ವೈಯಕ್ತಿಕವಾಗಿ ದೇಣಿಗೆ ನೀಡಿ, ಇಸ್ಕಾನ್‌ಜೊತೆ ಒಪ್ಪಂದ ಮಾಡಿಕೊಂಡು ಮಧ್ಯಾಹ್ನದ ಊಟ ಪೂರೈಸುತ್ತಿರುವುದು ಇಡೀ ರಾಜ್ಯದಲ್ಲಿಯೇ ಇದೇ ಮೊದಲ ಪ್ರಕರಣ ಎಂದು ಹೇಳಲಾಗುತ್ತಿದೆ.ಸಾಮಾನ್ಯವಾಗಿ ಎಲ್ಲಾ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರೇ ಸಂಖ್ಯೆ ಹೆಚ್ಚಿರುತ್ತದೆ. ಆದರೆ ಈ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಕಡಿಮೆ ಇದೆ. ಅಲ್ಲದೇ ಈ ಕಾಲೇಜಿಗೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಂದ ಬರುವ ವಿದ್ಯಾರ್ಥಿಗಳೇ ಹೆಚ್ಚು. ಕೊಠಡಿಗಳ ಕೊರತೆ ಇರುವುದರಿಂದ ಪಾಳಿಯಲ್ಲಿ ತರಗತಿಗಳನ್ನು ನಡೆಸಲಾಗುತ್ತದೆ. ಹೀಗಾಗಿ ಬೆಳಗ್ಗೆ 8 ಗಂಟೆಗೆ ತರಗತಿ ಇದ್ದಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳು ಬೆಳಗ್ಗೆ 6ಕ್ಕೆ ಮನೆಯಿಂದ ಹೊರಟಿರುತ್ತಾರೆ. ಎಷ್ಟೋ ಮಂದಿ ಬೆಳಗಿನ ಉಫಾಹಾರ ಮಾಡಿರುವುದಿಲ್ಲ. ಮಧ್ಯಾಹ್ನದ ಊಟವನ್ನು ಮಾಡುವುದಿಲ್ಲ. ಇದನ್ನು ಅರಿತ ಪ್ರಾಂಶುಪಾಲ ಡಾ.ಪುಟ್ಟರಾಜ ಅವರು ತಮ್ಮ ಕಾಲೇಜಿನ ಅದ್ಯಾಪಕರು, ಅಧ್ಯಾಪಕೇತರರ ಬಳಿ ಸಮಾಲೋಚಿಸಿ, ವೈಯಕ್ತಿಕ ದೇಣಿಗೆ ಮೂಲಕ ಮಧ್ಯಾಹ್ನದ ಊಟ ಯೋಜನೆ ಆರಂಭಿಸಬಹುದೇ ಎಂದು ಕೇಳಿದರು. ಇದಕ್ಕೆ ಎಲ್ಲರೂ ಸಮ್ಮತಿಸಿದರು. ನಂತರ ಶಾಸಕರ ಅಧ್ಯಕ್ಷತೆಯ ಸಿಡಿಸಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು. ಅಲ್ಲಿಯೂ ಒಪ್ಪಿಗೆ ಸಿಕ್ಕಿತು.ಹೀಗಾಗಿ ಮೊದಲ ಹಂತದಲ್ಲಿ ಗ್ರಾಮೀಣ ಪ್ರದೇಶದಿಂದ ಬರುವ 80 ವಿದ್ಯಾರ್ಥಿನಿಯರಿಗೆ ಮಧ್ಯಾಹ್ನದ ಊಟ ಪೂರೈಸುವ ಯೋಜನೆ ರೂಪಿಸಲಾಯಿತು. ಸರ್ಕಾರಿ ಕಾಲೇಜುಗಳಲ್ಲಿ ಈ ರೀತಿ ಆಹಾರ ಪೂರೈಸಬೇಕಾದರೆ ಗುಣಮಟ್ಟದ ಪರೀಕ್ಷೆ ನಡೆಯಬೇಕು. ಇಸ್ಕಾನ್‌ನ ಅಕ್ಷಯ ಫೌಂಡೇಷನ್‌ಈಗಾಗಲೇ ರಾಜ್ಯದ ವಿವಿಧೆಡೆ ಶಾಲೆಗಳಿಗೆ ಮಧ್ಯಾಹ್ನದ ಊಟ ಪೂರೈಸುತ್ತಿರುವುದರಿಂದ ಅವರೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಈ ಸೆಮಿಸ್ಟರ್‌ಗೆ ಆಗುವಷ್ಟು ಹಣವನ್ನು ಪಾವತಿಸಿದ್ದು, ಮಧ್ಯಾಹ್ನ ಒಂದು ಗಂಟೆಗೆ ಅವರು ಊಟ ಪೂರೈಸುವರು. ಸರದಿಯಂತೆ ಪ್ರಾಧ್ಯಾಪಕರ ಉಸ್ತುವಾರಿಯಲ್ಲಿ ತರಗತಿ ಪ್ರತಿನಿದಿಗಳ ನೇತೃತ್ವದಲ್ಲಿ ಆಯ್ದ ವಿದ್ಯಾರ್ಥಿನಿಯರಿಗೆ ಊಟ ವಿತರಿಸಲಾಗುತ್ತದೆ.ಈ ಸಂಬಂಧ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಟಿ,ಎಸ್. ಶ್ರೀವತ್ಸ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಪ್ರಾಂಶುಪಾಲ ಡಾ. ಪುಟ್ಟರಾಜು, ಸಿಡಿಸಿ ಸದಸ್ಯರಾದ ಲಖನ್‌ನಾಯಕ್, ಜಗದೀಶ್, ಡಾ. ಅಶ್ವಿನಿ, ರಮೇಶ್, ಲಿಂಗಣ್ಣ ಮಾತನಾಡಿದರು. ಐಕ್ಯೂಎಸಿ ಸಂಚಾಲಕ ಮುರಳಿ, ಪತ್ರಾಂಕಿತ ವ್ಯವಸ್ಥಾಪಕ ಎಂ. ವಿದ್ಯಾರಣ್ಯ, ಲಯನ್‌ವಿಶ್ವನಾಥ್, ಮನೋಜ್‌ಮೊದಲಾದವರು ಇದ್ದರು. ರಚನಾ ಪ್ರಾರ್ಥಿಸಿದರು. ಡಾ.ಪಿ.ಬೆಟ್ಟೇಗೌಡ ಸ್ವಾಗತಿಸಿದರು. ಡಾ.ಗುರುಸ್ವಾಮಿ ನಿರೂಪಿಸಿದರು.--ಬಾಕ್ಸ್....ಶೀಘ್ರ ಕ್ಯಾಂಟೀನ್ ಸೌಲಭ್ಯಕುವೆಂಪುನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶೀಘ್ರ ಕ್ಯಾಂಟೀನ್‌ಸೌಲಭ್ಯ ಕಲ್ಪಿಸಲಾಗುವುದು. ಜೊತೆಗೆ ಸಿಡಿಸಿ ಸದಸ್ಯರ ಜೊತೆ ಸೇರಿ ಮಧ್ಯಾಹ್ನದ ಊಟ ಯೋಜನೆಯನ್ನು ಇತರರಿಗೂ ಯಾವ ರೀತಿ ವಿಸ್ತರಿಸಬೇಕು ಎಂಬ ಬಗ್ಗೆ ಆಲೋಚಿಸಲಾಗುವುದು. ಬೇರೆ ಬೇರೆ ಸಂಸ್ಥೆಗಳು ವೃದ್ಧರಿಗೆ ಹಾಗೂ ನಿರಾಶ್ರಿತರಿಗೆ ನೀಡುತ್ತಿರುವ ಸೌಲಭ್ಯವನ್ನು ಕಡಿಮೆ ಮಾಡಿ ವಿದ್ಯಾರ್ಥಿ ವೇತನವನ್ನು ಹೆಚ್ಚಿಸುವಂತೆ ಕೋರಲಾಗಿದೆ. ವಿದ್ಯಾರ್ಥಿಗಳು ಚೆನ್ನಾಗಿ ಓದಿ, ಉದ್ಯೋಗ ಸಂಪಾದಿಸಿ ಹಿರಿಯರನ್ನು ಚೆನ್ನಾಗಿ ನೋಡಿಕೊಂಡರೆ ವೃದ್ಧಾಶ್ರಮಗಳು, ನಿರಾಶ್ರಿತರು ಇರುವುದಿಲ್ಲ. ಆ ರೀತಿಯಾಗಬೇಕು ಎಂಬುದು ನನ್ನ ಆಶಯ..
ಟಿ.ಎಸ್.ಶ್ರೀವತ್ಸ, ಶಾಸಕ--
ಸರ್ಕಾರವೇ ಯೋಜನೆ ರೂಪಿಸಲಿ- ಡಾ. ಪುಟ್ಟರಾಜಪ್ರಾಥಮಿಕ ಶಾಲೆಯಿಂದ ಹಿಡಿದು ಪ್ರೌಢಶಾಲೆವರೆಗೆ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುತ್ತಿರುವ ರಾಜ್ಯ ಸರ್ಕಾರ ಪಿಯುಸಿ ಹಾಗೂ ಪದವಿ ಹಂತದಲ್ಲಿಯೂ ಮಧ್ಯಾಹ್ನದ ಊಟ ನೀಡುವ ಯೋಜನೆ ರೂಪಿಸಬೇಕು. ಇದರಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಅದರಲ್ಲೂ ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಶಾಸಕ ಟಿ.ಎಸ್. ಶ್ರೀವತ್ಸ ಅವರು ಈ ವಿಷಯವನ್ನು ವಿಧಾನಮಂಡಲದ ಅಧಿವೇಶನದಲ್ಲಿ ಪ್ರಸ್ತಾಪಿಸಿ, ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಗಮನ ಸೆಳೆಯಬೇಕು.- ಡಾ.ಪುಟ್ಟರಾಜ, ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುವೆಂಪುನಗರ