-ಕಕಜವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಕೃಷ್ಣೇಗೌಡ ಕೇಶ ಮುಂಡನ ಮಾಡಿಸಿಕೊಂಡು ಆಕ್ರೋಶ ಕನಕಪುರ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಕ್ರಮವನ್ನು ಖಂಡಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಕಾವೇರಿ ನೀರಿಗೆ ತಮಿಳುನಾಡು ಮುಖ್ಯಮಂತ್ರಿ ಸ್ಟ್ಯಾಲಿನ್ ಅಸ್ತಿಕೆ ಬಿಟ್ಟು ವಿನೂತನ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಯೋಗೀಶ್ ಗೌಡ ನೇತೃತ್ವದಲ್ಲಿ ಸಂಗಮದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಕೃಷ್ಣೇಗೌಡ ಕೇಶ ಮುಂಡನ ಮಾಡಿಸಿಕೊಂಡು ಹಿಂದೂ ಸಂಪ್ರದಾಯದಂತೆ ತಮಿಳುನಾಡು ಮುಖ್ಯಮಂತ್ರಿ ಸ್ಟ್ಯಾಲಿನ್ ಅಸ್ತಿಕೆ ಬಿಟ್ಟು ಶ್ರದ್ಧಾಂಜಲಿ ಸಲ್ಲಿಸಿದರು. ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಯೋಗೀಶ್ ಗೌಡ ಮಾತನಾಡಿ, ರಾಜ್ಯದಲ್ಲಿ ಮಳೆ ಕೊರತೆಯಿಂದ ಜಲಾಶಯಗಳು ಬರಿದಾಗಿದೆ. ನಮ್ಮ ರಾಜ್ಯದ ಜನ ಜಾನುವಾರುಗಳಿಗೆ ಕುಡಿಯುವ ನೀರಿಗೂ ಪರದಾಡುವಂತಾಗಿದೆ. ಆದಾಗ್ಯೂ ತಮಿಳುನಾಡು ಸರ್ಕಾರ ಕರ್ನಾಟಕದ ಜನರಿಗೆ ಕುಡಿಯುವ ನೀರು ಇಲ್ಲದಿದ್ದರೂ ಸರಿ ಅಲ್ಲಿನ ರೈತರ ಕೃಷಿಗೆ ನೀರು ಬಿಡುವಂತೆ ಒತ್ತಡ ಹಾಕಿ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ತಮಿಳುನಾಡು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು. ರಾಜ್ಯದಲ್ಲಿ ವಾಡಿಕೆಯಷ್ಟು ಮಳೆಯಾಗಿದೆ. ರಾಜ್ಯ ಸರ್ಕಾರ ಬಹುತೇಕ ತಾಲೂಕುಗಳನ್ನ ಬರಪೀಡಿತ ಎಂದು ಘೋಷಣೆ ಮಾಡಿ ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವ ಕ್ರಮ ಸರಿಯಲ್ಲ. ನೀರು ಬಿಡುವುದನ್ನು ನಿಲ್ಲಿಸಬೇಕು. ಜಲ ಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಅವರಿಗೆ ಖಾತೆ ನಿರ್ವಹಿಸಿ ರಾಜ್ಯದ ಜನರ ಹಿತ ಕಾಯಲು ಸಾಮರ್ಥ್ಯವಿಲ್ಲದಿದ್ದರೆ ಬೇರೆಯವರಿಗೆ ಖಾತೆ ಬಿಟ್ಟು ಕೊಡಬೇಕು. ಇಲ್ಲದಿದ್ದರೆ ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ ಉಗ್ರ ರೂಪ ತಾಳುತ್ತದೆ ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಕೃಷ್ಣೇಗೌಡ ಪದಾಧಿಕಾರಿಗಳಾದ ಶ್ಯಾಮ್, ಸುರೇಶ್, ಅಜಯ್, ರವಿ ಸೇರಿದಂತೆ ವೇದಿಕೆ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕೆ ಕೆ ಪಿ ಸುದಿ 01; ಕಾವೇರಿ ನೀರು ಹರಿಸುತ್ತಿರುವ ಕ್ರಮವನ್ನು ಖಂಡಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕೃಷ್ಣೆಗೌಡ ಸ್ಟ್ಯಾಲಿನ್ ಅಸ್ತಿಕೆ ಬಿಟ್ಟು ವಿನೂತನ ಪ್ರತಿಭಟನೆ ನಡೆಸಿದರು.