ಶಿವಾನಂದ ಮಹಾಬಲಶೆಟ್ಟಿ
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಯಲು ಬಹಿರ್ದೆಸೆ ಮುಕ್ತ ದೇಶವಾಗಿಸುವ ನಿಟ್ಟಿನಲ್ಲಿ ಸ್ವಚ್ಛ ಭಾರತ ಅಭಿಯಾನ ಹಮ್ಮಿಕೊಂಡು ಕೋಟ್ಯಂತರ ಅನುದಾನ ನೀಡುತ್ತಿದೆ. ಆದರೆ, ಬಿಜೆಪಿಯೇ ಆಡಳಿತದಲ್ಲಿರುವ ರಬಕವಿ-ಬನಹಟ್ಟಿ ನಗರಸಭೆಯ ವಾರ್ಡ್ ನಂ.17ರಲ್ಲಿ ಮಹಿಳೆಯರಿಗೆ ಇಂದಿಗೂ ಬಯಲು ಜಾಗವೇ ಬಹಿರ್ದೆಸೆಗೆ ಆಸರೆಯಾಗಿದ್ದು, ನಗರಕ್ಕೆ ಕಪ್ಪುಚುಕ್ಕೆಯಾಗಿದೆ.ರಬಕವಿಯ ಸಾಬೋಜಿ ಲೇನ್‌ನಲ್ಲಿನ ಬಸವ್ವಾಯಿ ದಡ್ಡಿ ಎಂದೇ ಖ್ಯಾತಿಯ ಮಹಿಳೆಯರ ಬಯಲು ಶೌಚಪ್ರದೇಶ ೬ ದಶಕಗಳಿಂದಲೂ ಬಳಕೆಯಲ್ಲಿದ್ದು, 30-40 ಅಡಿ ಅಗಲ, 80ಕ್ಕೂ ಅಧಿಕ ಅಡಿ ಉದ್ದದ ಬಯಲು ಜಾಗ ವಾರ್ಡನ ಮುತ್ತೂರ ಗಲ್ಲಿ, ಮಟ್ಟಿಕಲ್ಲಿ ಲೇನ್, ಯಾತಗೇರಿ ಲೇನ್, ಗಿಡವೀರ ಲೇನ್ ಪ್ರದೇಶಗಳ ಮಹಿಳೆಯರಿಗೆ ಬಹಿರ್ದೆಸೆಗೆ ಈ ಇದೇ ಆಸರೆಯಾಗಿದೆ.
ನಾಗರಿಕರ ನರಕಯಾತನೆ:೬ ದಶಕಗಳ ಕಾಲ ಪರಿಸರದ ವಿನಾಶಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಈ ಬಯಲುಶೌಚ ತಾಣ ತನ್ನ ದುರ್ನಾತದಿಂದ ಸುತ್ತಲಿನ ಯಾತಗೇರಿ ಲೇನ್, ಮಟ್ಟಿಕಲ್ಲಿ ಲೇನ್, ಸಾಬೋಜಿ ಲೇನ್ ಮತ್ತು ಅಗಸಿಓಣಿ ಪ್ರದೇಶಗಳ ಜನತೆಗೆ ನಿತ್ಯ ನರಕವನ್ನೇ ಸೃಷ್ಟಿಸುತ್ತಿದೆ. ಇಷ್ಟೊಂದು ಸಮಸ್ಯೆಯಿದ್ದರೂ ನಗರಸಭೆ ಅಧಿಕಾರಿಗಳ ಗಮನಕ್ಕೆ ಬಾರದಿರುವುದು ದುರಂತವಾಗಿದೆ.
ವಾರ್ಡ್ ನಂ.೧೭ರಲ್ಲಿ ಸಾರ್ವಜನಿಕ ಶೌಚಾಲಯಗಳೇ ಇಲ್ಲ. ಅಗಸಿಓಣಿ, ಹರಿಜನ ಕೇರಿ ಪ್ರದೇಶಗಳ ಮಹಿಳೆಯರಿಗೆ ತ್ರಿಶಲಾದೇವಿ ಕಣ್ಣಿನ ಆಸ್ಪತ್ರೆಯ ಹಿಂಭಾಗದಲ್ಲಿನ ವಿಶಾಲ ಪ್ರದೇಶದಲ್ಲಿ ಬಯಲುಶೌಚಕ್ಕೆ ವ್ಯವಸ್ಥೆ ಮಾಡಲಾಗಿದೆ. ಆದರೂ ಅಲ್ಲಿನ ರಸ್ತೆಯನ್ನು ಖಾಸಗಿಯವರು ಮುಚ್ಚಿರುವುದರಿಂದ ಮಹಿಳೆಯರು ಬಹಿರ್ದೆಸೆಗೆ ತೆರಳಲು ಆಗುತ್ತಿಲ್ಲ. ಹರಿಜನ ಕೇರಿ ಬಳಿಯಲ್ಲಿ ಮಹಿಳೆಯರಿಗೆ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿದೆಯಾದರೂ ನೀರು, ಬೆಳಕಿಲ್ಲದೆ ಪಾಳು ಬಿದ್ದಿದೆ.
ನಗರಕ್ಕೆ ಕಪ್ಪುಚುಕ್ಕಿಯಾಗಿರುವ ಬಸವ್ವಾಯಿ ದಡ್ಡಿಯನ್ನು ಬಯಲು ಶೌಚಮುಕ್ತಗೊಳಿಸಲು ಈ ಜಾಗದ ಕೋಟೆಗೋಡೆಯ ಹಿಂದೆಯೇ ನೂತನವಾಗಿ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯಕ್ಕೆ ಹೋಗಲು ಈಗಾಗಲೇ ೮೦- ೩೦ ಅಡಿ ಅಗಲದಲ್ಲಿ ಸಿಸಿ ಹಾಕಿದ ಜಾಗವನ್ನೇ ರಸ್ತೆಯನ್ನಾಗಿಸಿ ಶೌಚಾಲಯಕ್ಕೆ ನೀರು, ವಿದ್ಯುತ್ ಸಂಪರ್ಕ ನೀಡಿದಲ್ಲಿ ಮಹಿಳೆಯರು ನಿರಾತಂಕವಾಗಿ ಶೌಚಾಲಯಕ್ಕೆ ಹೋಗಲು ಸಾಧ್ಯವಾಗಲಿದ್ದು, ಬಯಲು ಬಹಿರ್ದೆಶೆಯ ಅನಿಷ್ಠಕ್ಕೂ ಅಂತ್ಯ ಹಾಡಬಹುದಾಗಿದೆ.
ವಾರ್ಡ್ ನಂ.೧೭ರಲ್ಲಿ ಶೌಚಾಲಯಗಳ ಕೊರತೆ ಹೊರತುಪಡಿಸಿದರೆ ಉಳಿದ ಎಲ್ಲ ಸೌಕರ್ಯಗಳೂ ಇವೆ. ನಗರಸಭೆಯ ಸದಸ್ಯರು ಮತ್ತು ಅಧಿಕಾರಿಗಳು ಈ ಕಡೆಗೆ ಗಮನ ಹರಿಸಿ ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಬೇಕಿದೆ. ಅಗಸಿಓಣಿ, ಕಡಾಲಕಟ್ಟಿ, ಹರಿಜನ ಕೇರಿ ಪ್ರದೇಶಗಳ ಮಹಿಳೆಯರಿಗೆ ಈಗಿರುವ ಬಯಲುಶೌಚ ಜಾಗೆಗಳಲ್ಲೇ ಶೌಚಾಲಯ ನಿರ್ಮಿಸಲು ಸಾಧ್ಯವಿದೆ.
-ಪರಪ್ಪ ಉಮದಿ ನಾಗರಿಕರು ರಬಕವಿವಾರ್ಡನಲ್ಲಿ ಶೌಚಾಲಯ ಸಮಸ್ಯೆಯ ನಿವಾರಣೆಗೆ ಈಗಾಗಲೇ ಕ್ರಿಯಾಯೋಜನೆ ರೂಪಿಸಲಾಗಿದೆ. ಬಸವ್ವಾಯಿ ದಡ್ಡಿಗೆ ತೆರಳುವ ಮಹಿಳೆಯರ ಅನುಕೂಲತೆಗೆ ಹಿಂಬದಿಯಲ್ಲಿನ ಶೌಚಾಲಯವನ್ನು ಮುಕ್ತಗೊಳಿಸಲಾಗುತ್ತದೆ. ಅಲ್ಲಿ ಪ್ರಖರ ಬೆಳಕು ಮತ್ತು ನೀರಿನ ಸೌಕರ್ಯ ಕಲ್ಪಿಸಲು ಮತ್ತು ಬೈಪಾಸ್ ರಸ್ತೆ ಅಕ್ಕಪಕ್ಕದಲ್ಲಿ ಬಯಲುಶೌಚ ತಡೆಯಲು ಪುರುಷರ ಶೌಚಾಲಯ ನಿರ್ಮಿಸಲು ಉದ್ದೇಶಿಸಲಾಗಿದೆ. ಪೌರಾಯುಕ್ತರು ಮತ್ತು ಅಧಿಕಾರಿಗಳೊಡನೆ ಸ್ಥಳ ವೀಕ್ಷಣೆ ಮಾಡಲಾಗಿದ್ದು, ಆಯವ್ಯದಲ್ಲಿ ಅನುದಾನ ಪಡೆದುಕೊಂಡು ಶೀಘ್ರ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ.