ಕನ್ನಡಪ್ರಭ ವಾರ್ತೆ ಹಾನಗಲ್ಲ
ಜನರ ಹತ್ತಿರಕ್ಕೆ ಆಡಳಿತ ಒಯ್ಯುವ ವಿಶೇಷ ಪ್ರಯತ್ನವಾದ ಜನಸ್ಪಂದನ ಕಾರ್ಯಕ್ರಮದಿಂದ ಬಹುತೇಕ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ದೊರೆಯುವ ಸದವಕಾಶವಾಗಿದ್ದು, ಇದರ ಸದುಪಯೋಗವಾಗಲಿ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.ಸೋಮವಾರ ಹಾನಗಲ್ಲ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ಜಿಲ್ಲಾಡಳಿತ ಹಾಗೂ ಹಾನಗಲ್ಲ ತಾಲೂಕು ಆಡಳಿತ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.೪೦ ವರ್ಷಗಳಿಂದ ತಾಲೂಕಿನಲ್ಲಿ ನನೆಗುದಿಗೆ ಬಿದ್ದ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗಿದೆ. ಕಂದಾಯ ಗ್ರಾಮ ಘೋಷಣೆ, ಹಕ್ಕು ಪತ್ರ ನೀಡುವುದು, ಮನೆಗಳಿಗೆ ಪರಿಹಾರ, ಹೊಸ ಮನೆಗಳ ಆಯ್ಕೆ ಸೇರಿದಂತೆ ಜನರಿಗೆ ಅನುಕೂಲವಾಗುವ ಕೆಲಸಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಮೊದಲನೆಯದಾಗಿ ಕಂದಾಯ ಇಲಾಖೆಯ ದಾಖಲೆಗಳ ಡಿಜಟಲೀಕರ ಪ್ರಕ್ರಿಯೆ ಇನ್ನು ೩ ತಿಂಗಳಲ್ಲಿ ಅಂತ್ಯಗೊಳ್ಳಲಿದ್ದು, ಅತ್ಯಂತ ಸುಲಭವಾಗಿ ಜನರಿಗೆ ದಾಖಲೆಗಳು ಸಿಗಲಿವೆ. ೫ ಸಾವಿರ ಹಕ್ಕುಪತ್ರ ನೀಡಲು ಪಟ್ಟಿ ಮಾಡಲಾಗಿದೆ. ರೈತರ ಜಮೀನಿನ ದಾರಿಗಳ ಸಮಸ್ಯೆ ಬಹುದೊಡ್ಡದಾಗಿದೆ. ಇದು ರೈತರ ಸಹಕಾರದಿಂದ ಮಾತ್ರ ಬಗೆಹರಿಯಲು ಸಾಧ್ಯ. ಆದರೆ ರೈತರ ಜಮೀನಿಗೆ ಬಿತ್ತನೆಗಾಗಿ ಹಾಗೂ ಪೈರು ಬಂದಾಗ ಫಸಲು ತರಲು ಅಡೆತಡೆ ಮಾಡುವಂತಿಲ್ಲ. ಶಾಶ್ವತ ಪರಿಹಾರಕ್ಕಾಗಿ ಅಲ್ಲಿರುವ ರೈತರು ಜಮೀನು ಬಿಟ್ಟುಕೊಟ್ಟು ಅದು ಕಂದಾಯ ಇಲಾಖೆಯಲ್ಲಿ ದಾಖಲಾದರೆ ಮಾತ್ರ ಅದನ್ನು ಶಾಶ್ವತ ದಾರಿ ಮಾಡಲಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿಗಳಿಗೆ ಸಾರ್ವಜನಿಕರು ಕರ ಕಟ್ಟುತ್ತಿಲ್ಲ. ಇದು ಗ್ರಾಮದ ಅಭಿವೃದ್ಧಿ ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಹಿನ್ನಡೆ. ನಾನು ನಿಮ್ಮ ಸೇವೆಗೆ ಬದ್ಧ. ನಿಮ್ಮ ಸಹಕಾರ ಅತ್ಯಂತ ಮುಖ್ಯ ಎಂದರು.
ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಮಾತನಾಡಿ, ರಾಜ್ಯ ಸರ್ಕಾರದ ನಿರ್ದೇಶನದಲ್ಲಿ ಸ್ಥಳದಲ್ಲಿಯೇ ಅರ್ಜಿ ಸ್ವೀಕರಿಸಿ ಸಮಸ್ಯೆ ಪರಿಹರಿಸುವ ಅತ್ಯಂತ ಉತ್ತಮ ಯೋಜನೆ ಜನಸ್ಪಂದವಾಗಿದೆ. ಹೆಚ್ಚೆಂದರೆ ೧೫ ದಿನಗಳಲ್ಲಿ ಅರ್ಜಿದಾರರಿಗೆ ಹಿಂಬರಹ ನೀಡಲಾಗುವುದು. ಇಲ್ಲಿ ವಿವಿಧ ಇಲಾಖೆಗಳ ೮೩ ಅರ್ಜಿಗಳು ದಾಖಲಾಗಿವೆ. ಬೆಳೆ ಹಾನಿ ವಿಷಯದಲ್ಲಿ ಕೂಡಲೇ ಎಲ್ಲ ಕ್ರಮ ಜರುಗಿಸಲಾಗಿದೆ. ಎಲ್ಲ ನ್ಯೂನ್ಯತೆಗಳನ್ನು ಸರಿಪಡಿಸಲು ನಾವು ಸಿದ್ಧ. ಯಾರಿಗೂ ತೊಂದರೆಯಾಗದಂತೆ ಕ್ರಮ ಜರುಗಿಸಲಾಗುವುದು. ಎಲ್ಲ ಅರ್ಜಿಗಳನ್ನು ೧೫ ದಿನಗಳೊಳಗಾಗಿ ಪರಿಹಾರ ಮಾಡಲು ಎಲ್ಲ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.ತಾಲೂಕಿನ ವೈದ್ಯಕೀಯ ಇಲಾಖೆಯಲ್ಲಿ ಔಷಧಿ ಕೊರತೆ ಇದೆ. ಆದ್ದರಿಂದ ಫಾಗಿಂಗ್ ಸಮಸ್ಯೆಯಾಗಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಸ್.ದೇವರಾಜ ತಿಳಿಸಿದರು. ಔಷಧಿ ಸಮಸ್ಯೆ ಇಲ್ಲ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಲಿಂಗರಾಜ ತಿಳಿಸುತ್ತಾರೆ. ಇಲಾಖೆಗಳ ನಡುವೆ ಇಲ್ಲದ ಹೊಂದಾಣಿಕೆ ಕಾರಣ ಇಂತಹ ಡೆಂಘೀ ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ತಾಲೂಕಿನಲ್ಲಿ ಡೆಂಘೀ ಪ್ರಕರಣಗಳಿರುವಲ್ಲಿಯೂ ಸರಿಯಾದ ರೀತಿ ಫಾಗಿಂಗ್ ಸೇರಿದಂತೆ ಆರೋಗ್ಯ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ದೂರುಗಳಿವೆ. ತಾಲೂಕು ಆಸ್ಪತ್ರೆಯಲ್ಲಿ ೬೯ ಜ್ವರ ಪೀಡಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ತಾಲೂಕಿನ ೫ ಡೆಂಘೀ ಪೀಡಿತರು ಹುಬ್ಬಳ್ಳಿ, ಸಿರ್ಸಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾನಗಲ್ಲ ಸರಕಾರಿ ಆಸ್ಪತ್ರೆಯಲ್ಲಿ ೧೪ ಜನರಿಗೆ ಡೆಂಘೀ ಸಂಶಯಾಸ್ಪದ ಚಿಕಿತ್ಸೆ ನೀಡಲಾಗುತ್ತಿರುವುದು ತಿಳಿದು ಬಂದಿದೆ.
ತಾಲೂಕಿನಲ್ಲಿ ೩೪ ಸಾವಿರ ಕಾರ್ಮಿಕ ಕಾರ್ಡ್ ರದ್ದು ಮಾಡಲಾಗಿದೆ. ನಿಜವಾದ ಕಾರ್ಮಿಕರಿಗೆ ಕಾರ್ಮಿಕ ಕಾರ್ಡ್ ಇಲ್ಲ. ಬೆಳವತ್ತಿ ಹುಣಸೀಕಟ್ಟಿ ಗ್ರಾಮದಲ್ಲಿ ೩೨ ಎಕರೆ ಹುಲ್ಲುಗಾವಲು ಸಮಸ್ಯೆ ಇನ್ನೂ ಪರಿಹಾರವಾಗಿಲ್ಲ. ಅದರಲ್ಲಿ ೧೬ ಎಕರೆ ಮಾತ್ರ ಹುಲ್ಲುಗಾವಲು ಎನ್ನಲಾಗುತ್ತಿದೆ. ಅದನ್ನು ಕೂಡ ಹೂಡಿ ಹೊಲ ಮಾಡಲಾಗುತ್ತಿದೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕೆಲಸವಾಗಿಲ್ಲ. ಈಗ ಮತ್ತೆ ಮನವಿ ಅರ್ಪಿಸಿದ್ದೇವೆ ಎಂದು ಗ್ರಾಮಸ್ಥರು ದೂರಿದರು. ಬೆಳಗಿನ ೧೧ ಗಂಟೆಯಿಂದ ಮಧ್ಯಾಹ್ನ ೩ರ ವರೆಗೆ ನಡೆದ ಜನಸ್ಪಂದನೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳ ಜನರು ಅರ್ಜಿ ಹಿಡಿದು ನಿಂತು ತಮ್ಮ ಅಹವಾಲು ತೋಡಿಕೊಂಡರು. ಶಾಸಕರು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಅರ್ಜಿ ಪಡೆಯುವುದು ಮುಗಿಯುವವರೆಗೆ ಸ್ಥಳದಲ್ಲಿದ್ದು ಸಮಸ್ಯೆ ಪರಿಹಾರದ ಭರವಸೆ ನೀಡಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಸೋಮಶೇಖರ ಮುಳ್ಳಳ್ಳಿ, ಜಿಲ್ಲಾ ಪಂಚಾಯತ್ ಸಿಇಒ ಅಕ್ಷಯ ಶ್ರೀಧರ, ಜಿಲ್ಲಾ ಯೋಜನಾ ನಿರ್ದೇಶಕಿ ಮಮತಾ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ. ಎಚ್. ಉಮೇಶಪ್ಪ, ಸವಣೂರು ಉಪವಿಭಾಗಾಧಿಕಾರಿ ಮಹಮ್ಮದ್ ಖಿಜರ್, ತಹಸೀಲ್ದಾರ್ ಎಸ್. ರೇಣುಕಮ್ಮ, ಗ್ರಾಪಂ ಉಪಾಧ್ಯಕ್ಷೆ ಅಕ್ಕಮ್ಮ, ಡಿವೈಎಸ್‌ಪಿ ಮಂಜುನಾಥ, ಜಿಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.