ದಾವಣಗೆರೆ : ಹನಿಟ್ರ್ಯಾಪ್ ಬಗ್ಗೆ ನಮ್ಮ ಅಧ್ಯಕ್ಷರು ಹೇಳಿದ್ದಾರಲ್ಲ. ಹಲೋ ಅಂದರೆ ಹಲೋ ಅಂತಾರೆ. ಹಲೋ ಅನ್ನದೇ ಯಾರೋ ಯಾಕೆ ಹಲೋ ಅನ್ನುತ್ತಾರೆ? ಯಾರೋ ಹಲೋ ಅಂದಿರಬೇಕು, ಹಂಗಾಗಿ ಹಲೋ ಆಗಿರಬೇಕು ಎಂದು ಚನ್ನಗಿರಿ ಶಾಸಕ ಬಸವರಾಜ ವಿ. ಶಿವಗಂಗಾ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ಏನೇ ಆದರೂ ಡಿ.ಕೆ.ಶಿವಕುಮಾರ ಹೆಸರು ಎಳೆದು ತರುವುದೇ ಆಗುತ್ತಿದೆ. ಏನೇ ಆದರೂ ಡಿಸಿಎಂ, ಏನೇ ಆದರೂ ಕೆಪಿಸಿಸಿ ಅಧ್ಯಕ್ಷರು ಎನ್ನುವಂತಾಗಿದೆ ಎಂದರು.
ನಾನು ಚಿಕ್ಕವರಿದ್ದಾಗ ಒಂದು ಮಾತು ಕೇಳಿದ್ದೆ. ಹಿಂದೆ ಒಂದು ಮಾತು ಹೇಳುತ್ತಿದ್ದರು. ಗೌಡ್ರೆ, ಗೌಡರೆ ನಿಮ್ಮ ಮಗನಿಗೆ ಗಂಡುಮಗು ಆಗಿದೆಯೆಂದರೆ, ಏ ಅದು ನಮ್ದಲ್ಲ, ನಮ್ದಲ್ಲ. ಅದೆಲ್ಲಾ ವಿಪಕ್ಷದವರ ಕೈವಾಡ ಅಂದಿದ್ದರಂತೆ. ಹಾಗಾಗಿದೆ. ಮಾತೆತ್ತಿದರೆ ಡಿ.ಕೆ.ಶಿವಕುಮಾರ ಕಾಣ್ತಾರೆ. ರೈಸಿಂಗ್ ಜಾಸ್ತಿಯಾಗಿದ್ದರೆ ಅಂತಹವರ ಹೆಸರು ಬರುವುದು ಸಹಜ ಎಂದು ತಿಳಿಸಿದರು.
ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳುವುದಿಲ್ಲ. ಸರಿಯಾಗಿದ್ದರೆ ತನಿಖೆಗೆ ಕೊಡಲಿ. ಅಧ್ಯಕ್ಷರೇ ಹೇಳಿದ್ದಾರಲ್ಲ ತನಿಖೆ ಮಾಡಿ, ತನಿಖೆಗೆ ಕೊಡಿ ಅಂತಾ. ಇವರೆಲ್ಲಾ ಸರಿಯಾಗಿದ್ದರೆ ತನಿಖೆಗೆ ಕೊಡಲಿ. ಇಷ್ಟು ದಿನ ಯಾಕೆ ಮೀನ, ಮೇಷ ಎಣಿಸುತ್ತಿದ್ದಾರೆ. ಯಾರು ಮಾಡಿದ್ದಾರೋ ಅಂತಹವರೆಲ್ಲಾ ಲಾಕ್ ಆಗುತ್ತಾರೆ. ತನಿಖೆ ಮಾಡಲಿ ಬಿಡಿ, ಯಾರು ಏನು ಅಂತಾ ಗೊತ್ತಾಗುತ್ತದೆ ಎಂದು ಶಾಸಕರು ಹೇಳಿದರು.
ಬಹಳ ಕನಸ್ಸುಗಳನ್ನು ಇಟ್ಟುಕೊಂಡು ರಾಜಕಾರಣಕ್ಕೆ ಬಂದವನು ನಾನು. ಈಗ ಆಗುತ್ತಿರುವ ಬೆಳವಣಿಗೆ ನೋಡಿದರೆ ರಾಜಕಾರಣದ ಬಗ್ಗೆಯೇ ಬೇಸರವಾಗುತ್ತಿದೆ. ಯಾಕಾದರೂ ರಾಜಕೀಯಕ್ಕೆ ಬಂದಿದ್ದೇವೋ ಎನಿಸುತ್ತಿದೆ. ಹನಿಟ್ರ್ಯಾಪ್ ಎನ್ನುವುದು ಒಬ್ಬರಿಗೊಬ್ಬರು ತಂದಿಡುವುದಾಗಿದೆ. ಮೇಲ್ಮನೆ ಸಭಾಪತಿ ಬಸವರಾಜ ಹೊರಟ್ಟಿ ರಾಜೀನಾಮೆ ಕೊಡುತ್ತೇನೆಂದಿದ್ದರು. ಹೊರಟ್ಟಿ ಅವರೇ ಹಾಗೆ ಹೇಳಿದ್ದಾರೆ, ನಾನು ಹೇಳಿಲ್ಲ ಅಷ್ಟೇ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ರಾಜಕಾರಣಿಗಳು ಸಹ ಮನುಷ್ಯರೇ ಎಂಬುದನ್ನು ಅರ್ಥ ಮಾಡಿಕೊಳ್ಳುವುದೇ ಇಲ್ಲ. ಕಟ್ಟಿ ಹಾಕುವುದಷ್ಟೇ. ಮನೆ, ಮಠ ಬಿಟ್ಟು ನಾವು ಕೆಲಸ ಮಾಡುತ್ತೇವೆ. 3 ವಾರದಿಂದ ಹೆಂಡತಿ, ಮಕ್ಕಳು, ಮನೆ ಬಿಟ್ಟು, ಕೆಲಸ ಮಾಡುತ್ತಿದ್ದೇವೆ. 24*7 ಕೆಲಸ ಮಾಡುತ್ತೇವೆ. ಇಂತಹದ್ದರಲ್ಲಿ ಹನಿಟ್ರ್ಯಾಪ್, ತಂದಿಡುವುದನ್ನೆಲ್ಲಾ ನೋಡಿದರೆ ಯಾಕಾದರೂ ರಾಜಕೀಯಕ್ಕೆ ಬಂದೆವೋ ಎನಿಸುತ್ತದೆ ಎಂದು ಅವರು ತಿಳಿಸಿದರು.
ಮುಂದಿನ ದಿನಗಳಲ್ಲಿ ಹನಿಟ್ರ್ಯಾಪ್ ಬಗ್ಗೆಯೇ ಸದನದಲ್ಲಿ ಚರ್ಚೆ ಇಡಬೇಕು. ಹನಿಟ್ರ್ಯಾಪ್‌ಗೆ ಮೊದಲು ಕಡಿವಾಣ ಹಾಕಬೇಕಿದೆ. ಸುಗ್ರೀವಾಜ್ಞೆ ಮೂಲಕವಾದರೂ ಹನಿಟ್ರ್ಯಾಪ್‌ಗೆ ಅಂತ್ಯ ಹಾಡಬೇಕಿದೆ. ಮುಂದಿನ ದಿನಗಳಲ್ಲಿ ರಾಜಕಾರಣ ತುಂಬಾ ಕಷ್ಟವಾಗಲಿದೆ. ಅಧಿವೇಶನ ವೀಕ್ಷಣಗೆ ಗ್ಯಾಲರಿಯಲ್ಲಿ ಕಾಲೇಜು ಮಕ್ಕಳು ಬಂದಿರುತ್ತಾರೆ. ಅದೇ ಮಕ್ಕಳು ಸಹ ಹನಿಟ್ರ್ಯಾಪ್ ಮಾಡಿ, ಶಿಕ್ಷಕರಿಂದ ಮಾರ್ಕ್ಸ್ ಹಾಕಿಸಿಕೊಳ್ಳಬಹುದು ಎನ್ನುವ ಮೂಲಕ ಹನಿಟ್ರ್ಯಾಪ್‌ನ ಅಪಾಯದ ಬಗ್ಗೆ ಸೂಕ್ಷ್ಮವಾಗಿ ಬಸವರಾಜ ಶಿವಗಂಗಾ ಎಚ್ಚರಿಸಿದರು.
ಕೋಟ್ ಸದನದಲ್ಲಿ ಸಚಿವರೊಬ್ಬರು ತಾವು ಸತ್ಯ ಹರಿಶ್ಚಂದ್ರನೂ ಅಲ್ಲ, ಶ್ರೀರಾಮಚಂದ್ರನೂ ಅಲ್ಲ ಅಂತಾ ಸ್ವತಃ ಹೇಳಿಕೊಂಡಿದ್ದಾರೆ. ಹಾಗೆ ಸ್ವತಃ ಸಚಿವರೇ ಹೇಳಿಕೊಂಡಿದ್ದಾರೆಂದರೆ ಅದರ ಅರ್ಥವೇನು? ಹನಿಟ್ರ್ಯಾಪ್ ಆಗಿದ್ದಾರೆಂದೇ ಅರ್ಥವಲ್ಲವೇ?
- ಬಸವರಾಜ ವಿ.ಶಿವಗಂಗಾ, ಕಾಂಗ್ರೆಸ್ ಶಾಸಕ. ಚನ್ನಗಿರಿ ಕ್ಷೇತ್ರ