ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು
ರೈತಾಪಿ ವರ್ಗದಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ಪಾದಯಾತ್ರೆಯುದ್ದಕ್ಕೂ ವಿವಿಧೆಡೆ ರೈತರು, ಸಾರ್ವಜನಿಕರು ಹಾಗೂ ರೈತಪರ ಸಂಘಟನೆಗಳು ಕೈಜೋಡಿಸುತ್ತಿರುವುದು ಹೋರಾಟಕ್ಕೆ ಮತ್ತಷ್ಟು ಬಲ ತುಂಬಿದೆ.ಪಾದಯಾತ್ರೆಯ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಚೂನಪ್ಪ ಪೂಜೇರಿ, ಕೇಂದ್ರ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಅಗತ್ಯವಿದೆ. ಈ ಹೋರಾಟಕ್ಕೆ ರೈತಾಪಿ ವರ್ಗದಿಂದ ಅಭೂತಪೂರ್ವ ಬೆಂಬಲ ದೊರೆಯುತ್ತಿದ್ದು, ಎಲ್ಲೆಡೆ ಉತ್ತಮ ಸಹಕಾರ ವ್ಯಕ್ತವಾಗುತ್ತಿದೆ ಎಂದರು.
ಪಾದಯಾತ್ರೆ ಧಾರವಾಡ ಜಿಲ್ಲೆಯ ತೇಗೂರು ಗ್ರಾಮಕ್ಕೆ ತೆರಳಿ ಅಲ್ಲಿ ವಾಸ್ತವ್ಯ ಮಾಡಲಿದೆ. ತೇಗೂರು ಗ್ರಾಮಕ್ಕೆ ಬೆಳಗಾವಿ ಹಾಗೂ ಧಾರವಾಡ ಜಿಲ್ಲಾಧಿಕಾರಿಗಳು ಭೇಟಿ ನೀಡಲಿದ್ದು, ಅವರು ಯಾವ ಸಂದೇಶವನ್ನು ಹೊತ್ತು ತರಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ ಎಂದರು.ಶನಿವಾರ ಸಂಜೆ ಕಿತ್ತೂರು ಪಟ್ಟಣಕ್ಕೆ ಆಗಮಿಸಿದ ರೈತರಿಗೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಚನ್ನಮ್ಮಾಜಿ ವೃತ್ತದ ಸಮೀಪದ ಚನ್ನಮ್ಮಾಜಿ ಸಭಾಭವನದಲ್ಲಿ ಊಟೋಪಚಾರ ಹಾಗೂ ವಾಸ್ತವ್ಯಕ್ಕೆ ಅಚ್ಚುಕಟ್ಟಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಶಾಸಕ ಬಾಬಾಸಾಹೇಬ ಪಾಟೀಲ ಅವರು ಈ ವ್ಯವಸ್ಥೆಗಳ ಉಸ್ತುವಾರಿ ವಹಿಸಿದ್ದರು.ಶನಿವಾರ ರಾತ್ರಿ ಮಸಾಲೆ ರೈಸ್ ಹಾಗೂ ಸಾಂಬಾರ್ ವ್ಯವಸ್ಥೆ ಮಾಡಲಾಗಿತ್ತು. ಭಾನುವಾರ ಬೆಳಗ್ಗೆ ಚಿತ್ರಾನ್ನ, ಚೌಚೌಬಾತ್ ಹಾಗೂ ಮಸಾಲೆ ಚುರುಮುರಿ ನೀಡಲಾಯಿತು. ಮಧ್ಯಾಹ್ನ ಜೋಳದ ಖಡಕ್ ರೊಟ್ಟಿ, ಸಜ್ಜಿ ರೊಟ್ಟಿ, ಮಿಶ್ರ ಪಲ್ಯ ಹಾಗೂ ಅನ್ನ-ಸಾಂಬಾರ್ ವ್ಯವಸ್ಥೆ ಮಾಡಲಾಗಿತ್ತು. ರೈತರಿಗೆ ಕಲ್ಪಿಸಿದ ಈ ಅಚ್ಚುಕಟ್ಟಾದ ಆತಿಥ್ಯಕ್ಕೆ ಹೋರಾಟಗಾರರು ಸಂತಸ ವ್ಯಕ್ತಪಡಿಸಿದರು.ಸುಗಮ ಸಂಚಾರ: ಭಾನುವಾರ ಬೆಳಗ್ಗೆಯಿಂದ ಸಂಜೆ 4 ಗಂಟೆಯವರೆಗೆ ಕಿತ್ತೂರು ಪಟ್ಟಣ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸುಗಮವಾಗಿತ್ತು. ಪಟ್ಟಣದಾದ್ಯಂತ ಹಸಿರು ಶಾಲು ಹೊದ್ದ ರೈತರು ಕಂಡುಬಂದರು. ರೈತರ ಒಗ್ಗಟ್ಟು, ಉತ್ಸಾಹ ಹಾಗೂ ಸಂಭ್ರಮದಿಂದ ಪಟ್ಟಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.ಭಾನುವಾರ ಸಂಜೆ 4 ಗಂಟೆಗೆ ಪಾದಯಾತ್ರೆ ಪುನರಾರಂಭಗೊಳ್ಳುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಬೆಳಗಾವಿಯಿಂದ ಧಾರವಾಡದತ್ತ ತೆರಳುವ ಮಾರ್ಗವನ್ನು ಪೊಲೀಸರು ತಕ್ಷಣ ಬಂದ್ ಮಾಡಿ, ಬಳಿಕ ಒಂದೇ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು.ರೈತರ ಹೋರಾಟಕ್ಕೆ ಕಿತ್ತೂರು ಪಟ್ಟಣ ಆತ್ಮೀಯ ಆತಿಥ್ಯ ನೀಡಿತು. ಪಟ್ಟಣದ ಯುವಕರ ತಂಡ ಸ್ವಯಂಪ್ರೇರಿತವಾಗಿ ವಾಸ್ತವ್ಯದ ಸ್ಥಳಕ್ಕೆ ತೆರಳಿ ಊಟೋಪಚಾರ ಸೇರಿದಂತೆ ವಿವಿಧ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿತು. ದೂರದ ಊರುಗಳಿಂದ ಆಗಮಿಸಿದ ರೈತರಿಗೆ ಯಾವುದೇ ತೊಂದರೆಯಾಗದಂತೆ ಯುವಕರು ತೋರಿದ ಕಾಳಜಿ ಗಮನ ಸೆಳೆಯಿತು.ರೈತರ ಜಾನಪದ ಕಲೆಗಳ ಅನಾವರಣ: ಭಾನುವಾರ ಬೆಳಗ್ಗೆಯಿಂದಲೇ ರೈತ ಹೋರಾಟಗಾರರ ಮುಖದಲ್ಲಿ ಮಂದಹಾಸ ಮೂಡಿತ್ತು. ಹೋರಾಟದ ನಡುವೆಯೂ ರೈತರು ತಮ್ಮಲ್ಲಿರುವ ವಿವಿಧ ಕಲೆಗಳನ್ನು ಪ್ರದರ್ಶಿಸಿ ಗಮನ ಸೆಳೆದರು. ಬಾರಕೋಲು ಹೊಡೆಯುವುದು, ಜಾನಪದ ಗೀತೆಗಳ ಗಾಯನ ಹಾಗೂ ಎತ್ತಿನ ಬಂಡಿಗಳ ಮೆರವಣಿಗೆಯಂತಹ ಗ್ರಾಮೀಣ ಸಂಸ್ಕೃತಿಯ ಸೊಗಡು ಪಾದಯಾತ್ರೆಗೆ ವಿಶೇಷ ಮೆರುಗು ನೀಡಿತು.ಪಾದಯಾತ್ರೆಯಲ್ಲಿ ಮಹಿಳಾ ರೈತರ ದೊಡ್ಡ ತಂಡವೇ ಪಾಲ್ಗೊಂಡಿತ್ತು. ಪಾದಯಾತ್ರೆ ಆರಂಭವಾಗುತ್ತಿದ್ದಂತೆ ಮಹಿಳೆಯರು ಗ್ರಾಮೀಣ ಸೊಗಡಿನ ವಿವಿಧ ಜಾನಪದ ಹಾಡುಗಳನ್ನು ಹಾಡುತ್ತ ಹೆಜ್ಜೆ ಹಾಕಿದರು. ಮಹಿಳಾ ರೈತರ ಸಕ್ರಿಯ ಪಾಲ್ಗೊಳ್ಳುವಿಕೆ ಹೋರಾಟಕ್ಕೆ ಮತ್ತಷ್ಟು ಉತ್ಸಾಹ ತುಂಬಿತು.ಹೋರಾಟಕ್ಕೆ ಹರಿದುಬಂದ ದೇಣಿಗೆ: ಕಬ್ಬು ಬೆಳೆಗಾರರ ಹೋರಾಟಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಹೋರಾಟಗಾರರ ನೆರವಿಗಾಗಿ ಹಣಕಾಸಿನ ಸಹಾಯದ ಜತೆಗೆ ಆಹಾರ ಪದಾರ್ಥಗಳ ದೇಣಿಗೆಯೂ ಹರಿದುಬರುತ್ತಿದೆ.ಹೋರಾಟದಲ್ಲಿ ಪಾಲ್ಗೊಂಡ ರೈತರಿಗೆ ರೊಟ್ಟಿ, ಖಾರ, ಚಟ್ನಿ, ಅಂಬಲಿ ಹಾಗೂ ವಿವಿಧ ಆಹಾರ ಪದಾರ್ಥಗಳನ್ನು ಸಾರ್ವಜನಿಕರು ಮತ್ತು ರೈತಪರ ಹೋರಾಟಗಾರರು ತಂದು ನೀಡುತ್ತಿದ್ದಾರೆ. ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ ರೈತಪರ ಸಂಘಟನೆಗಳ ಮುಖಂಡರು ಹಾಗೂ ರೈತರು ಲಕ್ಷಾಂತರ ರೂಪಾಯಿ ದೇಣಿಗೆ ನೀಡಿದ್ದಾರೆ. ಮಹಿಳಾ ರೈತರು ಸಾವಿರಾರು ಖಡಕ್ ರೊಟ್ಟಿಗಳು ಸೇರಿದಂತೆ ವಿವಿಧ ಖಾದ್ಯಗಳನ್ನು ತಂದು ಹೋರಾಟಗಾರರಿಗೆ ನೆರವಾಗಿದ್ದಾರೆ.ಇನ್ನು ಪಾದಯಾತ್ರೆ ಸಾಗುವ ಮಾರ್ಗದಲ್ಲಿನ ಗ್ರಾಮಗಳಲ್ಲಿ ಮಹಿಳೆಯರು ರೈತ ಮುಖಂಡರಿಗೆ ಆರತಿ ಎತ್ತಿ, ವಿಜಯ ತಿಲಕವಿಟ್ಟು ಆಶೀರ್ವದಿಸುತ್ತಿರುವುದು ಹೋರಾಟಕ್ಕೆ ದೊರೆಯುತ್ತಿರುವ ಜನಬೆಂಬಲದ ಸಂಕೇತವಾಗಿ ಕಂಡುಬಂದಿದೆ.ರೈತರ ಒಗ್ಗಟ್ಟು, ಜನರ ಸಹಕಾರ ಹಾಗೂ ಗ್ರಾಮೀಣ ಸಂಸ್ಕೃತಿಯ ಸೊಗಡಿನೊಂದಿಗೆ ಕಿತ್ತೂರಿನಿಂದ ಧಾರವಾಡದತ್ತ ಸಾಗುತ್ತಿರುವ ಪಾದಯಾತ್ರೆ, ಕಬ್ಬು ಬೆಳೆಗಾರರ ಬೇಡಿಕೆಗಳ ಈಡೇರಿಕೆಯ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.