ಜಿಲ್ಲೆಯಾದ್ಯಂತ ಭಾರೀ ಮಳೆ । ಹಳ್ಳ, ಕೊಳ್ಳಗಳು ಸಂಪೂರ್ಣ ಭರ್ತಿ । ಕೊಚ್ಚಿ ಹೋಗುತ್ತಿದ್ದ ವಾಹನ ರಕ್ಷಿಸಿದ ಯುವಕರು, ಜೆಸ್ಕಾಂ ನೌಕರರು ಪಾರುಕನ್ನಡಪ್ರಭ ವಾರ್ತೆ ಹೊಸಪೇಟೆ
ಬೈಲುವದ್ದಿಗೆರಿ ಗ್ರಾಮದ ಬಳಿಯ ರೈಲ್ವೆ ನಿಲ್ದಾಣದ ಬಳಿ ವಿದ್ಯುತ್ ಕಾಮಗಾರಿಗಾಗಿ 4-5 ನೌಕರರು ಆಗಮಿಸಿದ್ದರು. ನೀರಿನ ರಭಸಕ್ಕೆ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ವಾಹನವನ್ನು ಯುವಕರು ರಕ್ಷಿಸಿದ್ದಾರೆ. ಇನ್ನು ತಾಲೂಕಿನ ವಡ್ಡರಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡದ್ದರಿಂದ ಹಳ್ಳ ತುಂಬಿ ರೈತರ ಜಮೀನುಗಳಿಗೆ ನೀರು ನುಗ್ಗುತ್ತಿದೆ ಎಂದು ಸ್ಥಳೀಯ ರೈತರು ದೂರಿದ್ದಾರೆ.
ಜಿಲ್ಲೆಯ ಕೊಟ್ಟೂರು, ಕೂಡ್ಲಿಗಿ, ಹೊಸಪೇಟೆ ಸೇರಿದಂತೆ ವಿವಿಧೆಡೆ ಭಾರೀ ಮಳೆ ಸುರಿದಿದ್ದು, ಕೃತಿಕ ಮಳೆಯ ಹೊಡೆತಕ್ಕೆ ಹಳ್ಳ, ಕೊಳ್ಳಗಳು ಸಂಪೂರ್ಣ ಭರ್ತಿಯಾಗಿವೆ. ಮಳೆಯ ರೌದ್ರ ನರ್ತನಕ್ಕೆ ಜನರು ಥಂಡಾ ಹೊಡೆದಿದ್ದಾರೆ.ಇನ್ನು ಒಂದು ವಾರಗಳ ಕಾಲ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅರೆಂಜ್ ಅಲರ್ಟ್ ಅನ್ನು ಹವಾಮಾನ ಇಲಾಖೆ ಘೋಷಿಸಿದೆ.
ಹೊಸಪೇಟೆ ತಾಲೂಕಿನ ಜಿ. ನಾಗಲಾಪುರ, ಬ್ಯಾಲಕುಂದಿ ಗ್ರಾಮದ ನಡುವಿನ ಹಳ್ಳದಲ್ಲಿ ಹಸುವೊಂದು ಕೊಚ್ಚಿಕೊಂಡು ಹೋಗಿದೆ. ಈ ಹಳ್ಳ ದಾಟಲು ರೈತರು ಕೂಡ ಪರದಾಡುತ್ತಿದ್ದಾರೆ. ಇನ್ನೂ ಹರಪನಹಳ್ಳಿಯ ಹುಲಿಕಟ್ಟೆ ಗ್ರಾಮದ ರೈತ ನಾಗರಾಜಪ್ಪರ ಎತ್ತು ಸಿಡಿಲು ಬಡಿದು ಮೃತಪಟ್ಟಿದೆ.ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕು ದಸಮಾಪುರ ಗ್ರಾಮದಲ್ಲಿ ಸುರಿದ ಭಾರೀ ಮಳೆಯಿಂದ ಹಗರಿಬೊಮ್ಮನಹಳ್ಳಿಯಿಂದ ಕೂಡ್ಲಿಗಿ ರಸ್ತೆಯಲ್ಲಿ ಬರುವ ಹಿರೇಹಳ್ಳ ತುಂಬಿ ಹರಿಯುತ್ತಿದೆ. ಈ ಹಳ್ಳ ದಾಟಲು ರೈತರು ಪರದಾಡುವಂತಾಗಿದೆ. ಜಿಲ್ಲೆಯಲ್ಲಿ 24 ಗಂಟೆಯಲ್ಲಿ 1.8 ಮಿಮೀ ಮಳೆಯಾಗಿದ್ದು, 11.3 ಮಿಮೀ ಮಳೆಯಾಗಿದೆ.