ಕಾರ್ಗಿಲ್ ಎಂದೂ ಮರೆಯದ ಅವಿಸ್ಮರಣೀಯ ದಿನ

KannadaprabhaNewsNetwork | Published : Aug 3, 2024 12:31 AM

ಸಾರಾಂಶ

ಕಾರ್ಗಿಲ್ ವಿಜಯದಿನ ಭಾರತೀಯರು ಎಂದೂ ಮರೆಯದ ಅವಿಸ್ಮರಣೀಯ ದಿನವಾಗಿದೆ.

ಬಳ್ಳಾರಿ: ಇಲ್ಲಿನ ಶೆಟ್ರಗುರುಶಾಂತಪ್ಪ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಕಲಾಸಂಗಮ ಸಾಂಸ್ಕೃತಿಕ ಸಂಸ್ಥೆಯ ದಶಮಾನೋತ್ಸವ ಸಂಭ್ರಮ ಹಾಗೂ 25ನೇ ಕಾರ್ಗಿಲ್ ವಿಜಯದಿವಸ ಅಂಗವಾಗಿ "ರಾಷ್ಟ್ರದೇವೋಭವ " ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ್, ಕಾರ್ಗಿಲ್ ವಿಜಯದಿನ ಭಾರತೀಯರು ಎಂದೂ ಮರೆಯದ ಅವಿಸ್ಮರಣೀಯ ದಿನವಾಗಿದೆ. ಸುಮಾರು ಎರಡು ತಿಂಗಳ ಕಾಲ ಜರುಗಿದ ಯುದ್ಧದಲ್ಲಿ ಭಾರತೀಯ ಯೋಧರು ಕೆಚ್ಚೆದೆಯಿಂದ ಹೋರಾಡಿ ವಿಜಯ ಸಾಧಿಸಿದ್ದಾರೆ. ಈ ಯುದ್ಧದಲ್ಲಿ ಅನೇಕರು ಹುತಾತ್ಮರಾಗಿದ್ದಾರೆ. ದೇಶಕ್ಕಾಗಿ ಸಮರ್ಪಣಾಭಾವದಿಂದ ತ್ಯಾಗಬಲಿದಾನಗಳನ್ನು ಮಾಡುವ ಯೋಧರಿಗೆ ಗೌರವ ಸಮರ್ಪಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವೂ ಆಗಿದೆ ಎಂದರು.

ಕಲಾಸಂಗಮ ಸಾಂಸ್ಕೃತಿಕ ಸಂಸ್ಥೆಯು ಕಳೆದ 10 ವರ್ಷಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಸಂಘಟಿಸಿ, ಜಿಲ್ಲೆಯ ಸಾಂಸ್ಕೃತಿಕ ವಾತಾವರಣ ಗಟ್ಟಿಗೊಳಿಸುವ ಸಮಾಜಮುಖಿ ಕೆಲಸ ಮಾಡಿದೆ. ಪ್ರತಿವರ್ಷವೂ ಯೋಧರಿಗಾಗಿ ವಿಶೇಷ ಕಾರ್ಯಕ್ರಮ ಮಾಡಿ ಅವರನ್ನು ಗೌರವಿಸುವ ಕೆಲಸ ನಿಜಕ್ಕೂ ಶ್ಲಾಘನೀಯ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಉದ್ಯಮಿ ಗಣಪಾಲ್ ಐನಾಥರೆಡ್ಡಿ, ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಯೋಧರ ಗೆಲುವು ಪ್ರತಿಯೊಬ್ಬರಲ್ಲೂ ಅಚ್ಚಳಿಯದೇ ಉಳಿದಿದೆ. ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್‌ ನಲ್ಲಿ ನಡೆದ ಈ ಯುದ್ಧದಲ್ಲಿ ಪಾಕಿಸ್ತಾನವನ್ನು ಭಾರತೀಯ ವೀರಯೋಧರು ಸದೆಬಡೆಯುತ್ತಾರೆ. ಅತ್ಯಂತ ಸವಾಲಿನ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಿದ ಭಾರತೀಯ ಯೋಧರ ಕಾರ್ಯ ಸ್ಮರಣಾರ್ಹವಾಗಿದೆ ಎಂದು ತಿಳಿಸಿದರು.

ಮಾಜಿ ಯೋಧರ ಸಂಘದ ಜಿಲ್ಲಾಧ್ಯಕ್ಷ ವೆಂಕಟಕೃಷ್ಣಾ ಚೌಧರಿ, ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ, ಶೆಟ್ರ ಗುರುಶಾಂತಪ್ಪ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಶರಣ ಬಸವರಾಜ್, ಪ್ರೌಢಶಾಲೆಯ ಮುಖ್ಯಗುರು ನಾಗರತ್ನ ಪಾಟೀಲ್ ಉಪಸ್ಥಿತರಿದ್ದರು. ಕಲಾಸಂಗಮ ಸಂಸ್ಥಾಪಕ ಅಧ್ಯಕ್ಷ ಎಂ.ವಿನೋದ್ ಪ್ರಾಸ್ತಾವಿಕ ಮಾತನಾಡಿ, ಸಂಸ್ಥೆಯಿಂದ ಆಯೋಸುವ ಕಾರ್ಯಕ್ರಮಗಳ ಕುರಿತು ತಿಳಿಸಿದರು.

ಸಂಸ್ಥೆಯ ಕಾರ್ಯದರ್ಶಿಗಳಾದ ಬಿ.ಎಂ.ಸಿದ್ದೇಶ್, ಉಪಾಧ್ಯಕ್ಷ ಅದ್ದಿಗೇರಿ ರಘು ಹಾಗೂ ಪದಾಧಿಕಾರಿಗಳಾದ ಮುರಳಿ, ನವೀನ್ ಸೌದ್ರಿ ಹಾಜರಿದ್ದರು.

ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆಗಾಯನ, ತಾಂಡವ ನೃತ್ಯ ಕಲಾ ಟ್ರಸ್ಟ್ ವತಿಯಿಂದ ದೇ ಸಮೂಹನೃತ್ಯ ಹಾಗೂ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಮಾಜಿ ಯೋಧರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಸುಮಾರು 450ಕ್ಕೂ ಹೆಚ್ಚು ದೇಸಿ ಗೋವುಗಳನ್ನು ರಕ್ಷಣೆ ಮಾಡಿ ಗೋತಳಿಗಳ ಉಳಿವಿಗೆ ಶ್ರಮಿಸುತ್ತಿರುವ ಆಂಧ್ರಪ್ರದೇಶದ ಗೋರಕ್ಷಕ ಬಂಟುಪಲ್ಲಿ ಚಾಂದ್‌ಬಾಷಾ ಅವರಿಗೆ ಜನರ ನಡುವಿನ ಕಣ್ಮಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Share this article