ಹೊನ್ನಾವರ: ನಮ್ಮ ಪೂರ್ವಜರು ಪ್ರಕೃತಿಯನ್ನೇ ಆರಾಧಿಸಿದರು. ಸುಂದರ ಪರಿಸರದ ಮಧ್ಯದಲ್ಲಿ ಆಧ್ಯಾತ್ಮಿಕ ಶಕ್ತಿ ಜಾಗೃತವಾಗಿ ಸಂತೋಷ ಸಿಗುತ್ತದೆ ಎನ್ನುವುದಕ್ಕೆಕಾಮಕೋಡ ದೇವರ ಕಾಡಿನ ಭೇಟಿಯ ಅನುಭವ ಒಂದು ಸಾಕ್ಷಿ ಎಂದು ಎಸ್.ಡಿ.ಎಂ.ಪದವಿ ಕಾಲೇಜಿನ ಪ್ರಾಚಾರ್ಯ ಡಿ.ಎಲ್.ಹೆಬ್ಬಾರ ಹೇಳಿದರು.
ತಾಲೂಕಿನ ಹೆರಾವಲಿ ಗ್ರಾಮದ ಹಾಚಲಮಕ್ಕಿಯ ಕಾಮಕೋಡ ದೇವರ ಕಾಡಿನಲ್ಲಿರುವ ದುರ್ಗಾಂಬಾ ದೇವಸ್ಥಾನದಲ್ಲಿ ಶ್ರೀ ದೇವರ ಪ್ರತಿಷ್ಠಾ ವರ್ಧಂತಿ ಉತ್ಸವದ ಅಂಗವಾಗಿ ಬುಧವಾರ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಚಿಕ್ಕನಕೋಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ನಾಯ್ಕ ಮಾತನಾಡಿ, ದೇವರ ನಾಮದ ಬಲದೊಂದಿಗೆ ಕಾಡನ್ನು ರಕ್ಷಿಸುವ ದೇವರ ಕಾಡಿನ ಕಲ್ಪನೆ ಪರಿಸರ ರಕ್ಷಣೆಗೆ ಸಂಬಂಧಿಸಿದಂತೆ ಒಂದು ಮಹತ್ವದ ಹೆಜ್ಜೆಯಾಗಿದ್ದು, ದೇವಸ್ಥಾನಕ್ಕೆ ಬರುವ ಭಕ್ತರ ಅನುಕೂಲಕ್ಕೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಅರಣ್ಯ ಇಲಾಖೆ ಉತ್ತಮ ಕೆಲಸ ಮಾಡಿದೆ ಎಂದು ಶ್ಲಾಘಿಸಿದರು.
ದೇವಸ್ಥಾನ ಸಮಿತಿಯ ಅಧ್ಯಕ್ಷ ನೀಲಕಂಠ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ದೇವಸ್ಥಾನ ಸಮಿತಿಯ ಹಿರಿಯ ಸದಸ್ಯ ಮಾದೇವ ನಾಯ್ಕ, ಗ್ರಾಮ ಪಂಚಾಯಿತಿ ಸದಸ್ಯ ನಾಗೇಶ ನಾಯ್ಕ, ದೇವಸ್ಥಾನ ಸಮಿತಿಯ ಉಪಾಧ್ಯಕ್ಷ ಗಂಗಾಧರ ನಾಯ್ಕ, ಖಜಾಂಚಿ ಎಚ್.ಎಲ್. ಗುರುದತ್ತ, ಕಾರ್ಯದರ್ಶಿ ವಿನಯ ನಾಯ್ಕ, ಸದಸ್ಯರು ಭಾಗವಹಿಸಿದ್ದರು.
ಶ್ರದ್ಧಾ ಪ್ರಾರ್ಥನಾ ಗೀತೆ ಹಾಡಿದರು. ಪ್ರಾಧ್ಯಾಪಕ ನಾಗರಾಜ ಹೆಗಡೆ ಅಪಗಾಲ ಸ್ವಾಗತಿಸಿದರು. ಉಪನ್ಯಾಸಕರಾದ ಮಂಜುನಾಥ ಭಂಡಾರಿ, ವಿಶಾಲ ಎಸ್. ನಿರೂಪಿಸಿದರು. ಕಾಮಕೋಡ ಪರಿಸರ ಕೂಟದ ಸಂಚಾಲಕ ಎಂ.ಜಿ. ಹೆಗಡೆ ವಂದಿಸಿದರು.ನಂತರ ನಡೆದ ''''ಸಾಂಸ್ಕೃತಿಕ ಸಂಭ್ರಮ'''' ಕಾರ್ಯಕ್ರಮ ಪ್ರೇಕ್ಷಕರಿಗೆ ಮುದ ನೀಡಿತು. ಸುದಾಮ ದಾನಗೇರಿ ಗುಂದ ಭಜನ್ ಪ್ರಸ್ತುತಪಡಿಸಿದರು. ಗುರುರಾಜ್ ಆಡುಕಳ ತಬಲಾದಲ್ಲಿ ಹಾಗೂ ಸತೀಶ ಭಟ್ ಹೆಗ್ಗಾರ ಹಾರ್ಮೋನಿಯಂನಲ್ಲಿ ಸಾಥ್ ನೀಡಿದರು.
ದೇವಸ್ಥಾನದ ಆವಾರದಲ್ಲಿ ಇದೇ ದಿನ ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯಿಂದ ದೇವಸ್ಥಾನ ಸಮಿತಿಗೆ ಅಡುಗೆ ಪಾತ್ರೆಗಳನ್ನು ವಿತರಿಸಲಾಯಿತು. ವಲಯ ಅರಣ್ಯಾಧಿಕಾರಿ ಸವಿತಾ ದೇವಾಡಿಗ, ಉಪ ವಲಯ ಅರಣ್ಯಾಧಿಕಾರಿ ವಿಶಾಲ್ ಡಿ. ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.