ತ್ರಿವಳಿ ಜಿಲ್ಲೆಗಳಿಗೆ ನೀರು ಹರಿಸುವ ಭರವಸೆ ನೀಡಿದ ಆಂಧ್ರದ ಡಿಸಿಎಂ ಪವನ್ ಕಲ್ಯಾಣ್

KannadaprabhaNewsNetwork |  
Published : Oct 07, 2025, 01:02 AM IST
ಡಿಸಿಎಂ  | Kannada Prabha

ಸಾರಾಂಶ

ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡರು ಜನಸೇನಾ ಪಕ್ಷಕ್ಕೆ ಬಲ ತುಂಬಿದವರು. ಅವರಿಂದಲೇ ನಾನು ರಾಜಕೀಯಕ್ಕೆ ಬಂದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಬೆಂಗಳೂರು ನಗರಕ್ಕೆ ಆಹಾರ ಕೊಡುವ ಅಕ್ಷಯ ಪಾತ್ರೆಗಳು. ಹೀಗಾಗಿ ನೀರಾವರಿ ಯೋಜನೆ ಬಗ್ಗೆ ನನ್ನ ಪ್ರಯತ್ನ ಮಾಡ್ತೇನೆ. ಆಂಧ್ರ ಪ್ರದೇಶಕ್ಕೆ ಕರ್ನಾಟಕದ ಮೇಲೆ ತುಂಬಾ ಪ್ರೀತಿ ಇದೆ. ನಾವೆಲ್ಲಾ ಒಂದೇ ತಾಯಿಯ ಮಕ್ಕಳು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಫುರ/ ಚಿಂತಾಮಣಿ

ಆಂಧ್ರಪ್ರದೇಶದ ಗಡಿ ಭಾಗದಲ್ಲಿ ಹರಿಯುವ ಕೃಷ್ಣಾ ನದಿ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಹರಿಸಲು ಸಹೋದರ ಭಾವನೆಯಿಂದ ಪ್ರಯತ್ನ ಮಾಡುವುದಾಗಿ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ತೆಲುಗಿನ ಖ್ಯಾತ ನಟ ಪವನ್ ಕಲ್ಯಾಣ್ ಭರವಸೆ ನೀಡಿದರು.

ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡರು ಜನಸೇನಾ ಪಕ್ಷಕ್ಕೆ ಬಲ ತುಂಬಿದವರು. ಅವರಿಂದಲೇ ನಾನು ರಾಜಕೀಯಕ್ಕೆ ಬಂದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಬೆಂಗಳೂರು ನಗರಕ್ಕೆ ಆಹಾರ ಕೊಡುವ ಅಕ್ಷಯ ಪಾತ್ರೆಗಳು. ಹೀಗಾಗಿ ನೀರಾವರಿ ಯೋಜನೆ ಬಗ್ಗೆ ನನ್ನ ಪ್ರಯತ್ನ ಮಾಡ್ತೇನೆ. ಆಂಧ್ರ ಪ್ರದೇಶಕ್ಕೆ ಕರ್ನಾಟಕದ ಮೇಲೆ ತುಂಬಾ ಪ್ರೀತಿ ಇದೆ. ನಾವೆಲ್ಲಾ ಒಂದೇ ತಾಯಿಯ ಮಕ್ಕಳು ಎಂದರು.

ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಚರ್ಚಿಸಿ, ಮೂರು ಜಿಲ್ಲೆಗಳಿಗೆ ಕೃಷ್ಣಾ ನದಿ ನೀರು ಹರಿಸಲು ಸಹಕಾರ ನೀಡಬೇಕು ಎಂದು ಕೇಂದ್ರ ಸಚಿವ ವಿ. ಸೋಮಣ್ಣ, ಮಾಜಿ ಶಾಸಕ ಎಂ. ಕೃಷ್ಣಾರೆಡ್ಡಿ ಮತ್ತು ನ್ಯಾ. ವಿ. ಗೋಪಾಲಗೌಡ ಮನವಿ ಮಾಡಿದರು. ಆಗ ಈ ನಿಟ್ಟಿನಲ್ಲಿ ಪ್ರಯತ್ನ ಮಾಡುವುದಾಗಿ ಪವನ್ ಕಲ್ಯಾಣ್ ಭರವಸೆ ನೀಡಿದರು.

ಸಮಾವೇಶದಲ್ಲಿ ಭಾಗಿಯಾಗಿದ್ದ ಕೇಂದ್ರ ಸಚಿವ ವಿ.ಸೋಮಣ್ಣ ಮಾತನಾಡಿ, ಪವನ್ ಕಲ್ಯಾಣ್ ಸನಾತನ ಧರ್ಮ ಕಾಪಾಡ್ತಿದ್ದಾರೆ. ಅವರು ಭವಿಷ್ಯದ ನಾಯಕ ಎಂದರು.

ಇದಕ್ಕೂ ಮುನ್ನ ಪವನ್ ಕಲ್ಯಾಣ್ ರಿಗೆ ಸನ್ಮಾನ ಮಾಡಿ, ಮಾತನಾಡಿದ ಮಾಜಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ಗೋಪಾಲಗೌಡರ ಹುಟ್ಟುಹಬ್ಬ ಒಂದು ನೆಪ ಮಾತ್ರ. ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಭಾಗಕ್ಕೆ ಕೃಷ್ಣಾನದಿ ನೀರನ್ನು ಹರಿಸಲು ಈ ಕಾರ್ಯಕ್ರಮ ಮಾಡಲಾಗಿದೆ. ಅವರ ಹೆಸರಿನಲ್ಲಿ ಕೃಷ್ಣಾನದಿ ನೀರು ತರಲು ಮುಂದಾಗಿದೆ. ಸನಾತನ‌ ಧರ್ಮದ ಬಗ್ಗೆ ಅವರಿಗೆ ಕಾಳಜಿ ಹೆಚ್ಚಿದೆ. ದಕ್ಷಿಣ ಭಾರತದ ಕಲರಿ ಕಲೆಯನ್ನು ಕಲೆಯುತ್ತಿರುವ ನಾಯಕ ಪವನ್ ಕಲ್ಯಾಣ್, ಆಧ್ಯಾತ್ಮಿಕ, ಸನಾತನ ಧರ್ಮಕ್ಕೆ ಸಹಕಾರಿ ಕೊಡುತ್ತಿರುವ ನಾಯಕ. ಕೃಷ್ಣಾ ನದಿ ನೀರು ತಂದರೆ ನಮ್ಮ ಭಾಗಕ್ಕೆ ಅನುಕೂಲವಾಗಲಿದೆ. ನಮ್ಮ ಜಿಲ್ಲೆಯಲ್ಲಿ 2 ಸಾವಿರ ಅಡಿ ಬೋರ್ ವೆಲ್ ಕೊರೆದರೂ ನೀರು ಸಿಗಲ್ಲ. ನಮಗೆ ಕುಡಿಯುವ ನೀರು ಬೇಕು, ಎತ್ತಿನಹೊಳೆ ಯೋಜನೆಯನ್ನು ರಾಜ್ಯ ಸರ್ಕಾರದ ಮುಖ್ಯ ಮಂತ್ರಿ ಸಿದ್ದರಾಮಯ್ಯ ತರುವಲ್ಲಿ ವಿಫಲರಾಗಿದ್ದಾರೆ. ಎತ್ತಿನಹೊಳೆಗೆ 30 ಸಾವಿರ ಕೋಟಿ ರುಪಾಯಿ ಖರ್ಚಾಗಿದೆ. ಆದರೂ ಇನ್ನೂ ಪೈಪ್ ಲೈನ್ ಕಾಮಗಾರಿ ಮಾಡುವುದರಲ್ಲಿಯೇ ಇದ್ದಾರೆ. ಕೃಷ್ಣಾನದಿ ನೀರು ಬಂದರೆ ಬರ ಪೀಡಿತ ಮೂರು‌ ಜಿಲ್ಲೆಗಳಿಗೆ ಅನುಕೂಲವಾಗಲಿದೆ. ನೀವು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಮಾತನಾಡಿ, ಕೃಷ್ಣಾನದಿ ನೀರು ತರಬೇಕು. ನೀವು ವೇದಿಕೆಯಲ್ಲಿಯೇ ಭರವಸೆ ಕೊಡಬೇಕು ಎಂದು ಒತ್ತಾಯ ಮಾಡಿದರು.

ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶ ವಿ.ಗೋಪಾಲ ಗೌಡ ನೆರೆದ ಜನತೆಯನ್ನುದ್ದೇಶಿಸಿ, ನೀವು ಪವನ್ ಕಲ್ಯಾಣ್ ಅವರಿಗಾಗಿ ಬಂದಿದ್ದೀರಾ, ಆದ್ದರಿಂದ ನಾನು ತುಂಬಾ ಮಾತನಾಡಲ್ಲ. ಪವನ್ ಕಲ್ಯಾಣ್ ರಿಗೆ ಆರೋಗ್ಯ ಸರಿಯಿಲ್ಲದಿದ್ದರೂ, ನಿಮಗಾಗಿ, ನನಗಾಗಿ ಹೈದರಾಬಾದ್ ನಿಂದ ಬಂದಿದ್ದಾರೆ. ಯುವ ಜನತೆ,ರೈತರು, ಮಹಿಳೆಯ ಪರ ಆಲೋಚನೆ ಮಾಡುವಂತಹ ನಾಯಕ ಪವನ್ ಕಲ್ಯಾಣ್, ಇಂದು ಆಂಧ್ರದಲ್ಲಿ ಗ್ರಾಮೀಣ, ಅರಣ್ಯ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ನಟನೆಯಲ್ಲಿ ಅಪ್ರತಿಮ ಸರಸ್ವತಿ ಪುತ್ರರು. ಪ್ರಜೆಗಳಿಗಾಗಿ, ದಲಿತರಿಗಾಗಿ, ಮಹಿಳೆಯರಿಗಾಗಿ ಸೇವೆ ಸಲ್ಲಿಸಿದ್ದಾರೆ. ನಮ್ಮ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ಆಂತಕ ಇದೆ. ಸಿಎಂ ಚಂದ್ರಬಾಬು ನಾಯ್ಡು ಮತ್ತು ಪ್ರಧಾನಿ ಮೋದಿಗೆ ಮನವಿ ಮಾಡಿ ಕೃಷ್ಣಾನದಿಯಿಂದ ನಮ್ಮ ಜನರಿಗೆ ಕುಡಿಯುವ ನೀರು ತರಿಸಬೇಕು. ನಮಗೆ ಅವರು ನೀರು ಕೊಡಿಸುತ್ತಾರೆ. ಅದರಲ್ಲಿ ಯಾವುದೇ ಸಂದೇಹ ಇಲ್ಲ. ನಾನು ನಿವೃತ್ತನಾದರೂ ನಿಮ್ಮ ಸೇವೆ ಮಾಡುತ್ತೇನೆ ಎಂದು ಹೇಳಿದರು.

PREV

Recommended Stories

ಸಮೀಕ್ಷೆ ವೇಳೆ ಬೀದಿ ನಾಯಿ ದಾಳಿಯಿಂದ ಶಿಕ್ಷಕಿ ಗಂಭೀರ
ಸೆಂಟ್ ಸ್ಪ್ರೇ ಮಾಡಿ ಹಸುವಿನ ಬಾಲಕ್ಕೆ ಬೆಂಕಿ ಹಚ್ಚಿದ ಬಾಲಕ