ಆನೆಗೊಂದಿ, ಸಣಾಪುರ ಭಾಗದಲ್ಲಿ ಪ್ರಭಾವಿಗಳ ರೆಸಾರ್ಟ್‌!

KannadaprabhaNewsNetwork | Published : Mar 12, 2025 12:50 AM

ಸಾರಾಂಶ

ಕೊಪ್ಪಳದ ಆನೆಗೊಂದಿ, ಸಣಾಪುರ ಭಾಗದಲ್ಲಿ ಹಂಪಿ ಟೂರಿಸಂ ಹೆಸರಿನಲ್ಲಿ ಪ್ರಭಾವಿಗಳ ರೆಸಾರ್ಟ್‌ಗಳಿವೆ. ಕೋಟ್ಯಂತರ ರು. ಬಂಡವಾಳ ಹೂಡಿ ರೆಸಾರ್ಟ್‌ಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ.

ಒಡಿಸ್ಸಾದಿಂದ ಗಾಂಜಾ ಸಪ್ಲೈ । ಗಾಂಜಾ ಘಾಟಿಗೆ ಬೀಳಲಿ ಕಡಿವಾಣಕೃಷ್ಣ ಲಮಾಣಿ

ಕನ್ನಡಪ್ರಭ ವಾರ್ತೆ ಹೊಸಪೇಟೆ

ಕೊಪ್ಪಳದ ಆನೆಗೊಂದಿ, ಸಣಾಪುರ ಭಾಗದಲ್ಲಿ ಹಂಪಿ ಟೂರಿಸಂ ಹೆಸರಿನಲ್ಲಿ ಪ್ರಭಾವಿಗಳ ರೆಸಾರ್ಟ್‌ಗಳಿವೆ. ಕೋಟ್ಯಂತರ ರು. ಬಂಡವಾಳ ಹೂಡಿ ರೆಸಾರ್ಟ್‌ಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಇದೆಲ್ಲವೂ ಸಂಬಂಧಿಸಿದ ಇಲಾಖೆಗಳಿಗೆ ಗೊತ್ತಿದ್ದರೂ ಜಾಣ ಕುರುಡುತನ ಪ್ರದರ್ಶಿಸುತ್ತಿವೆ.

ರಾಯಚೂರು, ಕೊಪ್ಪಳ ಭಾಗದ ಪ್ರಭಾವಿ ರಾಜಕಾರಣಿಗಳ ರೆಸಾರ್ಟ್‌ಗಳು ಇಲ್ಲಿ ತಲೆ ಎತ್ತಿವೆ. ವಿರುಪಾಪುರ ಗಡ್ಡಿಯಲ್ಲಿ ತೆರವು ಕಾರ್ಯಾಚರಣೆ ನಡೆಸಿದ ಬಳಿಕ ಈ ರೆಸಾರ್ಟ್‌ಗಳು ಕಂದಾಯ, ಅರಣ್ಯ ಜಮೀನುಗಳಲ್ಲಿ ತಲೆ ಎತ್ತಿವೆ. ರೈತರ ಕೃಷಿ ಜಮೀನುಗಳಲ್ಲೂ ತಲೆ ಎತ್ತಿವೆ. ಸರ್ಕಾರ ರೆಸಾರ್ಟ್‌ ಸಂಸ್ಕೃತಿಗೆ ಕಡಿವಾಣ ಹಾಕಿ, ದೇಶಿ ಸಂಸ್ಕೃತಿಯನ್ನು ಪ್ರಚುರಪಡಿಸುವ ಹೋಂ ಸ್ಟೇಗಳಿಗೆ ಉತ್ತೇಜನ ನೀಡಲು ಆಲೋಚನೆ ಮಾಡುತ್ತಿದ್ದರೆ, ಪಂಚತಾರಾ ಹೋಟೆಲ್‌ಗಳಿಗೆ ಸಡ್ಡು ಹೊಡೆಯುವ ಮಾದರಿಯಲ್ಲಿ ಆನೆಗೊಂದಿ, ಸಣಾಪುರ, ಬಸಾಪುರ ಭಾಗಗಳಲ್ಲಿ ರೆಸಾರ್ಟ್‌ಗಳು ತಲೆ ಎತ್ತಿವೆ. ಪ್ರವಾಸೋದ್ಯಮ ಹೆಸರಿನಲ್ಲಿ ತಲೆ ಎತ್ತಿರುವ ಈ ರೆಸಾರ್ಟ್‌ಗಳ ಬಗ್ಗೆ ಕೊಪ್ಪಳ ಜಿಲ್ಲಾಡಳಿತ ಕೂಡ ಮೌನ ವಹಿಸಿರುವುದು ಈಗ ಭಾರೀ ಚರ್ಚೆಗೆ ಗ್ರಾಸವನ್ನೊದಗಿಸಿದೆ.

ಎನ್‌ಓಸಿ ಇಲ್ಲವೇ ಇಲ್ಲ:

ಹಂಪಿ ಪ್ರವಾಸೋದ್ಯಮವನ್ನು ನೆಚ್ಚಿಕೊಂಡು ಬದುಕು ನಡೆಸಲು ಸ್ಥಳೀಯರು ಮನೆಗಳಲ್ಲೇ ಹೋಂ ಸ್ಟೇ ಮಾಡಿಕೊಂಡು, ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶ ಇದೆ. ಆದರೆ, ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಇಲ್ಲದೇ ಸ್ಥಳೀಯ ಸಂಸ್ಥೆ ಹಾಗೂ ಹಂಪಿ ಪ್ರಾಧಿಕಾರದಿಂದಲೂ ನೀರಪೇಕ್ಷಣಾ (ಎನ್‌ಓಸಿ) ಪತ್ರ ಪಡೆಯದೇ ರೆಸಾರ್ಟ್‌ಗಳನ್ನು ತೆರೆಯಲಾಗಿದೆ. ಇನ್ನು ಹೋಂ ಸ್ಟೇ ಹೆಸರಿನಲ್ಲಿ ರೆಸಾರ್ಟ್‌ ನಡೆಸಲಾಗುತ್ತಿದೆ. ಸಣಾಪುರ ಸಮೀಪದ ರಂಗಾಪುರ ಬಳಿಯ ಗಂಗಮ್ಮನ ಗುಡಿ ಬಳಿ ನಡೆದ ಒಡಿಸ್ಸಾ ಮೂಲದ ಪ್ರವಾಸಿಗ ಬೀಬಾಸ್‌ (26) ಹತ್ಯೆ ಪ್ರಕರಣ ಮತ್ತು ಇಸ್ರೇಲ್‌ ಮಹಿಳೆ ಮತ್ತು ಹೋಂ ಸ್ಟೇ ಮಾಲಕಿ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಬಳಿಕ ನಿಯಮದ ಉಲ್ಲಂಘನೆ ಪ್ರಕರಣಗಳು ಒಂದೊಂದಾಗಿ ಬಿಚ್ಚಿಕೊಳ್ಳತೊಡಗಿದೆ.

ಗಾಂಜಾ ಘಾಟು:

ಆನೆಗೊಂದಿ, ಸಣಾಪುರ ಭಾಗದಲ್ಲಿ ಗಾಂಜಾ ಘಾಟು ಇದ್ದೇ ಇದೆ. ಒರಿಸ್ಸಾ, ಆಂಧ್ರಪ್ರದೇಶದಿಂದ ರೈಲು, ಬಸ್ ಗಳ ಮೂಲಕ ಗಾಂಜಾ ರವಾನೆ ಆಗುತ್ತಿದೆ. ಡ್ರಗ್ಸ್‌ ಸಪ್ಲೈಯನ್ನು ಪೆಡ್ಲರ್‌ಗಳ ಮೂಲಕ ರವಾನಿಸಲಾಗುತ್ತಿದೆ. ಒಡಿಸ್ಸಾದಿಂದ ಕಾರ್ಮಿಕರ ಸೋಗಿನಲ್ಲಿ ರೈಲಿನಲ್ಲಿ ಗಾಂಜಾ ರವಾನೆ ಆಗುತ್ತಿದೆ. ತೋರಣಗಲ್‌, ಗಿಣಿಗೇರಾ ಕಾರ್ಖಾನೆಗಳಲ್ಲಿ ಕೆಲಸ ಮಾಡುವವರ ಸೋಗಿನಲ್ಲೇ ಗಾಂಜಾ ಒಡಿಸ್ಸಾದಿಂದ ರಾಜ್ಯದಲ್ಲಿ ಪ್ರವೇಶಿಸುತ್ತಿದೆ. ಪೊಲೀಸರ ತನಿಖೆ ವೇಳೆಯಲ್ಲೂ ಕೆಲ ಪ್ರಕರಣಗಳಲ್ಲಿ ಸಿಂಧನೂರು, ಆನೆಗೊಂದಿಯಿಂದ ಗುಂತಕಲ್‌ ಒಡಿಸ್ಸಾ ಲಿಂಕ್‌ ದೊರೆತಿದೆ. ಆದರೆ, ಈ ನೆಟ್‌ ವರ್ಕ್‌ಅನ್ನು ಬುಡಸಮೇತ ಕೀಳಲು ಆಗಿಲ್ಲ. ಹಾಗಾಗಿ ಈಗ ಗಾಂಜಾ ಘಾಟು ಭಾರೀ ಎಲ್ಲೆಡೆ ಪಸರಿಸುತ್ತಿದೆ ಎಂದು ವಿಶ್ವಸನೀಯ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.

ಗಂಗಾವತಿ, ಹುಲಿಗಿ ರೈಲ್ವೆ ನಿಲ್ದಾಣ, ಪ್ರಮುಖ ಪಟ್ಟಣಗಳ ಬಸ್‌ ನಿಲ್ದಾಣಗಳಿಂದ ಗಾಂಜಾ ಪೆಡ್ಲರ್‌ಗಳು ಪಿಕಪ್‌ ಪಾಯಿಂಟ್‌ ಮಾಡಿಕೊಂಡಿದ್ದಾರೆ. ಸರ್ಕಾರಿ ಆಸ್ಪತ್ರೆಗಳ ಬಳಿಯೂ ಜನನಿಬಿಡ ಪ್ರದೇಶಗಳಿಂದಲೇ ಈ ಗಾಂಜಾ ವ್ಯವಹಾರ ಒಬ್ಬರಿಂದ ಇನ್ನೊಬ್ಬರಿಗೆ ರವಾನೆ ಆಗುತ್ತಿದೆ. ಹೊಸ ಪೊಲೀಸರ ಬದಲಿಗೆ; ಎಂಟ್ಹತ್ತು ವರ್ಷಗಳ ಹಿಂದೆ ಕೆಲ ಪೊಲೀಸ್‌ ಠಾಣೆಗಳಲ್ಲಿ ಕೆಲಸ ಮಾಡಿದ ಪೊಲೀಸರನ್ನು ಬಿಟ್ಟರೆ ಈ ಹಾವಳಿಗೆ ಕಡಿವಾಣ ಬೀಳಲಿದೆ. ಈಗಿನ ಪೊಲೀಸರಿಗೆ ಬಾತ್ಮೀದಾರರು ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಸ್ಮಾರ್ಟ್‌ಫೋನ್‌ ಹಾಗೂ ವಾಟ್ಸ್‌ಆ್ಯಪ್‌ ಯುಗದಲ್ಲಿ ಎಲ್ಲಿ ತಮ್ಮ ಬಗ್ಗೆ ಮಾಹಿತಿ ಲೀಕ್‌ ಆಗಲಿದೆ ಎಂಬ ಆತಂಕದಿಂದ ಬಾತ್ಮೀದಾರರು ಎಲ್ಲವನ್ನೂ ನೋಡಿಕೊಂಡು ಕಣ್ಣಿದ್ದು ಕುರುಡರಂತೇ ತೆಪ್ಪಗಾಗಿದ್ದಾರೆ. ಈ ಠಾಣೆಗಳಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿದ ಪೊಲೀಸರು ಹಾಗೂ ಬೇರೆ ಠಾಣೆಗಳಿಗೆ ವರ್ಗಾವಣೆಗೊಂಡಿರುವವರನ್ನು ಬಳಸಿಕೊಂಡರೇ ನಾಲ್ಕೈದು ದಿನದಲ್ಲೇ ಆನೆಗೊಂದಿ, ಸಣಾಪುರ, ತುಂಗಭದ್ರಾ ನದಿತೀರದಲ್ಲಿ ಗಾಂಜಾ ಘಾಟಿಗೆ ಶಾಶ್ವತ ಕಡಿವಾಣ ಹಾಕಬಹುದು ಎಂದು ಹೇಳುತ್ತಾರೆ ಸ್ಥಳೀಯರು.

Share this article