ಉದ್ಘಾಟನೆಗೂ ಮೊದಲೇ ಹಾಳಾದ ಅಂಗನವಾಡಿ ಕೇಂದ್ರ!

KannadaprabhaNewsNetwork |  
Published : Sep 12, 2025, 12:06 AM IST
ಪೋಟೋ ಇದೆ. | Kannada Prabha

ಸಾರಾಂಶ

ಗದಗ ನಂದೀಶ್ವರ ನಗರದಲ್ಲಿ ಕೆಆರ್‌ಐಡಿಎಲ್ ನಿರ್ಮಾಣ ಮಾಡಲಾದ ಅಂಗನವಾಡಿ ಕೇಂದ್ರ ಉದ್ಘಾಟನೆಗೂ ಮೊದಲೇ ಹಾಳಾಗಿದೆ.

ಗದಗ: ಇಲ್ಲಿನ ನಂದೀಶ್ವರ ನಗರದಲ್ಲಿ ಕೆಆರ್‌ಐಡಿಎಲ್ ನಿರ್ಮಾಣ ಮಾಡಲಾದ ಅಂಗನವಾಡಿ ಕೇಂದ್ರ ಉದ್ಘಾಟನೆಗೂ ಮೊದಲೇ ಹಾಳಾಗಿದೆ.

ನಂದೀಶ್ವರದ ಪ್ರಾಥಮಿಕ ಶಾಲೆಯ ಆವರಣದಲ್ಲಿ 2023-24ನೇ ಸಾಲಿನ ತಾಲೂಕು ಯೋಜನೆಯಡಿ ಅಂಗನವಾಡಿ ಕೇಂದ್ರ-256ನ್ನು ₹20 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಆದರೆ ಕಟ್ಟಡದ ಮುಂಭಾಗದಲ್ಲಿ ನಾಲ್ಕು ಬಣ್ಣ ಬಣ್ಣದ ಚಿತ್ರ ಬರೆದಿರುವುದನ್ನು ಹೊರತುಪಡಿಸಿದಲ್ಲಿ ಬೇರೆ ಯಾವುದೇ ವ್ಯವಸ್ಥೆ ಕಲ್ಪಿಸಿಲ್ಲ.

ಕಳಪೆ ಕಾಮಗಾರಿ: ಕಟ್ಟಡ ನಿರ್ಮಾಣದಲ್ಲಿ ಯಾವುದೇ ಗುಣಮಟ್ಟ ಕಾಯ್ದುಕೊಂಡಿಲ್ಲ. ಕಟ್ಟಡದ ಕಿಟಕಿ, ಬಾಗಿಲುಗಳನ್ನು ಕೂಡಾ ಇಲಾಖೆಯ ನಿಯಮಾವಳಿಯಂತೆ ಅಳವಡಿಕೆ ಮಾಡಿಲ್ಲ. ಕಿಟಕಿ ಬುಡದಲ್ಲಿ ಕಿಂಡಿ ಉಳಿದಿವೆ. ಮೆಟ್ಟಿಲುಗಳ ಮರಳು ಉದುರುತ್ತಿದೆ. ಕಿಡಿಗೇಡಿಗಳ ಕೃತ್ಯಕ್ಕೆ ಕಿಟಕಿ ಗಾಜುಗಳೆಲ್ಲ ಈಗಾಗಲೇ ಪುಡಿ ಪುಡಿಯಾಗಿವೆ. ಫ್ರೇಮ್‌ಗಳೆಲ್ಲ ಕಿತ್ತು ಹೋಗಿವೆ. ಒಡೆದ ಕಿಟಕಿ ಗಾಜುಗಳಿಂದ ಮತ್ತಷ್ಟು ಕಸ-ಕಡ್ಡಿಗಳನ್ನು ಕಟ್ಟಡದ ಒಳಗೆ ಎಸೆದಿದ್ದು, ಇದರಿಂದಾಗಿ ಮತ್ತಷ್ಟು ಗಲೀಜಾಗಿದೆ.

ಅವೈಜ್ಞಾನಿಕವಾಗಿ ನಿರ್ಮಾಣ: ಕಟ್ಟಡ ನಿರ್ಮಾಣದ ಹೊಣೆ ಹೊತ್ತಿರುವ ಕೆಆರ್‌ಐಡಿಎಲ್ ಅಧಿಕಾರಿಗಳು, ವಿನ್ಯಾಸ ಮಾಡುವ ವೇಳೆಯಲ್ಲಿ ಮಕ್ಕಳ ಹಿತದೃಷ್ಟಿಯಿಂದ ಮಾಡದೇ ತಮಗೆ ಬೇಕಾದಂತೆ ಮಾಡಿದ್ದಾರೆ. ಕಟ್ಟಡದ ಒಳಗಡೆ ಅಡುಗೆ ಮಾಡಲು ಅಡುಗೆ ಕಟ್ಟೆ ನಿರ್ಮಿಸಿಲ್ಲ. ಅಂಗನವಾಡಿಗೆ ಬರುವವರೇ ಸಣ್ಣ ಮಕ್ಕಳು, ಆದರೆ ವಿದೇಶಿ ಮಾದರಿಯ ಕಮೋಡ್‌ ಅಳವಡಿಸಲಾಗಿದೆ. ಇದುವರೆಗಾದರೂ ನೀರಿನ ಸಂಪರ್ಕ ಕಲ್ಪಿಸಿಲ್ಲ ಎಂದು ಅಲ್ಲಿನ ಸಿಬ್ಬಂದಿ ಹೇಳುತ್ತಾರೆ.ಈ ಎಲ್ಲ ವಿಷಯದ ಕುರಿತು ಕೆಆರ್‌ಐಡಿಎಲ್ ಅಧಿಕಾರಿಗಳಿಗೆ ಮೌಖಿಕವಾಗಿ ತಿಳಿಸಲಾಗಿತ್ತು. ಆನಂತರ ಪತ್ರ ಬರೆಯಲಾಗಿದೆ. ಆದರೆ ನಮ್ಮ ಹೆಸರು ಬಳಸಿಕೊಳ್ಳಬೇಡಿ ಎನ್ನುತ್ತಾರೆ ಮಹಿಳಾ ಮಕ್ಕಳ ಇಲಾಖೆ ಅಧಿಕಾರಿಗಳು.

ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಿರುವ ಕೆಆರ್‌ಐಡಿಎಲ್‌ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೆ ಅವರ ದೂರವಾಣಿ ಸ್ವಿಚ್ ಆಫ್‌. ಕಚೇರಿಯಲ್ಲಿ ಕೂಡಾ ಅವರು ಸಿಗುತ್ತಿಲ್ಲ.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ