ಅಂಗನವಾಡಿ ಮಕ್ಕಳ ಹಾಲಿನ ಪುಡಿ ಐಸ್‌ಕ್ರೀಮ್ ಫ್ಯಾಕ್ಟರಿಗಳಿಗೆ ಸರಬರಾಜು: ಬಂಧನ

KannadaprabhaNewsNetwork |  
Published : Jan 20, 2026, 01:30 AM IST
ಬಿಸಿ | Kannada Prabha

ಸಾರಾಂಶ

ನೆಕ್ಕುಂದಿಪೇಟೆ ಬಳಿ ಇರುವ ಐಸ್ ಕ್ರೀಮ್ ಫ್ಯಾಕ್ಟರಿಗೆ ಕೆಎಂಎಫ್ ಹಾಲಿನ ಪೌಡರ್ ಪಾಕೆಟ್‌ಗಳನ್ನು ಆಕ್ರಮವಾಗಿ ಪೂರೈಸುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದೆ.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ಕೇಂದ್ರಗಳ ಮೂಲಕ ಮಕ್ಕಳಿಗೆ ಮತ್ತು ಶಾಲೆಗಳಲ್ಲಿ ಮಧ್ಯಾಹ್ನದ ಹಾಲು ವಿತರಣೆಗೆ ಗುತ್ತಿಗೆದಾರರ ಮೂಲಕ ಪೂರೈಕೆಯಾಗುವ ಹಾಲಿನ ಪೌಡರ್‌ ಅನ್ನು ಅಕ್ರಮವಾಗಿ ಐಸ್‌ಕ್ರೀಮ್ ಫ್ಯಾಕ್ಟರಿಗೆ ಸಾಗಿಸುತ್ತಿದ್ದ ಇಬ್ಬರನ್ನು ಕೋಲಾರ ಮತ್ತು ಕೆಜಿಎಫ್ ಪೊಲೀಸರು ಚಿಂತಾಮಣಿಯಲ್ಲಿ ಬಂಧಿಸಿದ್ದಾರೆ.

ನಗರದ ನೆಕ್ಕುಂದಿಪೇಟೆ ಬಳಿ ಇರುವ ಐಸ್ ಕ್ರೀಮ್ ಫ್ಯಾಕ್ಟರಿಗೆ ಕೆಎಂಎಫ್ ಹಾಲಿನ ಪೌಡರ್ ಪಾಕೆಟ್‌ಗಳನ್ನು ಆಕ್ರಮವಾಗಿ ಪೂರೈಸುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಕೆಜಿಎಫ್ ಮತ್ತು ಕೋಲಾರ ಕೈಂ ಪೊಲೀಸರು ಶನಿವಾರ ಮಧ್ಯಾಹ್ನ ಮಾಲು ಸಮೇತ ಐಸ್ ಕ್ರೀಮ್ ಫ್ಯಾಕ್ಟರಿ ಮಾಲೀಕ ಅಮೂನ್ ಹಾಗೂ ಗುತ್ತಿಗೆದಾರ ರಾಜಾರೆಡ್ಡಿಯನ್ನು ಬಂಧಿಸಿದ್ದಾರೆ.

ಪ್ರೋಗ್ರಾಮ್ ಆಫೀಸರ್ ವಂಶಿಕೃಷ್ಣ ಮಾತನಾಡಿ, ಈಗಾಗಲೇ ಸಿಕ್ಕಿರುವ ಹಾಲಿನ ಪುಡಿ ಪ್ಯಾಕೆಟ್‌ಗಳು 1 ಕೆಜಿಯಾದ್ದಾಗಿದ್ದು ಇದು ನಮ್ಮ ಚಿಂತಾಮಣಿ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರಿದ್ದಲ್ಲವೆಂದು ತಿಳಿದು ಬಂದಿದೆ. ಹಾಲಿನ ಪುಡಿಯ ಪ್ಯಾಕೆಟ್‌ಗಳ ಮೇಲೆ ಕೋಲಾರ, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಬಾರ್‌ಕೋಡ್ ಹಾಗಿದ್ದು ಎಂದು ತಿಳಿದು ಬಂದಿದೆ. ಆದರೂ ಗುತ್ತಿಗೆದಾರರಾದ ರಾಜಾರೆಡ್ಡಿ ಮತ್ತು ಐಸ್‌ಕ್ರಿಮ್ ಫ್ಯಾಕ್ಟರಿ ಮಾಲೀಕ ಅಮೂನ್‌ಗು ನಂಟಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಕೆಜಿಎಫ್ ಪೊಲೀಸರು ಬಂಧಿಸಿದ್ದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಆರೋಪ ಸಾಬೀತಾದರೆ ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್‌ಗೆ ಸೇರಿಸಲಾಗುವುದು ಮತ್ತು ಅವರಿಗೆ ಯಾವುದೇ ರೀತಿಯ ಟೆಂಡರ್‌ಗಳನ್ನು ನೀಡಲಾಗುವುದಿಲ್ಲವೆಂದು ಸ್ಪಷ್ಟಪಡಿಸಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಶ್‌ಬಾಬು ಮಾತನಾಡಿ, ಪ್ರಸ್ತುತ ದೊರೆತಿರುವ ಹಾಲಿನ ಪುಡಿ ಅಂಗನವಾಡಿ ಕೇಂದ್ರಗಳಲ್ಲಿ ಪೂರೈಕೆ ಮಾಡಲಾಗುವ ಹಾಲಿನ ಪೌಡರ್ ಪ್ಯಾಕೆಟ್ ಅರ್ಧ ಕೆಜಿಯಾಗಿರುತ್ತದೆ. ಆದರೆ ಈಗಾಗಲೇ ನಮಗೆ ತಿಳಿದ ಮಾಹಿತಿಯಂತೆ ಈ ಬಗ್ಗೆ ಸಮಗ್ರ ತನಿಖೆ ಬಳಿಕ ನಿಖರ ಮಾಹಿತಿ ಲಭಿಸಲಿದೆ. ತಮ್ಮ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು, ಕಳೆದೆರಡು ವರ್ಷಗಳಿಂದ ಸರ್ಕಾರವು ಇಡೀ ರಾಜ್ಯಕ್ಕೆ ಒಂದೇ ಏಜೆನ್ಸಿಯನ್ನು ನೀಡಿದ್ದು ಆ ಏಜೆನ್ಸಿಯಡಿ ಉಪಗುತ್ತಿಗೆದಾರರನ್ನು ತಾಲ್ಲೂಕಿನ ಶ್ರೀ ಶಕ್ತಿ ಸಂಘವೊಂದಕ್ಕೆ ನಿರ್ವಹಣೆಗಾಗಿ ನೀಡಿದ್ದು, ಅದರಂತೆ ಕಾಗತಿ ಬಳಿಯ ಗೋಡೌನ್ ಬಳಿ ಇರುವ ಕೇಂದ್ರವೊಂದಕ್ಕೆ ಸರಬರಾಜು ಆಗುತ್ತದೆ. ಅಲ್ಲಿಂದ ನೇರವಾಗಿ ಅಂಗನವಾಡಿ ಕೇಂದ್ರಗಳಿಗೆ ಪೂರೈಸುವ ಗುತ್ತಿಗೆಯನ್ನು ಒಬ್ಬರಿಗೆ ನೀಡಲಾಗುತ್ತದೆ. ಅದರಂತೆ ಯಥಾವತ್ತಾಗಿ ಹಾಲು ಪುಡಿ ಪ್ಯಾಕೆಟ್‌ಗಳು ಸರಬರಾಜಾಗುತ್ತದೆಯೇ ವಿನಃಹ ಹೆಚ್ಚುವರಿಯಾಗಿ ಯಾರಿಗೂ ಹಾಲು ಪುಡಿ ಪ್ಯಾಕೆಟ್‌ಗಳು ದೊರೆಯುವುದಿಲ್ಲವೆಂದು ಸಿಡಿಪಿಒ ಮಹೇಶ್ ಬಾಬು ತಿಳಿಸಿದರು.

ರಾಜಾರೆಡ್ಡಿ ಎಂಬುವರು ಇಲಾಖೆಯ ಆಹಾರ ಪದಾರ್ಥಗಳನ್ನು ಅಂಗನವಾಡಿ ಕೇಂದ್ರಗಳಿಗೆ ಪೂರೈಸುವ ಗುತ್ತಿಗೆದಾರರಾಗಿದ್ದು, ಇಲಾಖೆಯಿಂದ ಅಂಗನವಾಡಿ ಕೇಂದ್ರಗಳಿಗೆ ಪೂರೈಸುವ ಬಗ್ಗೆ ಇಲಾಖೆಯಿಂದ ಇಂಚಿಂಚೂ ಮಾಹಿತಿ ಪಡೆಯಲಾಗುತ್ತದೆ. ಜಿಪಿಎಸ್ ಫೋಟೋ, ಅಂಗನವಾಡಿ ಕಾರ್ಯಕರ್ತರಿಂದ ಸಹಿ ಮತ್ತು ಸೀಲ್ ಕಡ್ಡಾಯ. ಆ ನಿಟ್ಟಿನಲ್ಲಿ ಬೇಡಿಕೆಯಂತೆ ಮಾತ್ರ ಇಲಾಖೆಯಿಂದ ಅಂಗನವಾಡಿ ಕೇಂದ್ರಗಳಿಗೆ ಹಾಲು ಪುಡಿ ಸೇರಿದಂತೆ ಆಹಾರ ಸರಬರಾಜು ಆಗುತ್ತದೆ.

ಹಳೇ ಪ್ರಕರಣಗಳ ನಂಟು:

ರಾಜಾರೆಡ್ಡಿ ಇಂತಹ ಅಕ್ರಮಗಳಲ್ಲಿ ಭಾಗಿಯಾಗಿರುವುದು ಇದೇ ಮೊದಲಲ್ಲ. 2020ರ ನವೆಂಬರ್‌ನಲ್ಲಿ ಚೇಳೂರು ರಸ್ತೆಯಲ್ಲಿ 500ಕ್ಕೂ ಹೆಚ್ಚು ಮೂಟೆಗಳ ಪಡಿತರ ಅಕ್ಕಿ ವಾಹನವನ್ನು ನಿವೃತ್ತ ಯೋಧ ಶಿವಾನಂದರೆಡ್ಡಿ ತಹಸೀಲ್ದಾರ್ ಸಮ್ಮುಖದಲ್ಲಿ ವಾಹನ ಸಮೇತ ಹಿಡಿದುಕೊಟ್ಟಿದ್ದರು. ದಾಸ್ತಾನು ಕೇಂದ್ರದಲ್ಲಿ ಇಟ್ಟಿದಿದ್ದರು. ರಾಜಾರೆಡ್ಡಿಗೆ ಸೇರಿದ ಈಚರ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದಾಗ, ಆ ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ, ಈಗ ಮಕ್ಕಳ ಪೌಷ್ಠಿಕತೆಗಾಗಿ ನೀಡಬೇಕಾದ ಹಾಲಿನ ಪುಡಿಯನ್ನು ಐಸ್‌ಕ್ರೀಮ್ ಕಾರ್ಖಾನೆಗಳಿಗೆ ಸಾಗಿಸುತ್ತಿರುವುದು ಇವರು ಮಕ್ಕಳ ಆಹಾರಕ್ಕೂ ಕೈಹಾಕಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇಲಾಖೆಯ ಒಳಗಿನವರು ಶಾಮೀಲು:

ಅಂಗನವಾಡಿಗಳಿಗೆ ಮಾತ್ರ ಪೂರೈಕೆಯಾಗುವ ಹಾಲಿನ ಪುಡಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಹೊರಗಿನವರ ಕೈ ಸೇರಲು ಇಲಾಖೆಯ ಅಧಿಕಾರಿಗಳ ಸಹಾಯ ಸಹಕಾರವಿಲ್ಲದೆ ಸಾಧ್ಯವಿಲ್ಲ ಎಂಬ ಶಂಕೆ ವ್ಯಕ್ತವಾಗಿದೆ.

ಸಾರ್ವಜನಿಕರ ಪಟ್ಟು:

ಬಡ ಮಕ್ಕಳ ಪೌಷ್ಟಿಕಾಂಶವನ್ನು ಮಾರಾಟ ಮಾಡಿ ಹಣ ಮಾಡುತ್ತಿರುವ ಇಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಮತ್ತು ಈ ಜಾಲದಲ್ಲಿರುವ ಪ್ರತಿಯೊಬ್ಬರನ್ನೂ ಜೈಲಿಗಟ್ಟಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕಾಮ’ಚಂದ್ರರಾವ್‌ ಐಪಿಎಸ್‌ - ಪೊಲೀಸ್‌ ಸಮವಸ್ತ್ರದಲ್ಲೇ ಕಚೇರಿಯಲ್ಲಿ ಮಹಿಳೆಯರ ಜತೆ ಸರಸ
ಪವಿತ್ರಾಗೌಡಗೆ ಮನೆ ಊಟ ಪ್ರಶ್ನಿಸಿಹೈಕೋರ್ಟ್‌ಗೆ ರಾಜ್ಯ ಸರ್ಕಾರ ಅರ್ಜಿ