ಬೇಡಿಕೆ ಈಡೇರಿಕೆ ಆಗ್ರಹಿಸಿ 23ರಿಂದ ಅಂಗನವಾಡಿ ನೌಕರರ ಪ್ರತಿಭಟನೆ

KannadaprabhaNewsNetwork | Published : Jan 20, 2024 2:05 AM

ಸಾರಾಂಶ

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ 23 ರಿಂದ 25ರ ವರೆಗೆ ಪ್ರತಿಭಟನೆ ನಡೆಸಲು ಕೊಡಗು ಜಿಲ್ಲಾ ಅಂಗನವಾಡಿ ನೌಕರರ ಸಂಘ ನಿರ್ಧರಿಸಿದೆ. 23ರಂದು ಜಿಲ್ಲಾ ವ್ಯಾಪ್ತಿಯಲ್ಲಿರುವ ಸುಮಾರು 860 ಅಂಗನವಾಡಿ ಕೇಂದ್ರಗಳ ಕಾರ್ಯಕರ್ತರು ಕಾರ್ಯಸ್ಥಗಿತಗೊಳಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪೊನ್ನಂಪೇಟೆ ತಾಲೂಕು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ವಿ.ಎಸ್.ಸುಮಿತ್ರ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕನಿಷ್ಠ ವೇತನ ಮತ್ತು ಪಿಂಚಣಿ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ 23 ರಿಂದ 25ರ ವರೆಗೆ ಪ್ರತಿಭಟನೆ ನಡೆಸಲು ಕೊಡಗು ಜಿಲ್ಲಾ ಅಂಗನವಾಡಿ ನೌಕರರ ಸಂಘ ನಿರ್ಧರಿಸಿದೆ ಎಂದು ಪೊನ್ನಂಪೇಟೆ ತಾಲೂಕು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ವಿ.ಎಸ್.ಸುಮಿತ್ರ ತಿಳಿಸಿದ್ದಾರೆ.ನಗರದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸುಮಿತ್ರ, ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾ ವ್ಯಾಪ್ತಿಯ ಅಂಗನವಾಡಿ ನೌಕರರು ಪ್ರತಿಭಟನೆ ನಡೆಸಲಿದ್ದಾರೆ. 23ರಂದು ಜಿಲ್ಲಾ ವ್ಯಾಪ್ತಿಯಲ್ಲಿರುವ ಸುಮಾರು 860 ಅಂಗನವಾಡಿ ಕೇಂದ್ರಗಳ ಕಾರ್ಯಕರ್ತರು ಕಾರ್ಯಸ್ಥಗಿತಗೊಳಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಉಳಿದ ಎರಡು ದಿನಗಳ ಪ್ರತಿಭಟನೆ ಸಂದರ್ಭ ಅಂಗನವಾಡಿಗಳು ಎಂದಿನಂತೆ ಕಾರ್ಯನಿರ್ವಹಿಸಲು ಪರ್ಯಾಯ ವ್ಯವಸ್ಥೆ ಮಾಡುವುದು ಎಂದರು.ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಪ್ರಸ್ತುತ ಮಾಸಿಕ 11,500 ರು. ಗೌರವ ಧನವನ್ನಷ್ಟೆ ಪಡೆಯುತ್ತಿದ್ದಾರೆ. 2017ರ ಬಳಿಕ ಗೌರವ ಧನ ಹೆಚ್ಚಳವಾಗಿಲ್ಲ. ಬೆಲೆ ಏರಿಕೆಯ ಈ ದಿನಗಳಲ್ಲಿ ಕನಿಷ್ಠ 31 ಸಾವಿರ ವೇತನವನ್ನು ನೀಡಬೇಕೆಂದು ಒತ್ತಾಯಿಸಿದರಲ್ಲದೆ, ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗುವವರಿಗೆ ಕನಿಷ್ಟ 10 ಸಾವಿರ ಪಿಂಚಣಿ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿದರು.

ಅಂಗನವಾಡಿ ಸಿಬ್ಬಂದಿ ತಮಗೆ ಸೀಮಿತವಾದ ಕೆಲಸ ಕಾರ್ಯಗಳೊಂದಿಗೆ, ಇಲಾಖೇತರ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಸರ್ಕಾರದ ಭಾಗ್ಯ ಲಕ್ಷ್ಮಿ, ಮಾತೃವಂದನಾ, ಗೃಹಲಕ್ಷ್ಮಿ ಮೊದಲಾದವುಗಳಲ್ಲು ಅಂಗನವಾಡಿ ನೌಕರರನ್ನು ಬಳಸಿಕೊಳ್ಳಲಾಗುತ್ತಿದೆ. ಇಂತಹ ಇಲಾಖೇತರ ಕೆಲಸಗಳನ್ನು ಅಂಗನವಾಡಿ ನೌಕರರಿಗೆ ನೀಡುವುದನ್ನು ನಿಲ್ಲಿಸಬೇಕು ಮತ್ತು ಶಾಲಾ ಪೂರ್ವ ಮಕ್ಕಳ ಕಲಿಕೆಗೆ ಸಮಯ ಒದಗಿಸಬೇಕು. ಆದರೆ, ಇಂತಹ ನಮ್ಮ ಮೂಲಭೂತ ಸಮಸ್ಯೆಗಳನ್ನು ಕೇಳುವವರೆ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಮಡಿಕೇರಿ ತಾಲೂಕು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷ ಬಿ.ಎಸ್.ಸರೋಜ ಮಾತನಾಡಿ, ಅಂಗನವಾಡಿಗಳಿಗೆ ಪ್ರಸ್ತುತ ಪುಡಿಯ ರೂಪದಲ್ಲಿ ಸರಬರಾಜು ಆಗುತ್ತಿರುವ ಪೂರಕ ಪೌಷ್ಠಿಕ ಆಹಾರದಲ್ಲಿ ಅಗತ್ಯ ಬದಲಾವಣೆ ಮಾಡಬೇಕೆಂದರು.ವಿರಾಜಪೇಟೆ ತಾಲೂಕು ಅಂಗನವಾಡಿ ನೌಕರರ ಸಂಘದ ಕಾರ್ಯದರ್ಶಿ ಎಂ.ಬಿ.ಲೀಲಾವತಿ, ಪೊನ್ನಂಪೇಟೆ ತಾಲೂಕು ಸಂಘದ ಕಾರ್ಯದರ್ಶಿ ಬಿ.ಸಿ.ಲಲಿತಾಕ್ಷಿ ಹಾಗೂ ವಿರಾಜಪೇಟೆ ತಾಲೂಕು ಅಧ್ಯಕ್ಷೆ ಎ.ವಿ.ಶೀಲಾ, ಸೋಮವಾರಪೇಟೆ ತಾಲೂಕು ಅಂಗನವಾಡಿ ನೌಕರರ ಸಂಘದ ಖಜಾಂಚಿ ಎಂ.ಬಿ.ಜಮುನ ಇದ್ದರು.

Share this article