ಅಂಗನವಾಡಿ ಬಾವಿ ಬಂದ್ ಮಾಡಿದ ಕಂದಾಯ ಇಲಾಖೆ

KannadaprabhaNewsNetwork | Published : Feb 20, 2024 1:49 AM

ಸಾರಾಂಶ

ಅಂಗನವಾಡಿ ಮಕ್ಕಳಿಗೆ ನೀರಿನ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಶಿರಸಿಯ ಮಹಿಳೆ ಗೌರಿ ನಾಯ್ಕ ಬಾವಿ ತೋಡುತ್ತಿದ್ದರು. ಆದರೆ ಕಂದಾಯ ಇಲಾಖೆ, ತಾಲೂಕು ಪಂಚಾಯಿತಿ ಹಾಗೂ ಮಹಿಳಾ ಅಭಿವೃದ್ಧಿ ಇಲಾಖೆ ಮತ್ತು ಸ್ಥಳೀಯ ಹುತ್ಗಾರ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಬಂದು ಬಾವಿ ಬಂದ್‌ ಮಾಡಿಸಿದ್ದಾರೆ.

ಶಿರಸಿ: ಗಣೇಶ ನಗರದ ಅಂಗನವಾಡಿಯಲ್ಲಿ ಮಹಿಳೆಯೊಬ್ಬಳು ತೋಡುತ್ತಿದ್ದ ಬಾವಿಯನ್ನು ಕಂದಾಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಬಂದ್ ಮಾಡಲಾಗಿದೆ. ಗಣೇಶ ನಗರದ ಅಂಗನವಾಡಿ ಕೇಂದ್ರ ೬ರಲ್ಲಿ ಗೌರಿ ನಾಯ್ಕ ಮಕ್ಕಳಿಗಾಗಿ ಬಾವಿ ತೋಡಿ, ಕುಡಿಯುವ ನೀರಿನ‌ ವ್ಯವಸ್ಥೆಗೆ ಮುಂದಾಗಿದ್ದರು. ೧೫ ದಿನಗಳಿಂದ ಬಾವಿ ತೋಡುವ ಕಾರ್ಯ ನಡೆಸಿದ್ದು, ಅಂದಾಜು ೩೦ ಅಡಿ ಬಾವಿ ನಿರ್ಮಾಣ ಮಾಡಲಾಗಿತ್ತು. ಆದರೆ ಇದಕ್ಕೆ‌ ಮಹಿಳಾ ಅಭಿವೃದ್ಧಿ ಇಲಾಖೆಯ ಅನುಮತಿ ಇಲ್ಲ ಎಂಬ ಕಾರಣಕ್ಕೆ ಗೊಂದಲ ಉಂಟಾಗಿತ್ತು. ಕೊನೆಗೆ ಗೌರಿ ನಾಯ್ಕ ತಮ್ಮ ಕೆಲಸ ತಾನು ಮಾಡುತ್ತೇನೆ ಎಂದು ಬಾವಿಯನ್ನು ತೋಡುತ್ತಿದ್ದರು. ಉಸ್ತುವಾರಿ ಸಚಿವ ಮಂಕಾಳು ವೈದ್ಯ ಭಾನುವಾರ ಸ್ಥಳಕ್ಕೆ ಭೇಟಿ ನೀಡಿ, ಗೌರಿ ನಾಯ್ಕ ಅವರನ್ನು‌ ಸನ್ಮಾನಿಸಿದ್ದರು. ಬಳಿಕ ವಯಸ್ಸಿನ ಕಾರಣ ಇನ್ನೂ ಬಾವಿ ತೋಡದಂತೆ ಸೂಚಿಸಿದ್ದರು. ಅಲ್ಲದೆ ಸರ್ಕಾರದಿಂದಲೇ ಬಾವಿ ನಿರ್ಮಿಸುವುದಾಗಿ ಸಚಿವರು ಭರವಸೆ ನೀಡಿದ್ದರು. ಆದರೆ ಬಾವಿ ತೋಡಿ, ಮಕ್ಕಳಿಗೆ ನೀರು ಕೊಡುವುದಾಗಿ ಗೌರಿ ನಾಯ್ಕ ತಿಳಿಸಿದ್ದಾರೆ. ಇದರ ಬೆನ್ನಲ್ಲಿ ಸೋಮವಾರವೂ ಬಾವಿ ತೋಡುವ ಕೆಲಸ ಮುಂದುವರಿಸಿದ್ದಾರೆ.‌ಈ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಕಂದಾಯ ಇಲಾಖೆ, ತಾಲೂಕು ಪಂಚಾಯಿತಿ ಹಾಗೂ ಮಹಿಳಾ ಅಭಿವೃದ್ಧಿ ಇಲಾಖೆ ಮತ್ತು ಸ್ಥಳೀಯ ಹುತ್ಗಾರ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಬಂದು, ಬಾವಿಯನ್ನು ಮರದ ಹಲಗೆಗಳಿಂದ ಮುಚ್ಚಿದ್ದಾರೆ. ಜತೆಗೆ ಬಾವಿಯ ಸುತ್ತ ತಾತ್ಕಾಲಿಕ ಕಂಬಗಳನ್ನು ನಿಲ್ಲಿಸಿ, ಅದಕ್ಕೆ ಹಗ್ಗ ಕಟ್ಟಲಾಗಿದೆ. ಜತೆಗೆ ಬಾವಿಗೆ ಹೋಗುವ ದಾರಿಯಲ್ಲಿ ಗೇಟ್ ನಿರ್ಮಿಸಿ, ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ತಹಸೀಲ್ದಾರ್‌ ಶ್ರೀಧರ ಮುಂದಲಮನಿ, ತಾಪಂ ಕಾರ್ಯನಿರ್ವಹಣಾಧಿಕಾಧಿಕಾರಿ ಸತೀಶ ಹೆಗಡೆ, ಹುತ್ಗಾರ ಪಿಡಿಒ ಶಿವಕುಮಾರ, ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಅನಿತಾ ಮತ್ತಿತರ ಅಧಿಕಾರಿಗಳು ಇದ್ದರು.

ಸಹಾಯಕ ಆಯುಕ್ತರ ನಿರ್ದೇಶನದಂತೆ ಬಾವಿಯನ್ನು ಹಲಗೆ ಬಳಸಿ, ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ಶಿರಸಿ ತಹಸೀಲ್ದಾರ್‌ ಶ್ರೀಧರ ಮುಂದಲಮನಿ ಹೇಳಿದರು.

Share this article