ಅಂಗನವಾಡಿ ನೌಕರರ ಧರಣಿ: ಎರಡನೇ ದಿನ ಮುಂದುವರಿಕೆ

KannadaprabhaNewsNetwork |  
Published : Dec 19, 2024, 12:30 AM IST
18ಎಚ್‌ಪಿಟಿ1- ಹೊಸಪೇಟೆಯ ಜಿಲ್ಲಾಧಿಕಾರಿ ಕಚೇರಿ ಬಳಿ ಬುಧವಾರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್‌ ಅವರು ಅಂಗನವಾಡಿ ನೌಕರರ ಮನವಿ ಸ್ವೀಕರಿಸಿದರು. | Kannada Prabha

ಸಾರಾಂಶ

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆ ಬುಧವಾರ ಎರಡನೇ ದಿನವೂ ಮುಂದುವರೆಯಿತು.

ಹೊಸಪೇಟೆ: ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರನ್ನು ಕಾಯಂಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಸಮಿತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆ ಬುಧವಾರ ಎರಡನೇ ದಿನವೂ ಮುಂದುವರೆಯಿತು. ಸ್ಥಳಕ್ಕೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್‌ ಆಗಮಿಸಿ ಮನವಿ ಸ್ವೀಕರಿಸಿದರು.

ಗ್ರಾಚ್ಯುಟಿ ಹಣ ಕೂಡಲೇ ಬಿಡುಗಡೆ ಮಾಡಬೇಕು ಮತ್ತು ಇದನ್ನು ಎಲ್ಲರಿಗೂ ಅನ್ವಯಿಸಬೇಕು. 2018ರಿಂದ ಕೇಂದ್ರ ಸರ್ಕಾರ ಯಾವುದೇ ಗೌರವಧನ ಹೆಚ್ಚಳ ಮಾಡಿಲ್ಲವಾದ್ದರಿಂದ 25 ಸಾವಿರ ರು.ಗಳಿಗೆ ಗೌರವಧನ ಹೆಚ್ಚಿಸಬೇಕು. 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಘೋಷಣೆ ಮಾಡಿದ 15 ಸಾವಿರ ರು.ಗಳಿಗೆ ಗೌರವಧನ ಹೆಚ್ಚಿಸಬೇಕು. ನಿವೃತ್ತಿಯಾದವರಿಗೆ ಇಡುಗಂಟು ಅಥವಾ ಎನ್‌ಪಿಎಸ್ ಹಣವನ್ನು ಹಾಗೂ ₹10 ಸಾವಿರ ಮಾಸಿಕ ಪಿಂಚಣಿಯನ್ನು ನೀಡಬೇಕು ಎಂದು ಒತ್ತಾಯಿಸಿದರು.ಅಂಗನವಾಡಿ ಕೇಂದ್ರಗಳಿಗೆ ಕೊಡುವ ಪೂರಕ ಆಹಾರಕ್ಕೆ ಜಿಎಸ್‌ಟಿ ವಿಧಿಸಬಾರದು. ಘಟಕ ವೆಚ್ಚ ಹೆಚ್ಚಳ ಮಾಡಿ ಹಿಂದಿನಂತೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಮೆನು ಅಂತಿಮಗೊಳ್ಳುವ ವ್ಯವಸ್ಥೆ ಜಾರಿಯಾಗಬೇಕು. ಅಂಗನವಾಡಿ ಮೂಲಭೂತ ಸೌಕರ್ಯಗಳನ್ನು ನೀಡಬೇಕು. ಖಾಲಿ ಹುದ್ದೆಗಳಿಗೆ ಮೂರು ತಿಂಗಳೊಳಗೆ ನೇಮಕಾತಿಯಾಗಬೇಕು. ಇಲ್ಲದಿದ್ದರೆ ಅಧಿಕಾವಧಿ ವೇತನ ಕೊಡಬೇಕು. ಸಹಾಯಕಿ ಇಲ್ಲದ ಅಂಗನವಾಡಿ ಕೇಂದ್ರಗಳಲ್ಲಿ ಟೇಕ್ ಹೋಮ್ ಕೊಡಬೇಕು. ಇಲ್ಲದಿದ್ದರೆ ತಾತ್ಕಾಲಿಕ ಸಹಾಯಕಿಯನ್ನು ನೇಮಕಾತಿ ಮಾಡಿಕೊಳ್ಳುವ ಅಧಿಕಾರ ಕಾರ್ಯಕರ್ತೆಗೆ ಕೊಡಬೇಕು. ಖಾಲಿ ಇರುವ ಮತ್ತು ಹೊಸ ಕೇಂದ್ರಗಳಿಗೆ ಸರ್ಕಾರಿ ಆದೇಶದಂತೆ ಮುಂಬಡ್ತಿ, ವರ್ಗಾವಣೆಗಳನ್ನೂ ನೀಡಿ ನಂತರ ಹೊಸ ಆಯ್ಕೆ ಮಾಡಬೇಕು. ರಾಜಕೀಯ ಒತ್ತಡಕ್ಕೆ ಮಣಿದು ಅವಕಾಶದಿಂದ ವಂಚಿಸಬಾರದು. ಮಿನಿ ಅಂಗನವಾಡಿ ಕೇಂದ್ರಗಳನ್ನು ಪೂರ್ಣ ಕೇಂದ್ರಗಳನ್ನಾಗಿ ಪರಿವರ್ತಿಸುವ ತನಕ ಸಹಾಯಕಿಯನ್ನು ಕೊಡಬೇಕು. ಪೂರ್ಣ ಕಾರ್ಯಕರ್ತೆಗೆ ಕೊಡುವಷ್ಟು ಗೌರವಧನ ಹೆಚ್ಚಿಸಬೇಕು. ಪೌಷ್ಠಿಕ ಆಹಾರ ಮತ್ತು ಪೂರ್ವ ಪ್ರಾಥಮಿಕ ಶಿಕ್ಷಣ ಹಕ್ಕಾಗಬೇಕು. ಐಸಿಡಿಎಸ್ ಯೋಜನೆಯನ್ನು ಕಾಯಿದೆಯಾಗಿ ರೂಪಿಸಬೇಕು ಎಂದು ಒತ್ತಾಯಿಸಿದರು. ಮುಖಂಡ ಎನ್‌. ಯಲ್ಲಾಲಿಂಗ, ಸಂಘದ ಕೆ. ನಾಗರತ್ನ, ಶಕುಂತಲಾ, ನಾಗರತ್ನ, ಜಲಜಾಕ್ಷಿ, ಮಾರೆಕ್ಕ ಮತ್ತಿತರರಿದ್ದರು.

ಹೊಸಪೇಟೆಯ ಜಿಲ್ಲಾಧಿಕಾರಿ ಕಚೇರಿ ಬಳಿ ಬುಧವಾರ ಜಿಲ್ಲಾಧಿಕಾರಿ ದಿವಾಕರ್‌ ಅಂಗನವಾಡಿ ನೌಕರರ ಮನವಿ ಸ್ವೀಕರಿಸಿದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ