ಕೆರಳಿದ ಚಿಂಚೋಳಿ, ಚಿತ್ತಾಪುರ, ಸೇಡಂ ಕಬ್ಬು ರೈತರು

KannadaprabhaNewsNetwork | Published : Nov 16, 2024 12:36 AM

ಸಾರಾಂಶ

ಕಲಬುರಗಿ: ಮಾಲಿನ್ಯದ ಕಾರಣಗಳನ್ನೊಡ್ಡಿ ಚಿಂಚೋಳಿಯ ಸಿದ್ದಸಿರಿ ಸಕ್ಕರೆ ಕಾರ್ಖಾನೆಗೆ ಈ ಪ್ರಸಕ್ತ ಹಂಗಾಮಿನ ಕಬ್ಬು ನುರಿಸುವ ಪರವಾನಿಗೆ ನೀಡದ ರಾಜ್ಯ ಸರಕಾರದ ಕ್ರಮವನ್ನು ಪ್ರಶ್ನಿಸಿ ಕಳೆದ ಹಲವು ದಿನಗಳಿಂದ ಹೋರಾಟ ನಿರತರಾಗಿರುವ ಕಬ್ಬು ರೈತರು ವಾರದಿಂದ ಉಪವಾಸ ಸತ್ಯಾಗ್ರಹದಲ್ಲಿದ್ದಾರೆ.

ಕಲಬುರಗಿ: ಮಾಲಿನ್ಯದ ಕಾರಣಗಳನ್ನೊಡ್ಡಿ ಚಿಂಚೋಳಿಯ ಸಿದ್ದಸಿರಿ ಸಕ್ಕರೆ ಕಾರ್ಖಾನೆಗೆ ಈ ಪ್ರಸಕ್ತ ಹಂಗಾಮಿನ ಕಬ್ಬು ನುರಿಸುವ ಪರವಾನಿಗೆ ನೀಡದ ರಾಜ್ಯ ಸರಕಾರದ ಕ್ರಮವನ್ನು ಪ್ರಶ್ನಿಸಿ ಕಳೆದ ಹಲವು ದಿನಗಳಿಂದ ಹೋರಾಟ ನಿರತರಾಗಿರುವ ಕಬ್ಬು ರೈತರು ವಾರದಿಂದ ಉಪವಾಸ ಸತ್ಯಾಗ್ರಹದಲ್ಲಿದ್ದಾರೆ.ಏತನ್ಮಧ್ಯೆ ಸಿದ್ದಸಿರಿ ಸಕ್ಕರೆ ಕಾರ್ಖಾನೆ ರೈತರು ಉದ್ದಿಮೆ ವ್ಯಾಪ್ತಿಯಲ್ಲಿ ಬೆಳೆದು ನಿಂತಿರುವ ಕಬ್ಬು ಬೇರೆ ಕಾರ್ಖಾನೆಗಳಿಗೆ ಹಂಚಿಕೆ ಮಾಡಿ ಡಿಸಿ ಹೊರಡಿಸಿರುವ ಆದೇಶವನ್ನು ತಿರಸ್ಕರಿಸಿದ್ದಾರೆ. ಇದರಿಂದಾಗಿ ಸಿದ್ದಸಿರಿ ಕಾರ್ಖಾನೆ ಬಿಕ್ಕಟ್ಟು ತಾರಕಕ್ಕೇರಿದೆ.ಚಿಂಚೋಳಿ ಪಟ್ಟಣದಲ್ಲಿರುವ ಮೆ. ಸಿದ್ದಸಿರಿ ಸೌಹಾರ್ದ ಸಹಕಾರಿ ನಿಯಮಿತ ಎಥೆನಾಲ್ ಕಾರ್ಖಾನೆಯು ಸ್ಥಗಿತಗೊಂಡಿದ್ದರಿಂದ ರೈತರ ಹಿತದೃಷ್ಟಿಯಿಂದ ಪ್ರಸಕ್ತ 2024-25ನೇ ಸಾಲಿನ‌ ಹಂಗಾಮಿಗೆ ಸೀಮಿತವಾಗಿ ಸದರಿ ಕಾರ್ಖಾನೆ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ಬೆಳೆಯಲಾದ ಕಬ್ಬನ್ನು ಸಮೀಪದ ಇತರೆ ಕಾರ್ಖಾನೆಗಳಿಗೆ ಮಾರಾಟ ಮಾಡಲು ತಾತ್ಕಲಿಕವಾಗಿ ಹಂಚಿಕೆ ಮಾಡಿ ಜಿಲ್ಲಾಧಿಕಾರಿ‌ ಬಿ.ಫೌಜಿಯಾ ತರನ್ನುಮ್ ಹೊರಡಿಸಿರುವ ಆದೇಶ ಹೋರಾಟ ನಿರತ ರೈತರನ್ನು ಕೆರಳಿಸಿದೆ.ಸಿದ್ದಸಿರಿ ಕಾರ್ಖಾನೆ ಕಬ್ಬಿಗೆ ಸರಿಯಾದ ಬೆಲೆ ನೀಡಿತ್ತಲ್ಲದೆ ಸಮಯದೊಳಗೇ ರೈತರ ಕೈ ಹಿಡಿದಿತ್ತು. ಇದರಿಂದಾಗಿ ರೈತರು ಇದೇ ಕಾರ್ಖಾನೆಗೆ ಕಬ್ಬು ಮಾರಲು ಮುಂದಾಗಿದ್ದೇವು. ಇದೀಗ ಕಾರ್ಖಾನೆ ಆರಂಭವಾಗದ ಹಿನ್ನೆಲೆ ಕಬ್ಬು ಪ್ರದೇಶ ಬೇರೆಡೆ ಹಂಚಿಕೆ ಮಾಡಿದ್ದು ಸರಿಯಲ್ಲ. ನಾವು ಬೇರೆಡೆ ಕಬ್ಬುಮಾರಿದರೆ ಬಿಲ್‌ ಪಾವತಿ, ಕಬ್ಬಿನ ತೂಕ, ಹಣ ಪಾವತಿ ಇವನ್ನೆಲ್ಲ ಜಿಲ್ಲಾಡಳಿತ ಹೊಣೆ ಹೊರವುದೆ ? ಎಂದು ರೈತರು ಪ್ರಶ್ನಿಸುತ್ತಿದ್ದಾರೆ.ಇವೆಲ್ಲ ವಿವಾದಗಳ ನಡುವೆಯೇ ಚಿಂಚೋಳಿ ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲಿಸಿರುವ ಬಿಜೆಪಿಯ ಮಾಜಿ ಶಾಸಕರು, ವಕ್ತಾರರಾದ ರಾಜಕುಮಾರ್‌ ಪಾಟೀಲ್‌ ತೇಲ್ಕೂರ್‌ ನೇತೃತ್ವದ ನಿಯೋಗ ಡಿಸಿಯವರನ್ನು ಭೇಟಿ ಮಾಡಿದ್ದು, ಸಿದ್ದಸಿರಿ ಕಾರ್ಖಾನೆಗೆ ಷರತ್ತುಗಳನ್ನು ಹಾಕಿ 1 ವರ್ಷಕ್ಕೆ ಕಬ್ಬು ನುರಿಸಲು ಪರವಾನಿಗೆ ನೀಡಲೇಬೇಕು. ಇಲ್ಲದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಕಬ್ಬು ರೈತರ ಕೋಪತಾಪ, ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಕೊನೆಯ ಎಚ್ಚರಿಕೆ ಗಂಟೆ ಬಾರಿಸಿದ್ದಾರೆ.

ಜಿಲ್ಲಾಡಳಿತ ಜವಾಬ್ದಾರಿ ತಗೊದುಕೊಳ್ತದಾ ? - ತೇಲ್ಕೂರ್‌ ಪ್ರಶ್ನೆ

ಸಿದ್ದಸಿರಿ ಕಾರ್ಖಾನೆಗೆ ಅನುಮತಿ ನಿರಾಕರಿಸಿರುವ ಸರಕಾರ ಇದೀಗ ಡಿಸಿ ಮೂಲಕ ಕಬ್ಬು ಪ್ರದೇಶ ಹಂಚಿಕೆ ಮಾಡಿದೆ. ಹಾಗಾದರೆ ಕಬ್ಬಿಗೆ ಪ್ರತಿ ಟನ್‌ಗೆ 2,650 ರು. ಬೆಲೆ, ಸಮಯಕ್ಕೆ ಸರಿಯಾಗಿ ಹಣ ಪಾವತಿ, ಸಕ್ಕರೆ ಅಂಶದ ವಿಚಾರ, ತೂಕ ಇತ್ಯಾದಿ ಬಗ್ಗೆ ಗ್ಯಾರಂಟ ಕೊಡಲಿ. ಜಿಲ್ಲಾಡಳಿತ ಇವೆಲ್ಲ ತಮ್ಮ ಜವಾಬ್ದಾರಿ ಎಂದು ಬರೆದು ಕೊಡಲ ಎಂದು ಮಾಜಿ ಶಾಸಕ ರಾಜಕುಮಾರ್‌ ಪಾಟೀಲ್‌ ತೇಲ್ಕೂರ್‌ ಆಗ್ರಹಿಸಿದರು.ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಣ್ಣೊರೆಸುವ ತಂತ್ರ ಎಂಬಂತೆ ಕಬ್ಬು ಪ್ರದೇಶ ಹಂಚಿದರೆ ಆಗದು, ರೈತರು ಯಾರಿಗೂ ಕಬ್ಬು ಮಾರೋದಿಲ್ಲ. ಸಿದ್ದಸಿರಿ ಶುರುವಾಗಬೇಕು, ಅವರಿಗೇ ಕಬ್ಬು ಕೊಡೋದು ಎಂದು ರೈತರೇ ಸಂಕಲ್ಪಿಸಿದ್ದಾರೆಂದು ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ, ಸಂಸದ ರಾಧಾಕೃಷ್ಣ, ವೈದ್ಯಕೀಯ ಶಿಕ್ಷಣ ರ ಖಾತೆ ಸಚಿವರಾದ ಡಾ.ಶರಣಪ್ರಕಾಶ ಪಾಟೀಲರನ್ನು ತ್ರಿಮೂರ್ತಿ ಎಂದು ಬಣ್ಣಿಸುತ್ತ ಇವರು ಮನಸ್ಸು ಮಾಡಿದರೆ ಕಾರ್ಖಾನೆ ಈಗಲೇ ಶುರುವಾಗುತ್ತದ ಎಂದರು.ರೈತರ ಗೋಳು ನೋಡಲಾಗದೆ ಬಿಜೆಪಿ ಹೋರಾಟಕ್ಕೆ ಬೆಂಬಲವಾಗಿ ನಿಂತಿದೆ. ನಮಗೆ ಯಾವುದೇ ಕೀರ್ತಿ ಬೋಕಾಗಿಲ್ಲ. ಇವರೇ ಮುಂದಾಗಿ ಕಾರ್ಖಾನೆ ಶುರುಮಾಡಿಸಿ ತಾವೇ ಅದರ ಕೀರ್ತಿ ಪಡೆಯಲಿ ಎಂದರು. ಚಿಂಚೋಳಿಯಿಂದಲೇ ತಾವು ತ್ರಿಮೂರ್ತಿಗಳನ್ನು ಫೋನ್‌ ಕರೆ ಮಾಡಿ ಮಾತನಾಡಿಸಲು ಯತ್ನಿಸಿದ್ದಾಗಿ ಹೇಳಿ, ಈ ಪೈಕಿ ಶರಣಪ್ರಕಾಶರು ಮಾತನಾಡಿದ್ದು, ವಾರದೊಳಗೆ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಆದರೆ ಇನ್ನೂ ಆ ಭರವಸೆ ಈಡೇರಿಲ್ಲ ಎಂದು ತಿಳಿಸಿದರು.ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಪರಿಶೀಲನೆ ನಡೆಯಲಿ: ಜಿಲ್ಲೆಯಲ್ಲಿರುವ ಸಿಮೆಂಟ್‌ ಹಾಗೂ ಸಕ್ಕರೆ ಕಾರ್ಖಾನೆಗಳು ಸಾಕಷ್ಟು ಮಾಲಿನ್ಯ ಮಾಡುತ್ತಿದ್ದರೂ ಕೇಳೋರಿಲ್ಲ. ಉದ್ಯೋಗ ನೀಡುತ್ತಿವೆಯಲ್ಲವೆಂದು ನಾವೂ ಸುಮ್ಮನಿದ್ದೇವು. ಈಗ ಸಿದ್ದಸಿರಿಗೆ ರಾಜಕೀಯವಾಗಿ ವಿರೋಧ ವ್ಯಕ್ತವಾಗಿರೋದು ಸ್ಪಷ್ಟ. ಹೀಗಾಗಿ ನಾವೂ ಈಗ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ಮಾಡಿ ಜಿಲ್ಲೆಯ ಎಲ್ಲಾ ಸಿಮಂಟ್‌, ಸಕ್ಕರೆ ಕಾರ್ಖಾನೆಗಳ ಪರಿಶೀಲನೆ ಮಾಡಲು ಆಗ್ರಹಿಸುತ್ತೇವೆ. ಪರಿಶೀಲನೆಯಲ್ಲಿ ಯಾವ ಕಾರ್ಖಾನೆ ಮಾಲಿನ್ಯಕಾರಕವೋ ಅದರ ವಿರುದ್ಧ ಕ್ರಮವಾಗಲಿ ಎಂದು ತೇಲ್ಕೂರ್‌ ಸವಾಲು ಹಾಕಿದರು.ಕಲಬುರಗಿಯಲ್ಲಿರೋ ಸಿಮೆಂಟ್‌ ಹಾಗೂ ಸಕ್ಕರೆ ಕಾರ್ಖಾನೆಗಳೆಲ್ಲವೂ ಮಾಲಿನ್ಯ ಮಾಡುತ್ತಿವೆ. ಜನರಿಗೆ ಉದ್ಯೋಗ ಸಿಗುತ್ತಿದೆ, ಅಲ್ಪ ಹಣ ಹರಿದಾಡುತ್ತಿದೆ ಎಂದು ನಾವು ಸುಮ್ಮನಿದ್ದೇವು. ಈಗ ವಿನಾಕಾರಣ ಸಿದ್ದಸಿರಿಯಂತಹ ಕಾರ್ಖಾನೆಗೆ ಅಡಚಣೆ ಮಾಡುತ್ತಿದ್ದಾರೆ. ಈಗ ನಾವು ಎಲ್ಲ ವಿಷಯಗಳ ಪರಿಶೀಲನೆಗೆ ಪಟ್ಟು ಹಿಡಿಯುತ್ತೇವೆಂದು ಹೇಳಿದರು.

ಜಿಲ್ಲಾಡಳಿತಕ್ಕೆ ಕೊನೆಯ ಎಚ್ಚರಿಕೆ ಪತ್ರ ಸಲ್ಲಿಕೆಜಿಲ್ಲಾಧಿಕಾರಿಗಳನ್ನು ಭೇಟಿ ಮಾಡರುವ ಬಿಜೆಪಿ ನಿಯೋಗ ಜಿಲ್ಲಾಡಳಿತಕ್ಕೆ ಕೊನೆಯ ಎಚ್ಚರಿಕೆ ಪತ್ರ ಸಲ್ಲಿಸಿದೆ.

ಕೂಡಲೇ ಷರತ್ತುಬದ್ಧವಾಗಿಯಾದರೂ ಸಿದ್ದಸಿರಿ ಪವರ್‌, ಎಥನಾಲ್‌ ಕಾರ್ಖಾನೆಗೆ ಅನುಮತಿಸಬೇಕು. ಕಬ್ಬು ಬೆಳೆಗಾರರು, ಕಂಪನಿ ಮುಖ್ಯಸ್ಥರು, ಜಿಲ್ಲೆಯ ರೈತ ಹೋರಾಟಗಾರರನ್ನೊಳಗೊಂಡು ಸಭೆ 3 ದಿನದಲ್ಲಿ ಕರೆದು ಚರ್ಚಿಸಬೇಕು. ರಾಜ್ಯ ಸರಕಾರ ಸಿದ್ದಸಿರಿ ಇಥೆನಾಲ್‌ ಕಂಪನಿ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಹೂಡಿರುವ ದಾವೆ ತಕ್ಷಣ ವಾಪಸ್‌ ಪಡೆಯಬೇಕು ಎಂದು ಎಚ್ಚರಿಕೆ ಪತ್ರದಲ್ಲಿ ಒತ್ತಾಯಿಸಲಾಗಿದೆ.

ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದ ಸಮೀತಿ ರಚಿಸಿ ಬೀದರ್‌, ಕಲಬುರಗಿ ಜಿಲ್ಲೆಯ ಸಿಮೆಂಟ್‌, ಸಕ್ಕರೆ ಕಾರ್ಖಾನೆಗಳ ಮಾಲಿನ್ಯ ಕಾರಕ ಅಂಶಗಳ ಪರಿಶೀಲನೆ ಮಾಡಬೇಕು. ಸಿದ್ದಸಿರಿ ಕಬ್ಬು ಪ್ರದೇಶ ಅನ್ಯ ಉದ್ದಿಮೆಗಳಿಗೆ ಹಂಚಿರೋದನ್ನು ರೈತರು ಒಪ್ಪೋದಿಲ್ಲ, ಕೂಡಲೇ ಸರಕಾರ ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಲಾಗಿದೆ.

Share this article