ಧಾರವಾಡ: ಅರಣ್ಯ ನಾಶದಿಂದ ಉಂಟಾಗುತ್ತಿರುವ ಪ್ರಾಣಿ ಮತ್ತು ಮಾನವ ಸಂಘರ್ಷ ತಪ್ಪಿಸಲು ತೊಂದರೆಯಲ್ಲಿರುವ ವನ್ಯಜೀವಿಗಳನ್ನು ಸಂರಕ್ಷಿಸಬೇಕು. ಅವುಗಳ ಸ್ವಚ್ಛಂದ ಜೀವನ ಉಳಿಸಿ-ಬೆಳೆಸಲು ಎಲ್ಲರೂ ಪ್ರಯತ್ನಿಸಬೇಕು ಎಂದು ಕರ್ನಾಟಕ ವನ್ಯಜೀವಿ ಮಂಡಳಿ ಸದಸ್ಯೆ ವೈಶಾಲಿ ಕುಲಕರ್ಣಿ ಹೇಳಿದರು.ಅರಣ್ಯ ಇಲಾಖೆಯ ಧಾರವಾಡ ಪ್ರಾದೇಶಿಕ ವಿಭಾಗದ ಧಾರವಾಡ ವೃತ್ತದಿಂದ 70ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಆಯೋಜಿಸಿದ್ದ ಕಾಲ್ನಡಿಗೆ ಜಾಥಾದಲ್ಲಿ ಮಾತನಾಡಿದರು.
ಅರಣ್ಯ ನಾಶದಿಂದಾಗಿ ಪ್ರಾಣಿಗಳು ನಾಡಿಗೆ ಆಗಮಿಸುತ್ತಿದ್ದು, ಇದರಿಂದ ಮಾನವ ಹಾಗೂ ಪ್ರಾಣಿ ಸಂರ್ಘಷ ದಿನದಿಂದ ದಿನಕ್ಕೆ ಸಾಮಾನ್ಯವಾಗುತ್ತಿದೆ. ಇದನ್ನು ತಪ್ಪಿಸಲು ಮತ್ತು ಅರಣ್ಯ ನಾಶ ತಡೆಗಟ್ಟಲು ಸರ್ಕಾರ ಅರಣ್ಯ ಒತ್ತುವರಿ ತೆರವುಗೊಳಿಸಲು ಕಠಿಣ ಕ್ರಮ ಕೈಗೊಂಡಿದೆ ಎಂದು ಹೇಳಿದರು.
ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಲ್ಲೆಯ ಭೂಪ್ರದೇಶ ನೋಡಿದಾಗ ಶೇ. 33ರಷ್ಟು ಅರಣ್ಯ ಪ್ರದೇಶ ಇರಬೇಕು. ಆದರೀಗ ಜಿಲ್ಲೆಯಲ್ಲಿ ಶೇ. 8.5ರಷ್ಟು ಅರಣ್ಯವಿದೆ. ಜಿಲ್ಲೆಯಲ್ಲಿ ಕನಿಷ್ಠ ಶೇ. 20ರಷ್ಟು ಭೂಪ್ರದೇಶವನ್ನು ಅರಣ್ಯೀಕರಣಗೊಳಿಸಲು ಅರಣ್ಯ ಇಲಾಖೆಯಿಂದ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಿವಿಧ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.ಕಲಘಟಗಿ, ಅಳ್ನಾವರ ಹಾಗೂ ಧಾರವಾಡ ತಾಲೂಕಿನ ಕೆಲವು ಪ್ರದೇಶ ಗಡಿ ಜಿಲ್ಲೆಗಳ ಅರಣ್ಯಕ್ಕೆ ಹೊಂದಿಕೊಂಡಿದ್ದು, ತಕ್ಕಮಟ್ಟಿಗೆ ಅರಣ್ಯದಿಂದ ಆವೃತವಾಗಿದೆ. ಹೀಗಾಗಿ ಚಿರತೆ ಜಿಲ್ಲೆಗೆ ಆಗಮಿಸುತ್ತಿರುವುದು ಸಾಮಾನ್ಯವಾಗಿದೆ. ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಕಲಘಟಗಿ ಭಾಗದ ಅರಣ್ಯದಲ್ಲಿ ಆನೆಗಳು ಸಹ ಆಗಮಿಸಿ ಎರಡು ಮೂರು ತಿಂಗಳು ವಾಸಿಸುತ್ತಿವೆ ಎಂದರು.
ಈ ವೇಳೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರಿಮಳಾ ವಿ.ಎಚ್., ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಶಿವಕುಮಾರ, ಪಿ.ಎಸ್. ವರೂರ, ಪ್ರದೀಪ ಎಸ್. ಪವಾರ, ಯಲ್ಲಾನಾಯಕ ಹಮಾನಿ ಇದ್ದರು.