ಗದಗ: ಹೈನೋದ್ಯಮ ಸಾರ್ವಜನಿಕರ ಆರೋಗ್ಯ ವೃದ್ಧಿಯೊಂದಿಗೆ ಗ್ರಾಮೀಣ ಜನರ ಆರ್ಥಿಕ ಸ್ವಾವಲಂಬನೆಗೆ ಕಾರಣವಾಗಿದೆ. ಇದನ್ನು ಬೆಳೆಸುವ ನಿಟ್ಟಿನಲ್ಲಿ ಕೆಎಂಎಫ್ ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಲಿಂಗರಾಜಗೌಡ ಪಾಟೀಲ ಹೇಳಿದರು.
ಅವರು ಜಿಲ್ಲೆಯ ಬೆಳ್ಳಟ್ಟಿ ಗ್ರಾಮದಲ್ಲಿನ ಎಂಪಿಎಂಸಿ ಸಭಾಭವನದಲ್ಲಿ ಶುಕ್ರವಾರ ಸಹಕಾರ ಇಲಾಖೆ, ರಾಜ್ಯ ಸಹಕಾರ ಮಹಾಮಂಡಳ ನಿ, ಜಿಲ್ಲಾ ಸಹಕಾರ ಯೂನಿಯನ್, ಗದಗ ಹಾಗೂ ಧಾರವಾಡ ಹಾಲು ಒಕ್ಕೂಟ ಇವರುಗಳ ಸಂಯುಕ್ತ ಆಶ್ರಯದಲ್ಲಿ ಮುಂಡರಗಿ, ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕುಗಳ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ಆಯೋಜಿಸಲಾಗಿದ್ದ ವಿಶೇಷ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಹಾಲನ್ನು ಜಾಗತಿಕ ಆಹಾರವನ್ನಾಗಿ ವಿಶ್ವಕ್ಕೆ ಪರಿಚಯಿಸುವುದು ಮತ್ತು ಹೈನೋದ್ಯಮದ ಕಾರ್ಯಚಟುವಟಿಕೆ ಪ್ರೋತ್ಸಾಹಿಸುವುದು ಇದರ ಪ್ರಮುಖ ಗುರಿಯಾಗಿದೆ. ವಿಶ್ವದಾದ್ಯಂತ 100 ಕೋಟಿಗೂ ಅಧಿಕ ರೈತ ಕುಟುಂಬಗಳು ಹೈನುಗಾರಿಕೆಯಲ್ಲಿ ತೊಡಗಿಕೊಂಡು ಗುಣಮಟ್ಟದ ಹಾಲು ಉತ್ಪಾದನೆಯೊಂದಿಗೆ ಅವರ ಜೀವನ ಸುಧಾರಣೆಗೂ ಸಹಕಾರಿಯಾಗಿರುತ್ತದೆ ಎಂದರು. ದೇಶದ ಆರ್ಥಿಕತೆಗೆ ಪೂರಕವಾಗಿ ಒತ್ತು ನೀಡಲು ಗ್ರಾಮೀಣ ಪ್ರದೇಶದ ಹೈನುಗಾರಿಕೆ ಹೆಚ್ಚು ಒತ್ತು ನೀಡಬೇಕಾಗಿದೆ. ಹಾಲು ಉತ್ಪಾದಕರು ಹೆಚ್ಚಿನ ಮಟ್ಟದಲ್ಲಿ ಆರ್ಥಿಕವಾಗಿ ಸದೃಢವಾಗಬೇಕಾದರೆ, ಉತ್ಪಾದನೆ ಹೆಚ್ಚಾಗಬೇಕು ಅದರಿಂದ ಸಂಘವು ಹೆಚ್ಚಿನ ಲಾಭ ಹೊಂದಲು ಸಾಧ್ಯವಾಗುತ್ತದೆ. ಈ ಆಯಾಮಗಳಲ್ಲಿ ಹೊಸ ಯೊಜನೆಗಳನ್ನು ಕೈಗೊಳ್ಳಬೇಕಾಗಿದೆ ಎಂದರು. ಹಿರಿಯ ಸಹಕಾರಿ ಪ್ರಕಾಶ ಮಹಾಜನಶೆಟ್ಟರ ಹಿರಿಯ ಸಹಕಾರಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.ಧಾರವಾಡ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಿ.ಟಿ. ಕಳಸದ ಮಾತನಾಡಿ, 1983ರಲ್ಲಿ ನಂದಿನಿ ಹೆಸರನ್ನು ತನ್ನ ಉತ್ಪನ್ನಗಳ ಬ್ರ್ಯಾಂಡ್ ಆಗಿ ಕೆ.ಎಂ.ಎಫ್. ಘೋಷಿಸಿತು. ನಂದಿನಿ ಎಂಬುದು ಹಿಂದೂ ದೇವತೆಯ ಹೆಸರು, ಹಾಗೆಯೇ ಗೋವಿನ ಹೆಸರುಗಳಲ್ಲಿ ಒಂದು ಹೀಗಾಗಿ, ನಂದಿನಿ ಹೆಸರನ್ನು ಆಯ್ಕೆ ಮಾಡಲಾಗಿದೆ ಎಂದು ಅದರ ಹಿನ್ನೆಲೆ ತಿಳಿಸಿದರು.
ಅಧ್ಯಕ್ಷತೆಯನ್ನು ಯೂನಿಯನ್‌ದ ಉಪಾಧ್ಯಕ್ಷ ವೈ.ಎಫ್.ಪಾಟೀಲ ವಹಿಸಿ ಮಾತನಾಡಿದರು.ನಿರ್ದೇಶಕ ಶಿದ್ದನಗೌಡ ಪಾಟೀಲ, ಸಹಕಾರ ಅಭಿವೃದ್ಧಿ ಅಧಿಕಾರಿ ಕೆ.ಸಿ.ಕೂಸನೂರಮಠ, ಮಾರಾಟಾಧಿಕಾರಿ ಬಿ.ಆರ್. ನಿಡಗುಂದಿ, ಡಾ.ರಾಕೇಶ ತಲ್ಲೂರ, ಹಾಲು ಒಕ್ಕೂಟದ ಜಿಲ್ಲಾ ಮುಖ್ಯಸ್ಥರಾದ ಪ್ರಸನ್ನ ಪಟ್ಟೇದ, ಹಾಲು ಒಕ್ಕೂಟದ ಮುಂಡರಗಿ, ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕಿನ ವಿಸ್ತರಣಾಧಿಕಾರಿ ಸಿ.ಎಸ್. ಕಲ್ಲನಗೌಡರ, ಬಸವರಾಜ ಎಸ್. ಜುಮ್ಮಣ್ಣವರ, ಉಮೇಶ ಹುಂಡೇಕಾರ ಉಪಸ್ಥಿತರಿದ್ದರು.ತರಬೇತಿ ಕಾರ್ಯಾಗಾರದಲ್ಲಿ ಮಾರುಕಟ್ಟೆಯ ಮೇಲೆ ಹಾಲಿನ ಗುಣಮಟ್ಟ ಪ್ರಭಾವ ಕುರಿತು, ಡಾ. ವೀರೇಶ ತರಲಿ, ಡಾ.ಎಂ.ಬಿ. ಮಡಿವಾಳರ, ಬಿ.ಪಿ. ಹಿರೇಮಠ ವಿವಿಧ ವಿಷಯಗಳ ಮೇಲೆ ಉಪನ್ಯಾಸ ನೀಡಿದರು. ಪ್ರಾರಂಭದಲ್ಲಿ ಯಳವತ್ತಿ ಹಾಗೂ ಕಡಕೋಳ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳ ಗಂಗಾ ಮಲ್ಲರಡ್ಡಿ, ಭಾಗೀರಥಿ ಭಂಡಾರಿ ಪ್ರಾರ್ಥಿಸಿದರು. ಜಿಲ್ಲಾ ಸಹಕಾರ ಯೂನಿಯನ್ನಿನ ಸಿಇಓ ಚಂದ್ರಶೇಖರ ಕರಿಯಪ್ಪನವರ ಸ್ವಾಗತಿಸಿ, ನಿರೂಪಿಸಿದರು. ವಿಸ್ತರಣಾಧಿಕಾರಿ ಸಿ.ಎಸ್.ಕಲ್ಲನಗೌಡರ ವಂದಿಸಿದರು.