ಬೇಸಿಗೆಯಲ್ಲಿ ಪ್ರಾಣಿ-ಪಕ್ಷಿಗಳಿಗೆ ಬಿಸಿಲ ಬಾಧೆ!

KannadaprabhaNewsNetwork | Published : Mar 20, 2025 1:15 AM

ಸಾರಾಂಶ

ಪಶ್ಚಿಮ ಘಟ್ಟಗಳ ಬಾಗಿಲು ಎನಿಸಿರುವ ಧಾರವಾಡಕ್ಕೆ ಅರಣ್ಯ ಪ್ರದೇಶದಿಂದ ಆಹಾರ, ನೀರು ಅರಿಸಿ ಅನೇಕ ಪ್ರಾಣಿಗಳು ದಾಂಗುಡಿ ಇಡುತ್ತವೆ.

ಬಸವರಾಜ ಹಿರೇಮಠ

ಧಾರವಾಡ: ಅತೀವ ಬಿಸಿಲಿನ ವಾತಾವರಣದ ಪರಿಣಾಮಗಳು ಬರೀ ಮನುಷ್ಯರಿಗೆ ಮಾತ್ರವಲ್ಲದೇ ಪ್ರಾಣಿ-ಪಕ್ಷಿಗಳಿಗೂ ಅನ್ವಯಿಸುತ್ತದೆ. ಬೇಸಿಗೆಯಲ್ಲಿ ಅವುಗಳಿಗೂ ಕುಡಿಯುವ ನೀರಿನ ಕೊರತೆ, ಆಹಾರ ಸಮಸ್ಯೆ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ತೊಂದರೆಗಳಾಗುತ್ತಿದ್ದು, ಗಮನಿಸಬೇಕಿದೆ.

ಬೇಸಿಗೆಯ ಬಿರು ಬಿಸಿಲಿಗೆ ಪ್ರಾಣಿ-ಪಕ್ಷಿ ಸಂಕುಲ ಅನೇಕ ಕಷ್ಟಗಳನ್ನು ಅನುಭವಿಸುತ್ತವೆ. ಆದರೆ, ಸಾಮಾನ್ಯವಾಗಿ ಅವುಗಳ ಸಂಕಷ್ಟ ಮನುಷ್ಯನ ಗಮನಕ್ಕೆ ಬಾರದೇ ಇರುವುದು ಸೋಜಿಗದ ಸಂಗತಿ. ಪಶ್ಚಿಮ ಘಟ್ಟಗಳ ಬಾಗಿಲು ಎನಿಸಿರುವ ಧಾರವಾಡಕ್ಕೆ ಅರಣ್ಯ ಪ್ರದೇಶದಿಂದ ಆಹಾರ, ನೀರು ಅರಿಸಿ ಅನೇಕ ಪ್ರಾಣಿಗಳು ದಾಂಗುಡಿ ಇಟ್ಟಿರುವುದು ಗೊತ್ತಿರುವ ಸಂಗತಿ.

ಕಾಡು ಪ್ರಾಣಿಗಳ ದಾಳಿ

ಕಲಘಟಗಿ, ಧಾರವಾಡ-ಹುಬ್ಬಳ್ಳಿಗೆ ಚಿರತೆಯ ಪ್ರವೇಶ ಸಾಮಾನ್ಯ. ಆನೆಗಳ ಹಿಂಡು, ಕಾಡುಕೋಣಗಳೂ ಇಲ್ಲಿಗೆ ಬಂದಿವೆ. ಇವು ಬಂದಿರುವುದು ಬೇಸಿಗೆಯಲ್ಲಿಯೇ ಎನ್ನುವುದು ವಿಶೇಷ. ಇನ್ನು, ಮಂಗಗಳ ಹಾವಳಿ ಸಹ ಬೇಸಿಗೆಯಲ್ಲಿಯೇ..! ಏಪ್ರಿಲ್‌, ಮೇ ತಿಂಗಳಲ್ಲಿಯೇ ಹೆಚ್ಚಾಗಿ ಅರಣ್ಯದಿಂದ ನೀರು, ಆಹಾರ ಅರಿಸಿ ಬರುತ್ತಿದ್ದು, ಅರಣ್ಯ ಇಲಾಖೆಯು ಅರಣ್ಯದಲ್ಲಿ ತಾತ್ಕಾಲಿಕ ಗುಂಡಿಗಳನ್ನು ನಿರ್ಮಿಸಿ ಬೇಸಿಗೆಯಲ್ಲಿ ನೀರು ಬಿಡುವ ವ್ಯವಸ್ಥೆ ಮಾಡುವುದು ಹಾಗೂ ಅರಣ್ಯದ ಅಂಚಿನಲ್ಲಿ ಹುಲ್ಲುಗಾವಲು ಪ್ರದೇಶ ಹೆಚ್ಚಿಸುವ ಕಾರ್ಯ ಮಾಡಬೇಕು ಎನ್ನುವುದು ಪರಿಸರವಾದಿಗಳ ಆಗ್ರಹವಾಗಿದೆ.

ದಿನದಿಂದ ದಿನಕ್ಕೆ ನಗರ ಪ್ರದೇಶದಲ್ಲಿನ ಗಿಡಮರಗಳಿಗೆ ಅಭಿವೃದ್ಧಿಯ ಹೆಸರಿನಲ್ಲಿ ಕೊಡಲಿ ಏಟು ಬೀಳುತ್ತಿದೆ. ನಗರ ಪ್ರದೇಶದ ಸಮೀಪದ ಗ್ರಾಮಗಳಲ್ಲಿನ ಫಲವತ್ತಾದ ಹೊಲಗಳೂ ಸಹ ವಸತಿ ಪ್ರದೇಶಗಳಾಗುತ್ತಿವೆ. ಧಾರವಾಡ ಸುತ್ತಲಿನ ಗುಡ್ಡಗಳು ಬೋಳಾಗಿವೆ. ಎಲ್ಲೆಡೆ ಸಿಮೆಂಟ್‌ ರಸ್ತೆಯಿಂದಾಗಿ ಬಿಸಿಲ ಧಗೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಪ್ರಾಣಿ-ಪಕ್ಷಿಗಳಿಗೆ ಬೇಸಿಗೆಯಲ್ಲಿ ಕುಡಿಯುವ ನೀರು, ಆಹಾರದ ಸಮಸ್ಯೆಯಾಗುತ್ತಿದೆ. ಮೂಕ ಪ್ರಾಣಿಗಳ ಬಗ್ಗೆ ತುಸು ಕಾಳಜಿ ಇದ್ದವರು ಮನೆ ಎದುರು ಅಥವಾ ಅಟ್ಟದ ಮೇಲೆ ನೀರು, ಆಹಾರ ಇಡುತ್ತಿದ್ದಾರೆ. ಆದರೆ, ಈ ಕಾರ್ಯ ಶೇ. 1ರಷ್ಟು ಮಾತ್ರ ನಡೆಯುತ್ತಿದೆ ಎನ್ನುವುದೇ ಬೇಸರದ ಸಂಗತಿ.

ಬಿಸಿಯಿಂದ ಮೂಕ ಪ್ರಾಣಿಗಳ ರಕ್ಷಿಸಿ

ಬೇಸಿಗೆಯಲ್ಲಿ ದಶಕಗಳ ಹಿಂದೆ ಹೆಚ್ಚೆಂದರೆ 34 ಡಿಗ್ರಿ ಸೆಲ್ಸಿಯಸ್‌ ವರೆಗಿದ್ದ ಧಾರವಾಡದ ಉಷ್ಣ ಈಗ 38 ರಿಂದ 40 ಡಿಗ್ರಿ ವರೆಗೂ ಮುಟ್ಟುತ್ತಿದೆ. ಇದು ಬರೀ ಮನುಷ್ಯರು ಮಾತ್ರವಲ್ಲದೇ ಇಲ್ಲಿಯ ಪ್ರಾಣಿ-ಪಕ್ಷಿಗಳ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ. ಮನುಷ್ಯರು ಕೂಲರ್‌, ಎಸಿ ಬಳಕೆ, ತಂಪಾದ ನೀರು, ಹಣ್ಣುಗಳನ್ನು ಸೇವಿಸಿ ಹೆಚ್ಚಿದ ತಾಪದಿಂದ ತಪ್ಪಿಸಿಕೊಳ್ಳುತ್ತಾರೆ. ಆದರೆ, ಬಿಡಾಡಿ ದನಕರುಗಳು ಸೇರಿದಂತೆ ಜಾನುವಾರುಗಳು, ಪಕ್ಷಿಗಳು ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲಾಗದೇ ಜೀವ ಬಿಟ್ಟಿರುವ ಅನೇಕ ಉದಾಹರಣೆಗಳಿವೆ.

ಆರೋಗ್ಯಕ್ಕೆ ಹಾನಿ

ಬೇಸಿಗೆಯ ಬಿರು ಬಿಸಿಲಿಗೆ ಮೂಕ ಪ್ರಾಣಿ-ಪಕ್ಷಿ ಸಂಕುಲ ಸಹ ಅನೇಕ ಬಾಧೆಗಳನ್ನು ಅನುಭವಿಸುತ್ತವೆ. ಸೂರ್ಯನ ಶಾಖದಿಂದ ದೇಹ ತಂಪಾಗಿಸುವ ವ್ಯವಸ್ಥೆ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ. ದೇಹದ ತಾಪಮಾನ ಪಕ್ಷಿಗಳಿಗೆ ಮೆದುಳಿನ ಹಾನಿ ಅಥವಾ ಆತಂರಿಕ ಅಂಗಗಳಿಗೆ ಹಾನಿ ಮಾಡುತ್ತದೆ. ಇದು ಪಕ್ಷಿಗಳ ಮಾರಣಾಂತಿಕ ಅಪಾಯಕ್ಕೂ ಕಾರಣವಾಗುತ್ತದೆ. ಹೀಗಾಗಿ, ಬೇಸಿಗೆಯ ಈ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ನೀರು, ಆಹಾರ ವ್ಯವಸ್ಥೆ ಮಾಡುವುದು ಮಾನವೀಯತೆ.

ಮಡಿಕೆ ಅಥವಾ ಇತರೆ ವಸ್ತುಗಳಲ್ಲಿ ಕ್ಲೋರಿನ್‌ ಇಲ್ಲದ ನೀರನ್ನು ನೆರಳಿನಲ್ಲಿ ಪಕ್ಷಿಗಳಿಗೆ ಕಾಣುವ ಹಾಗೆ ಇಡಬೇಕು. ನೀರಿನೊಂದಿಗೆ ಪಪ್ಪಾಯಿ (ಕೋಗಿಲೆ), ಬಾಳೆಹಣ್ಣು (ಬುಲ್‌ ಬುಲ್‌, ಮೈನಾ), ಚಿಕ್ಕು (ಕಾಗೆ, ಮಾಗಾಪಾಯ್‌ ರಾಬಿನ್) ಅಂತಹ ಹಣ್ಣುಗಳನ್ನು ಇಟ್ಟರೆ ಪಕ್ಷಿಗಳಿಗೆ ಇನ್ನಷ್ಟು ಜೀವ ಬರುತ್ತದೆ ಎನ್ನುತ್ತಾರೆ ಪಕ್ಷಿ ಮಿತ್ರ ಪ್ರಕಾಶ ಗೌಡರ.

ಇಂದು ವಿಶ್ವ ಗುಬ್ಬಿ ದಿನ

ಪ್ರತಿ ವರ್ಷ ಮಾ. 20 ವಿಶ್ವ ಗುಬ್ಬಿಗಳ ದಿನ ಆಚರಿಸುತ್ತಾರೆ. ಗುಬ್ಬಿಗಳ ಸಂಖ್ಯೆ ಕಡಿಮೆಯಾಗಲು ಮೊಬೈಲ್‌ ತರಂಗ ಎಂಬುದು ಬರೀ ನೆಪ ಮಾತ್ರ. ಮಾನವನ ಜೀವನ ಶೈಲಿಯೇ ಪ್ರಮುಖ ಕಾರಣವಾಗಿದ್ದು, ಇದೇ ಆಧುನಿಕ, ಐಷಾರಾಮಿ ಜೀವನ ಶೈಲಿಯು ಪ್ರಾಣಿ-ಪಕ್ಷಿಗಳ ಜೀವಕ್ಕೂ ಕಂಟಕವಾಗಿದ್ದು, ಇನ್ನಾದರೂ ಮನುಷ್ಯರು ತಾವು ಮಾತ್ರವಲ್ಲದೇ ತಮ್ಮ ಜೊತೆಗಿರುವ ಪ್ರಾಣಿ-ಪಕ್ಷಿಗಳು ಬದುಕುವ ರೀತಿಯಲ್ಲಿ ಸರಳ ಜೀವನ ಮಾಡಬೇಕು ಎಂಬ ಸಲಹೆ ಸಹ ನೀಡಿದರು.

Share this article