ಆರೆಸ್ಸೆಸ್‌ ಚಟುವಟಿಕೆ ನಿಷೇಧ ಬಗ್ಗೆ ತಮಿಳುನಾಡು ಮಾದರಿ ಪರಿಶೀಲನೆ : ಸಿದ್ದರಾಮಯ್ಯ

| N/A | Published : Oct 14 2025, 05:41 AM IST

Karnataka Chief Minister Siddaramaiah (File Photo/ANI)
ಆರೆಸ್ಸೆಸ್‌ ಚಟುವಟಿಕೆ ನಿಷೇಧ ಬಗ್ಗೆ ತಮಿಳುನಾಡು ಮಾದರಿ ಪರಿಶೀಲನೆ : ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಗಳನ್ನು ನಿಷೇಧಿಸುವ ಕುರಿತಂತೆ ತಮಿಳುನಾಡು ಸರ್ಕಾರದ ನೀತಿಯನ್ನು ಅಧ್ಯಯನ ಮಾಡುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿ ಶಾಲಿನಿ ‌ರಜನೀಶ್‌ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶನ ನೀಡಿದ್ದಾರೆ.

 ಬಾಗಲಕೋಟೆ :  ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಗಳನ್ನು ನಿಷೇಧಿಸುವ ಕುರಿತಂತೆ ತಮಿಳುನಾಡು ಸರ್ಕಾರದ ನೀತಿಯನ್ನು ಅಧ್ಯಯನ ಮಾಡುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿ ಶಾಲಿನಿ ‌ರಜನೀಶ್‌ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶನ ನೀಡಿದ್ದಾರೆ.

ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಗಳ ನಿಷೇಧದ ಕುರಿತು ತಮಿಳುನಾಡಿನ ಕ್ರಮಗಳನ್ನು ಪರಿಶೀಲಿಸಲು ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದೇನೆ ಎಂದು ತಿಳಿಸಿದರು.

ಸಚಿವ ಪ್ರಿಯಾಂಕ್ ಖರ್ಗೆ ಅವರು ನನಗೆ ಪತ್ರ ಬರೆದಿದ್ದಾರೆ. ಆರ್‌ಎಸ್‌ಎಸ್‌ ತನ್ನ ಚಟುವಟಿಕೆಗಳಿಗೆ ಸರ್ಕಾರಿ ಆವರಣಗಳನ್ನು ಬಳಸುತ್ತಿದೆ. ಸರ್ಕಾರಿ ಜಾಗದಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆ ನಿಯಂತ್ರಿಸಲು ತಮಿಳುನಾಡಿನ ಸರ್ಕಾರ ಏನು ಮಾಡಿದೆಯೋ ಅದನ್ನು ನಮ್ಮ ರಾಜ್ಯದಲ್ಲೂ ಜಾರಿಗೊಳಿಸಬೇಕು ಎಂದು ಅವರು ಹೇಳಿದ್ದಾರೆ. ತಮಿಳುನಾಡಿನಲ್ಲಿ ಏನು ಮಾಡಲಾಗಿದೆ ಎಂಬುದನ್ನು ಪರಿಶೀಲಿಸಲು ಮತ್ತು ಅದರ ಅಧ್ಯಯನ ನಡೆಸಲು ನಾನು ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದೇನೆ ಎಂದು ತಿಳಿಸಿದರು.

ಸಿಎಂಗೆ ಪತ್ರ ಬರೆದಿದ್ದ ಪ್ರಿಯಾಂಕ್‌ ಖರ್ಗೆ:

ರಾಜ್ಯದ ಸರ್ಕಾರಿ ಸ್ಥಳಗಳಲ್ಲಿ ಶಾಖೆ, ಸಾಂಘಿಕ್‌ ಅಥವಾ ಬೈಠಕ್‌ ಹೆಸರಲ್ಲಿ ಆರೆಸ್ಸೆಸ್ ಸಂಘಟನೆ ನಡೆಸುವ ಎಲ್ಲಾ ಬಗೆಯ ಚಟುವಟಿಕೆಗಳಿಗೆ ನಿಷೇಧ ಹೇರಬೇಕು ಎಂದು ಕೋರಿ ಸಿದ್ದರಾಮಯ್ಯ ಅವರಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಅ.4ರಂದು ಪತ್ರ ಬರೆದಿದ್ದರು. ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳು, ಮೈದಾನಗಳು, ಉದ್ಯಾನವನಗಳು, ಮುಜರಾಯಿ ಇಲಾಖೆ ದೇವಸ್ಥಾನಗಳು, ಪುರಾತತ್ವ ಇಲಾಖೆ ಸ್ಥಳಗಳು ಸೇರಿ ಯಾವುದೇ ಸರ್ಕಾರಿ ಸ್ಥಳಗಳಲ್ಲಿ ಆರೆಸ್ಸೆಸ್‌ ಸಂಘಟನೆಯು ಶಾಖೆ, ಸಾಂಘಿಕ್‌ ಅಥವಾ ಬೈಠಕ್‌ ಹೆಸರಲ್ಲಿ ನಡೆಸುವ ಎಲ್ಲಾ ಬಗೆಯ ಚಟುವಟಿಕೆಗಳನ್ನು ನಿಷೇಧಿಸಬೇಕು. ಇಂತಹ ಚಟುವಟಿಕೆಗಳು ಭಾರತದ ಏಕತೆ ಮತ್ತು ಸಂವಿಧಾನವನ್ನು ಉಲ್ಲಂಘಿಸುತ್ತವೆ ಎಂದು ಕೋರಿದ್ದರು.

ಸಚಿವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಮುಖ್ಯಮಂತ್ರಿ, ‘ಮುಖ್ಯ ಕಾರ್ಯದರ್ಶಿ ಅವರು ಪರಿಶೀಲನೆ ನಡೆಸಿ ಕೂಡಲೇ ಅಗತ್ಯ ಕ್ರಮ ಜರುಗಿಸುವುದು’ ಎಂದು ಪತ್ರದ ಮೇಲೆಯೇ ಬರೆದು ಸೂಚನೆ ನೀಡಿದ್ದರು. ಈ ಪತ್ರ ತಡವಾಗಿ ಬಹಿರಂಗವಾಗಿದ್ದು, ಎಲ್ಲೆಡೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ವಿರೋಧ ಪಕ್ಷದ ನಾಯಕರು, ವಿವಿಧ ಹಿಂದೂ ಪರ ಸಂಘಟನೆಗಳ ಮುಖಂಡರು ಸರ್ಕಾರದ ಕ್ರಮದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

Read more Articles on