ಚೆನ್ನೈ: ರಾಜ್ಯದಲ್ಲಿ ಟಿವಿಕೆ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಮಾಸಿಕ 2,500 ರು. ಸಹಾಯಧನ, ವಿವಾಹವಾಗಲಿರುವ ಯುವತಿಯರಿಗೆ ಚಿನ್ನದ ನಾಣ್ಯ ಮತ್ತು ರೇಷ್ಮೆ ಸೀರೆ ಉಡುಗೊರೆ, ಎಲ್ಲ ಕುಟುಂಬಗಳಿಗೆ 6 ಉಚಿತ ಎಲ್‌ಪಿಜಿ ಸಿಲಿಂಡರ್ ನೀಡಲಾಗುವುದು ಎಂದು ಪಕ್ಷದ ಅಧ್ಯಕ್ಷ ನಟ ವಿಜಯ್ ಶನಿವಾರ ಘೋಷಿಸಿದ್ದಾರೆ.
ಮಾಸಿಕ ಸಹಾಯಧನ ಸರ್ಕಾರಿ ಉದ್ಯೋಗಿಗಳನ್ನು ಹೊರತುಪಡಿಸಿ, 60 ವರ್ಷ ಒಳಗಿನ ಎಲ್ಲ ಮಹಿಳೆಯರಿಗೆ ಅನ್ವಯವಾಗಲಿದೆ. ‘ಅನ್ನಪೂರ್ಣಿ ಸೂಪರ್ ಸಿಕ್ಸ್’ ಯೋಜನೆ ಅಡಿಯಲ್ಲಿ 6 ಉಚಿತ ಎಲ್‌ಪಿಜಿ ಸಿಲಿಂಡರ್ ಒದಗಿಸಲಾಗುವುದು. ವಿದ್ಯಾರ್ಥಿಗಳು ಶಾಲೆ ತೊರೆಯದಂತೆ ಮಾಡಲು, ಪ್ರತಿ ತಾಯಿ ಅಥವಾ ಪೋಷಕರಿಗೆ ‘ಕಾಮರಾಜರ್ ಕಲ್ವಿ ಉರುತಿ ತಿಟ್ಟಂ’ ಯೋಜನೆ ಅಡಿಯಲ್ಲಿ ವಾರ್ಷಿಕ 15,000 ರು.ಗಳ ಧನಸಹಾಯ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ವರ್ಷದಲ್ಲಿ 8 ದಿನ ಬಿಟ್ಟು ಅಷ್ಟು ದಿನ ಸಾಲ ಪಡೆದಿದ್ದ ಆಂಧ್ರ ಸರ್ಕಾರ!
ಅಮರಾವತಿ: ಗೊತ್ತುಗುರಿ ಇಲ್ಲದ ಗ್ಯಾರಂಟಿ ಯೋಜನೆಗಳ ಜಾರಿ ರಾಜ್ಯಗಳ ಆರ್ಥಿಕತೆಗೆ ಪೆಟ್ಟು ನೀಡುತ್ತಿರುವ ಬಗ್ಗೆ ಆರ್‌ಬಿಐ, ಸುಪ್ರೀಂಕೋರ್ಟ್‌ನ ಎಚ್ಚರಿಕೆ ನಡುವೆಯೇ, 2024-25ರ ಇಡೀ ಹಣಕಾಸು ವರ್ಷದಲ್ಲಿ ಆಂಧ್ರಪ್ರದೇಶ ಸರ್ಕಾರ ಕೇವಲ 8 ದಿನ ಹೊರತುಪಡಿಸಿ ಉಳಿದ ಅಷ್ಟೂ ದಿನಗಳ ಅವಧಿಯಲ್ಲಿ ಒಟ್ಟಾರೆ 1.72 ಲಕ್ಷ ಕೋಟಿ ರು.ನಷ್ಟು ಸಾಲ ಇಲ್ಲವೇ ಮುಂಗಡ ಪಡೆದು ಕಾರ್ಯನಿರ್ವಹಿಸಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ.
ಶುಕ್ರವಾರ ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಮಂಡಿಸಿದ ಸಿಎಜಿ ವರದಿಯಲ್ಲಿ ಈ ಆಘಾತಕಾರಿ ಅಂಶಗಳಿವೆ. ವರದಿ ಅನ್ವಯ 2024-25ರಲ್ಲಿ ಆಂಧ್ರ ಸರ್ಕಾರ ಆರ್‌ಬಿಐನ ಬಳಿ ಯಾವುದೇ ಸಾಲ ಅಥವಾ ಮುಂಗಡ ಪಡೆಯದೇ 8 ದಿನ ಮಾತ್ರವೇ ಕನಿಷ್ಠ ನಗದು ಬಾಕಿ ಹೊಂದಿತ್ತು. ಸರ್ಕಾರದ ವಿತ್ತೀಯ ಕೊರತೆ ಪ್ರಮಾಣವು ‘ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ ಮಿತಿ’ಯಾದ ರಾಜ್ಯ ಜಿಡಿಪಿಯ ಶೇ.2.7ರ ಮೀತಿ ದಾಟಿ ಶೇ.3.75 ತಲುಪಿದ ಪರಿಣಾಮ ರಾಜ್ಯ ಸರ್ಕಾರವು ತನ್ನ ದೈನಂದಿನ ಕಾರ್ಯನಿರ್ವಹಣೆಗೆ ಸಾಲ ಪಡೆಯಬೇಕಾದಪರಿಸ್ಥಿತಿಗೆ ತಲುಪಿತ್ತು. ಇದು ರಾಜ್ಯದ ಬಡ್ಡಿ ಹೊರೆಯನ್ನು ಹೆಚ್ಚಿಸಿತು ಎಂದು ವರದಿ ಹೇಳಿದೆ.
ಸ್ಪೆಷನ್ ಡ್ರಾಯಿಂಗ್ ಫೆಸಿಲಿಟಿ ಬಳಸಿ 42,004 ಕೋಟಿ ರು. ಸಾಲ
2024ರಲ್ಲಿ ಸರ್ಕಾರವು 71 ದಿನಗಳ ಅವಧಿಯಲ್ಲಿ ಸ್ಪೆಷನ್ ಡ್ರಾಯಿಂಗ್ ಫೆಸಿಲಿಟಿ ಬಳಸಿ 42,004 ಕೋಟಿ ರು. ಸಾಲ ಪಡೆದು 188 ಕೋಟಿ ರು. ಬಡ್ಡಿ ಕಟ್ಟಿತ್ತು. ವೇಯ್ಸ್ ಆ್ಯಂಡ್ ಮೀನ್ಸ್ ಅಡ್ವಾನ್ಸ್ ರೂಪದಲ್ಲಿ 179 ದಿನಗಳ ಅವಧಿಯಲ್ಲಿ 73897 ಕೋಟಿ ರು. ಸಾಲ ಪಡೆದು ಅದಕ್ಕೆ 82 ಕೋಟಿ ರು. ಬಡ್ಡಿ ಪಾವತಿಸಿತ್ತು. ಜೊತೆಗೆ 107ದಿನಗಳಂದು ಒಟ್ಟು 56631 ಕೋಟಿ ರು. ಓವರ್ ಡ್ರಾಫ್ಟ್ ಪಡೆದು ಅದಕ್ಕೆ 32 ಕೋಟಿ ರು. ಬಡ್ಡಿ ಪಾವತಿಸಿತ್ತು ಎಂದು ಸಿಎಜಿ ವರದಿ ಹೇಳಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಟಿಡಿಪಿ ನಾಯಕರು, ರಾಜ್ಯದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದಿತ್ತು 2024ರ ಜೂ.1ರಂದು. ಅಷ್ಟರಲ್ಲಾಗಲೇ ಹಿಂದಿನ ಸರ್ಕಾರ 38000 ಕೋಟಿ ರು. ಸಾಲ ಪಡೆದಿತ್ತು. ಅವರು ಉಳಿಸಿ ಹೋಗಿದ್ದ ಹೊರೆಯನ್ನು ತೀರಿಸಲು ನಾವು ಸಾಲ ಮಾಡಬೇಕಾಗಿ ಬಂತು ಎಂದು ಹೇಳಿದ್ದಾರೆ.
