ಕರೆನ್ಸಿ ನೋಟುಗಳ ಬಾಳಿಕೆ ವೃದ್ಧಿಸುವ ಉದ್ದೇಶದಿಂದ ದೇಶದಲ್ಲಿ ಪರಿಚಯಿಸಲು ಉದ್ದೇಶಿಸಲಾಗಿರುವ ಪಾಲಿಮರ್ (ಪ್ಲಾಸ್ಟಿಕ್) ನೋಟುಗಳನ್ನು 2027-28ರ ಹಣಕಾಸು ಬಿಡುಗಡೆ ಮಾಡುವ ಗುರಿ ಇದೆ ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ.
ನವದೆಹಲಿ: ಕರೆನ್ಸಿ ನೋಟುಗಳ ಬಾಳಿಕೆ ವೃದ್ಧಿಸುವ ಉದ್ದೇಶದಿಂದ ದೇಶದಲ್ಲಿ ಪರಿಚಯಿಸಲು ಉದ್ದೇಶಿಸಲಾಗಿರುವ ಪಾಲಿಮರ್ (ಪ್ಲಾಸ್ಟಿಕ್) ನೋಟುಗಳನ್ನು 2027-28ರ ಹಣಕಾಸು ಬಿಡುಗಡೆ ಮಾಡುವ ಗುರಿ ಇದೆ ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ.
ಕಡಿಮೆ ಮುಖಬೆಲೆಯ ನೋಟುಗಳನ್ನು ಮೊದಲ ಹಂತದಲ್ಲಿ
ಬುಧವಾರ ದ್ವೈಮಾಸಿಕ ಸಾಲ ಪ್ರಕಟದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅತ್ಯಧಿಕ ಚಲಾವಣೆಯಾಗುವ ಕಡಿಮೆ ಮುಖಬೆಲೆಯ ನೋಟುಗಳನ್ನು ಮೊದಲ ಹಂತದಲ್ಲಿ ಜಾರಿಗೆ ತರುವ ಯೋಜನೆ ಇದೆ. ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ಆರ್ಥಿಕ ವರ್ಷದಲ್ಲೇ (2027-28) ಅವು ಜಾರಿಗೆ ಬರಬಹುದು. ಅವುಗಳು ಕಾಗದದ ನೋಟುಗಳಿಗಿಂತ 4 ಪಟ್ಟು ಹೆಚ್ಚು ಬಾಳಿಕೆ ಬರುತ್ತವೆ. ಕೆಲ ದೇಶಗಳಲ್ಲಿ 30 ವರ್ಷಗಳಿಂದ ಚಲಾವಣೆಯಲ್ಲಿವೆ’ ಎಂದರು.
ಆರ್‌ಬಿಐ ಜಾಗತಿಕ ಟೆಂಡರ್
ವಿಶೇಷ ಪ್ಲಾಸ್ಟಿಕ್ ಪೂರೈಸಲು ಇತ್ತೀಚೆಗಷ್ಟೇ ಆರ್‌ಬಿಐ ಜಾಗತಿಕ ಟೆಂಡರ್ ಕರೆಯಲಾಗಿತ್ತು. ಮೊದಲಿಗೆ ₹10 ಮತ್ತು ₹20 ಮುಖಬೆಲೆಯ ನೋಟುಗಳನ್ನು ಪರಿಚಯಿಸಿ, ಅವುಗಳ ಯಶಸ್ಸಿನ ಅಧ್ಯಯನ ನಡೆಸಲಾಗುವುದು. ಬಳಿಕ ದೊಡ್ಡ ಮುಖಬೆಲೆಯ ನೋಟುಗಳನ್ನು ಮುದ್ರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು. ಆರಂಭಿಕವಾಗಿ 10 ರು.ನ 100 ಕೋಟಿ ಹಾಗೂ 20 ರು.ನ 100 ಕೋಟಿ ನೋಟುಗಳನ್ನು ಬಿಡುಗಡೆ ಮಾಡಲಾಗುವುದು ಎನ್ನಲಾಗಿದೆ.
ಪಾಲಿಮರ್ ನೋಟುಗಳು ಕೈಯಿಂದ ಕೈಗೆ ಹೋಗುವಾಗ ಸವೆದು ಹಾಳಾಗುವುದಿಲ್ಲ, ನೀರಲ್ಲಿ ನೆನೆಯುವುದಿಲ್ಲ. ಜತೆಗೆ ಇವನ್ನು ನಕಲಿಸುವುದು ಕಷ್ಟ. ನೋಟು ಮುದ್ರಣದ ಖರ್ಚು ತಗ್ಗಿಸಲು ಪ್ಲಾಸ್ಟಿಕ್ ನೋಟ್ ಸೂಕ್ತ.
