ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಲು ಆಧಾರ್‌ ಕಾರ್ಡ್‌ ಬದಲು ಮತದಾರರ ಗುರುತಿನ ಚೀಟಿ ಬಳಸುವ ಕೇಂದ್ರ ಪಂಚಾಯತ್‌ ರಾಜ್‌ ಸಚಿವ ರಾಜೀವ್‌ ರಂಜನ್‌ ಸಿಂಗ್‌ ಅವರ ಹೇಳಿಕೆಗೆ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ತೀವ್ರ ಕಿಡಿಕಾರಿದ್ದಾರೆ. ಎಸ್‌ಐಆರ್‌ ಹೆಸರಲ್ಲಿ ಕೇವಲ ಮತಗಳ್ಳತನವಷ್ಟೇ ಅಲ್ಲ, ಹಕ್ಕುಗಳ ಕಳವೂ ಆಗುತ್ತಿದೆ ಎಂದು ಆರೋಪಿಸಿದ್ದಾರೆ.

- ನಾವು ಇದಕ್ಕೆ ಅವಕಾಶ ಮಾಡಿಕೊಡುವುದಿಲ್ಲ

- ಇದನ್ನು ಈಗಲೇ ತಡೆಯದಿದ್ದರೆ ತೊಂದರೆ ಆಗಲಿದೆ ನವದೆಹಲಿ: ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಲು ಆಧಾರ್‌ ಕಾರ್ಡ್‌ ಬದಲು ಮತದಾರರ ಗುರುತಿನ ಚೀಟಿ ಬಳಸುವ ಕೇಂದ್ರ ಪಂಚಾಯತ್‌ ರಾಜ್‌ ಸಚಿವ ರಾಜೀವ್‌ ರಂಜನ್‌ ಸಿಂಗ್‌ ಅವರ ಹೇಳಿಕೆಗೆ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ತೀವ್ರ ಕಿಡಿಕಾರಿದ್ದಾರೆ. ಎಸ್‌ಐಆರ್‌ ಹೆಸರಲ್ಲಿ ಕೇವಲ ಮತಗಳ್ಳತನವಷ್ಟೇ ಅಲ್ಲ, ಹಕ್ಕುಗಳ ಕಳವೂ ಆಗುತ್ತಿದೆ ಎಂದು ಆರೋಪಿಸಿದ್ದಾರೆ.

ಎಸ್‌ಐಆರ್‌ ನೆಪದಲ್ಲಿ ಲಕ್ಷಾಂತರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಯಿತು. ಒಂದು ವೇಳೆ ಇದನ್ನು ತಡೆಯದೆ ಹೋದರೆ ಇನ್ನಷ್ಟು ಮತಗಳು ರದ್ದಾಗಲಿದೆ. ಬಿಜೆಪಿ ವಿರುದ್ಧ ಆಕ್ರೋಶಗೊಂಡಿರುವವರ ಹೆಸರನ್ನೇ ಗುರಿಯಾಗಿಸಿ ಹೆಚ್ಚಾಗಿ ರದ್ದು ಮಾಡಲಾಗುತ್ತಿದೆ. ಇದೊಂದು ಭಾರೀ ಷಡ್ಯಂತ್ರ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ರಾಹುಲ್‌ ಗಾಂಧಿ ದೂರಿದ್ದಾರೆ.

ಮತದಾರರ ಪಟ್ಟಿಯು ಯಾವುದೇ ತಾರತಮ್ಯರಹಿತ ಚುನಾವಣಾ ಆಯೋಗದ ಕೈಯಲ್ಲಿರಬೇಕು. ಆದರೆ, ಈಗ ಅದು ಮೋದಿ ಸರ್ಕಾರದ ನೌಕರ ಜ್ಞಾನೇಶ್‌ ಕುಮಾರ್‌ ಅವರ ಕೈಯಲ್ಲಿದೆ. ಬಿಜೆಪಿ ನಡೆಸುತ್ತಿರುವ ಮತಕಳವಿನಲ್ಲಿ ಅವರ ಪಾತ್ರವೂ ಇದೆ. ನಾವು ಅವರನ್ನು ದಾಖಲೆ ಸಮೇತ ಹಿಡಿಡಿದ್ದೇವೆ. ಮತದಾರರ ಪಟ್ಟಿಯಲ್ಲಿ ಹೆಚ್ಚಿನ ಜನ ಬಿಜೆಪಿಯವರೇ ಇರುವಂತೆ ನೋಡಿಕೊಳ್ಳಲಾಗಿದೆ. ಇದೀಗ ಅದೇ ಪಟ್ಟಿ ನೀವು ಸಾಮಾಜಿಕ ಯೋಜನೆಗಳ ಲಾಭ ಪಡೆಯಬೇಕೇ, ಬೇಡವೇ ಎಂಬುದನ್ನೂ ನಿರ್ಧರಿಸುತ್ತದೆ ಎಂದಿದ್ದಾರೆ.

ಬಿಜೆಪಿ ಸರ್ಕಾರ ಅಧಿಕಾರದಿಂದ ಹೋಗಬೇಕು ಎಂದು ಹೇಳಿದವರ ಹೆಸರನ್ನು ಆಯ್ಕೆ ಮಾಡಿ ಮತದಾರರ ಪಟ್ಟಿಯಿಂದ ಕಿತ್ತುಹಾಕಲಾಗಿದೆ. ಮತವೂ ಹೋಯಿತು, ಹಕ್ಕುಗಳೂ ಹೋಯಿತು. ಇಂದು ಪಂಜಾಯತ್‌ ರಾಜ್‌ ಯೋಜನೆಗಳು, ನಾಳೆ ಪಡಿತರ, ಪಿಂಚಣಿ, ಎಂಜಿ ನರೇಗಾ, ಆವಾಸ ಯೋಜನೆ, ಸ್ಕಾಲರ್‌ಶಿಪ್‌, ಮೀಸಲಾತಿಗಳಿಗೂ ಇದು ಅನ್ವಯ ಆಗಲಿದೆ ಎಂದು ರಾಹುಲ್‌ ಎಚ್ಚರಿಸಿದ್ದಾರೆ.

ಇದು ಚುನಾವಣೆ ಗೆಲ್ಲುವ ರಾಜಕೀಯ ಅಲ್ಲ, ಚುನಾವಣೆಯನ್ನು ಕಳವು ಮಾಡುವ ಮತ್ತು ಶಾಶ್ವತವಾಗಿ ಅಧಿಕಾರದಲ್ಲೇ ಉಳಿಯುವ ವ್ಯವಸ್ಥೆಯಾಗಿದೆ. ಮತದಾನ ಎಂಬುದು ಹಕ್ಕೇ ಹೊರತು ಷರತ್ತು ಅಲ್ಲ. ವೋಟರ್ ಕಾರ್ಡ್‌ಗೆ ಯಾವುದೇ ವ್ಯಕ್ತಿಯ ಪಿಂಚಣಿಯನ್ನು ಒತ್ತೆಯಾಳಾಗಿ ಇಡುವುದು ಸರಿಯಲ್ಲ. ಇದು ಕೇವಲ ಮತಗಳ ಕಳವು ಮಾತ್ರ ಆಗಿಲ್ಲ, ಅದರ ಜತೆಗೆ ಹಕ್ಕುಗಳ ಕಳವೂ ಆಗಿದೆ. ನಾವು ಯಾವತ್ತೂ ಇದಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ರಾಹುಲ್ ತಿಳಿಸಿದ್ದಾರೆ.