ಜಯಂತಿ । ಸಂತ ಸೇವಾಲಾಲ್ ಮತ್ತು ಶಿವಾಜಿ ಮಹಾರಾಜರ ಜನ್ಮ ದಿನಕನ್ನಡಪ್ರಭ ವಾರ್ತೆ ಬೇಲೂರು
ಸಂತ ಸೇವಾಲಾಲ್ ಹಾಗೂ ಶಿವಾಜಿ ಮಹಾರಾಜರ ಆದರ್ಶ ಮತ್ತು ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರ ಜಯಂತಿಗೆ ನಿಜವಾದ ಅರ್ಥವನ್ನು ಕಲ್ಪಿಸಬೇಕಾಗಿದೆ ಎಂದು ತಹಸೀಲ್ದಾರ್ ಮಮತ ಎಂ. ಹೇಳಿದರು.saint sevalal, shivaji, beluru, aniversary, ಸಂತ ಸೇವಾಲಾಲ್,
ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ ಮತ್ತು ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಇಬ್ಬರು ಮಹನೀಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಬಳಿಕ ಮಾತನಾಡಿ, ಬಂಜಾರ ಸಮಾಜವು ರಾಷ್ಟ್ರದಲ್ಲಿಯೇ ಅತೀ ಶ್ರೇಷ್ಠ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಹೊಂದಿದೆ. ಸಂತ ಸೇವಾಲಾಲ್ ಅವರು ಸಮಾಜದ ಒಂದು ಶಕ್ತಿ, ಬೆಳಕು ಆಗಿದ್ದಾರೆ. ಇಂತಹ ಮಹಾನ್ ವ್ಯಕ್ತಿಗಳು ಹಾಗೂ ದಾರ್ಶನಿಕರ ಜೀವನ ಚರಿತ್ರೆ, ಅವರ ತತ್ವ ಮತ್ತು ಆದರ್ಶವನ್ನು ಪ್ರತಿಯೊಬ್ಬರೂ ತಿಳಿಯಬೇಕೆಂಬ ಉದ್ದೇಶದಿಂದ ಸರ್ಕಾರ ಜಯಂತಿಗಳನ್ನು ಆಚರಿಸುತ್ತಿದೆ. ಆದರೆ ಜಯಂತಿಗಳು ಕೇವಲ ಸರ್ಕಾರಿ ಆಚರಣೆಗಳಾಗಿ ಉಳಿಯಬಾರದು. ಎಲ್ಲರೂ ಸೇರಿ ಆಚರಿಸಬೇಕು. ಪ್ರತಿಯೊಬ್ಬರೂ ಮಹಾನ್ ವ್ಯಕ್ತಿಗಳ ವ್ಯಕ್ತಿತ್ವ ಮತ್ತು ಜೀವನ ಆದರ್ಶ, ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.ಪುರಸಭಾ ಅಧ್ಯಕ್ಷೆ ತೀರ್ಥಕುಮಾರಿ ಎಂ.ಆರ್.ವೆಂಕಟೇಶ್ ಮಾತನಾಡಿ, ಬಂಜಾರ ಸಮಾಜವನ್ನು ಮುಖ್ಯವಾಹಿನಿಗೆ ತರಲು ಸಂತ ಸೇವಾಲಾಲ್ ಸಾಕಷ್ಟು ಶ್ರಮ ವಹಿಸಿದ್ದಾರೆ, ಆಚಾರ, ವಿಚಾರ, ಧರ್ಮಬೋಧನೆ ಮಾಡಿ ಸಮಾಜವನ್ನು ಸರಿದಾರಿಗೆ ತರಲು ಪ್ರಯತ್ನಿಸಿದ್ದಾರೆ. ಇಂತಹ ಮಹಾನ್ ವ್ಯಕ್ತಿ ಜಯಂತಿ ಕಾರ್ಯಕ್ರಮಕ್ಕೆ ಬದ್ಧತೆ ಇಲ್ಲದ ಸಮಾಜ ಬಾಂಧವರು ಬಾರದಿರುವುದು ಬೇಸರದ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.
ಸೇವಾಲಾಲ್ ಹಾಕಿಕೊಟ್ಟಂತಹ ಮಾರ್ಗದರ್ಶನದಲ್ಲಿ ಸರ್ವ ಸಮಾಜ ಬಂಧುಗಳು ಸಾಗಬೇಕು. ಶಿವಾಜಿ ಮಹಾರಾಜರ ಜಯಂತಿಯನ್ನು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಹಾಗೂ ಸಮಾಜ ಬಾಂಧವರಿಂದ ಅತ್ಯಂತ ಹೆಮ್ಮೆ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತಿದೆ. ಮಹಾನ್ ಮರಾಠ ಚಕ್ರವರ್ತಿಯನ್ನು ಆಡಳಿತ, ಸಮರ ಶೌರ್ಯ ಮತ್ತು ಸೇನಾ ತಂತ್ರಗಳಲ್ಲಿ ಅವರ ಶ್ರೇಷ್ಠತೆಗಾಗಿ ಗೌರವಿಸಲು ಮರಾಠ ಜನರು ಈ ದಿನದಂದು ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು. ಶಿವಾಜಿ ಮಹಾರಾಜರ ಧೈರ್ಯ ಮತ್ತು ಅವರ ಬುದ್ಧಿವಂತಿಕೆಗೆ ಕೊನೆಯಿರಲಿಲ್ಲ. ಅದನ್ನು ಎಲ್ಲರೂ ರೂಢಿಸಿಕೊಳ್ಳಬೇಕು ಎಂದರು.ಕೋಡಿಮಠದ ಉತ್ತರಾಧಿಕಾರಿ ಚೇತನ ದೇವರು ಆಶೀರ್ವಚನ ನೀಡಿ, ಶಿವಾಜಿ ಮಹಾರಾಜರ ತತ್ವ, ಆದರ್ಶ, ವಿಚಾರಗಳು ಕೆಳಮಟ್ಟದಿಂದ ಹಿಡಿದು ಸಮಾಜದ ಕೊನೆಯ ಮಟ್ಟದ ವ್ಯಕ್ತಿವರೆಗೂ ಮುಟ್ಟುವಂತಾಗಬೇಕು ಎಂದು ಕರೆ ನೀಡಿದರು
ಮರಾಠ ಸಮಾಜದ ಅಧ್ಯಕ್ಷ ಶಿವಪ್ಪ, ಜಿಲ್ಲಾ ಕಾರ್ಯದರ್ಶಿ ಶಿವಾಜಿ, ಗ್ರಾ.ಪಂ.ಅಧ್ಯಕ್ಷೆ ವೀಣಾ, ಕ್ಷೇತ್ರ ಶಿಕ್ಷಣಾಧಿಕಾರಿ ನಾರಾಯಣ್, ಕರವೇ ಅಧ್ಯಕ್ಷ ಚಂದ್ರಶೇಖರ್, ಜೈ ಕರ್ನಾಟಕ ಅಧ್ಯಕ್ಷ ರಾಜಣ್ಣ, ಕ್ಷೇತ್ರ ಸಮನ್ವಯಾಧಿಕಾರಿ ಶಿವಮರಿಯಪ್ಪ, ಕೃಷಿ ಇಲಾಖೆಯ ರಂಗಸ್ವಾಮಿ, ಟಿಎಚ್ಓ ವಿಜಯಕುಮಾರ್, ಸಮಾಜದ ಜಗದೀಶ್ ಇದ್ದರು.ಬೇಲೂರು ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸಂತ ಸೇವಾಲಾಲ್ ಮತ್ತು ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು.