ಕೊಪ್ಪಳ/ನವದೆಹಲಿ: ಅಂಜನಾದ್ರಿ ಬೆಟ್ಟದಲ್ಲಿ ಆಂಜನೇಯನ ಪೂಜೆಗೆ ಅರ್ಚಕ ವಿದ್ಯಾದಾಸ ಬಾಬಾ ಅವರಿಗೆ ಅವಕಾಶ ನೀಡಿ ಈಗಾಗಲೇ ನೀಡಿರುವ ಮಧ್ಯಂತರ ತೀರ್ಪಿನ ಆದೇಶವನ್ನು ನಿಷ್ಠೆಯಿಂದ ಪಾಲಿಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ.
ಈ ಕುರಿತು ಮಾತನಾಡಿದ ಅರ್ಚಕ ವಿದ್ಯಾದಾಸ ಅವರು, ಆಂಜನೇಯನ ಪೂಜೆಗೆ 2023 ಫೆ.14ರಂದು ನನಗೆ ಅವಕಾಶ ನೀಡಿದರೂ ಕೊಪ್ಪಳ ಜಿಲ್ಲಾಡಳಿತ ಆದೇಶ ಪಾಲಿಸುತ್ತಿಲ್ಲವೆಂದು ಸುಪ್ರೀಂಕೋರ್ಟ್‌ಗೆ ಹೋಗಿದ್ದಕ್ಕೆ ನನಗೆ ಇದೀಗ ಪ್ರಾಥಮಿಕ ಜಯ ದೊರೆತಿದೆ ಎಂದರು.
ಇದಲ್ಲದೆಯೂ ಅಂಜನಾದ್ರಿಯಲ್ಲಿ ನಡೆಯುತ್ತಿರುವ ಅವ್ಯವಹಾರ, ದೇವರ ಹಣದ ದುರ್ಬಳಕೆ ಬಗ್ಗೆ ಸೇರಿ ಅನೇಕ ಕೇಸ್‌ಗಳನ್ನು ಕೊಪ್ಪಳ ಜಿಲ್ಲಾಡಳಿತ ವಿರುದ್ಧ ಹಾಕಿದ್ದೇನೆ. ಅವುಗಳು ಇನ್ನೂ ಬಾಕಿ ಇವೆ. ಎಲ್ಲ ಪ್ರಕರಣಗಳು ಇತ್ಯರ್ಥವಾಗುವವರೆಗೂ ನಾನು ಹೋರಾಟ ಮುಂದುವರಿಸುತ್ತೇನೆ ಎಂದರು.ಸುಪ್ರೀಂ ಕೋರ್ಟ್ ಆದೇಶ ಪ್ರತಿ ಲಭ್ಯವಾಗಿಲ್ಲ. ಆದೇಶ ಪ್ರತಿ ಬಂದ ಮೇಲೆ ಪರಿಶೀಲಿಸುತ್ತೇವೆ ಎಂದು ಕೊಪ್ಪಳ ಉಪ ವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ ತಿಳಿಸಿದ್ದಾರೆ.ಅರ್ಚಕರ ಪರವಾಗಿ ವಕೀಲ ವಿಷ್ಣು ಶಂಕರ್ ಜೈನ್ ವಾದ ಮಂಡಿಸಿದರು.