ಕುಂದಗೋಳ: ಈದ್ ಮಿಲಾದ್ ಹಬ್ಬವನ್ನು ಡಿ.ಜೆ. ರಹಿತವಾಗಿ ಆಚರಿಸಲು ಇಲ್ಲಿನ ಒಂಬತ್ತು ಜಮಾತಿನ ಹಿರಿಯರು ಮತ್ತು ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಪದಾಧಿಕಾರಿಗಳು ಒಮ್ಮತದ ನಿರ್ಧಾರಕ್ಕೆ ಬಂದಿದ್ದಾರೆ. ಈ ಕುರಿತು ಅವರು ಭಾನುವಾರ ಕುಂದಗೋಳ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದರು.
ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಖಯೀಮ್ ನಾಲಬಂದ ಹಾಗೂ ಸರ್ವ ಸದಸ್ಯರು ಪೊಲೀಸ್ ಠಾಣೆಗೆ ಮನವಿ ಪತ್ರ ನೀಡಿದ್ದು, ಈದ್ ಮಿಲಾದ್ ಹಬ್ಬದ ಪೂರ್ವಭಾವಿ ಸಭೆಯನ್ನು ಶಾದಿ ಮಹಲ್‌ನಲ್ಲಿ ನಡೆಸಲಾಗಿತ್ತು. ಈ ಸಭೆಯಲ್ಲಿ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ 1500ನೇ ಜನ್ಮದಿನಾಚರಣೆಯ ಶುಭ ಸಂದರ್ಭದಲ್ಲಿ ಈ ವರ್ಷದಿಂದ ಡಿ.ಜೆ. ಬಳಕೆಗೆ ಸಂಪೂರ್ಣ ಕಡಿವಾಣ ಹಾಕಲು ನಿರ್ಧರಿಸಲಾಯಿತು. ಡಿ.ಜೆ. ಬದಲು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಹಬ್ಬವನ್ನು ಆಚರಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ರವಾನಿಸಲು ತೀರ್ಮಾನಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.ಈದ್ ಮಿಲಾದ್ ಹಬ್ಬಕ್ಕೆ ಯಾರಾದರೂ ಡಿ.ಜೆ. ಬಳಸಿದರೆ ಅದಕ್ಕೆ ಸಮುದಾಯದ ಹಿರಿಯರು ಯಾವುದೇ ರೀತಿಯಲ್ಲಿ ಜವಾಬ್ದಾರರಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ, ತಮ್ಮ ನಿರ್ಣಯಕ್ಕೆ ಬದ್ಧರಾಗಿರುವುದಾಗಿ ಸಮುದಾಯದ ಮುಖಂಡರು ಹೇಳಿದ್ದಾರೆ. ಮುಸ್ಲಿಂ ಸಮುದಾಯದ ಈ ಸಕಾರಾತ್ಮಕ ನಿರ್ಧಾರಕ್ಕೆ ಕುಂದಗೋಳದ ಪೊಲೀಸ್ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿದೆ.
ಈ ಕುರಿತು ಮಾತನಾಡಿದ ಸಿಪಿಐ ಶಿವಾನಂದ ಅಂಬೀಗೇರ, ಇದು ಒಂದು ಒಳ್ಳೆಯ ಮತ್ತು ಅನುಕರಣೀಯ ನಿರ್ಧಾರ. ಡಿ.ಜೆ. ಯಿಂದಾಗಿ ನಮ್ಮ ಸಂಸ್ಕೃತಿ ಉಳಿಯುವ ಬದಲು ಹಾಳಾಗುತ್ತಿದೆ. ಇದರಿಂದ ಹಲವು ದುಶ್ಚಟಗಳು ಕೂಡ ಸೇರಿಕೊಳ್ಳುತ್ತವೆ. ತಮ್ಮ ಸಮಿತಿಯಿಂದ ಈ ಒಳ್ಳೆಯ ನಿರ್ಧಾರ ಮಾಡಿದ್ದೀರಿ, ಇದಕ್ಕೆ ನಮ್ಮ ಸಂಪೂರ್ಣ ಒಪ್ಪಿಗೆ ಇದೆ ಎಂದು ಪ್ರಶಂಸಿಸಿದರು.ಅಲ್ಲದೆ, ಈ ನಿರ್ಧಾರವನ್ನು ಮೀರಿ ಯಾರಾದರೂ ವರ್ತಿಸಿದರೆ, ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ನಾವೆಲ್ಲರೂ ಸೇರಿ ಈದ್ ಮಿಲಾದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸೋಣ ಎಂದರು.
ಈ ವೇಳೆ ಸಮಾಜದ ಮುಖಂಡರಾದ ರಾಯೇಸಾಬ ಕಳ್ಳಿಮನಿ, ಹಜರತ್ ಅಲಿ ಕರ್ಜಗಿ, ಸಲೀಂ ಕ್ಯಾಲಕೊಂಡ, ಎ.ಟಿ. ಹುಬ್ಬಳ್ಳಿ, ಮಲ್ಲಿಕ್ ಶಿರೂರ, ಬಾಬಾಜಾನ್ ಮಿಶ್ರಿಕೊಟಿ, ಸಲೀಂ ಕಡ್ಲಿ, ನಾಸಿರ್ ಬಾನಿ, ಮೌಲಾಸಾಬ್ಶೇರವಾಡ, ಜಾಕಿರ್ ಹುಸೇನ್ ಯರಗುಪ್ಪಿ, ಸಲೀಂ ಜಾಗಿರ್ದಾರ, ಮಹಮ್ಮದ್ ರಫಿಕ್ ಶೇರವಾಡ, ಮರ್ದಾನಿ ಮುಲ್ಲಾ, ಎಂ.ಎಂ ಜಂಗ್ಲಿ, ಮಹಮ್ಮದ್ ಗೌಸ್ ಕಲೇಗಾರ, ಮಾಬೂಬಲಿ ನದಾಫ್, ಬಾಬುಸಾಬ ಮಿಶ್ರೀಕೊಟಿ, ಇನ್ನು ಅನೇಕರು ಪಾಲ್ಗೊಂಡಿದ್ದರು.