ಅಂಕೋಲಾ: ಕಲೆ, ಸಂಸ್ಕೃತಿಯ ತವರಾಗಿರುವ ಅಂಕೋಲೆಯಲ್ಲಿ ಸಾಂಸ್ಕೃತಿಕ ಪ್ರಜ್ಞೆ ಸದಾ ಜಾಗೃತವಾಗಿರಲು ಇಂತಹ ಉತ್ಸವಗಳು ಸಹಕಾರಿ ಎಂದು ಮಾಜಿ ಶಾಸಕಿ, ಅಂಕೋಲಾ ಉತ್ಸವದ ಗೌರವಾಧ್ಯಕ್ಷೆ ರೂಪಾಲಿ ನಾಯ್ಕ ತಿಳಿಸಿದರು.ಸೋಮವಾರ ಸಂಗಾತಿ ರಂಗಭೂಮಿ ಆಶ್ರಯದಲ್ಲಿ ಏರ್ಪಡಿಸಿದ್ದ ಅಂಕೋಲಾ ಉತ್ಸವದ 5ನೇ ದಿನದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಂಸ್ಕೃತಿಕ ಉತ್ಸವಗಳಿಂದಾಗಿ ಸ್ಥಳೀಯ ಅನೇಕ ಪ್ರತಿಭೆಗಳಿಗೆ ವೇದಿಕೆ ಸಿಗುತ್ತಿದೆ. ಜತೆಗೆ ಹಲವಾರು ರಾಜ್ಯ, ರಾಷ್ಟ್ರಮಟ್ಟದ ಕಲಾವಿದರನ್ನು ನೋಡುವ ಅವಕಾಶವೂ ಸಿಗುತ್ತದೆ.
ಅಂಕೋಲೆಯ ನೆಲ ಕಲೆಗೆ ಹಿಂದಿನಿಂದಲೂ ಆಶ್ರಯ ನೀಡುತ್ತ ಬಂದಿದ್ದು, ಇದು ಮುಂದುವರಿಯಲಿ ಎಂದು ಆಶಿಸಿದರು.ಗೋಕರ್ಣದ ರಾಜಗೋಪಾಲ ಗುರೂಜಿ ಮಾತನಾಡಿ, ಅಂಕೋಲಾ ಸ್ವಾತಂತ್ರ‍್ಯ ಹೋರಾಟಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿದ ನೆಲ. ಕಲೆಗೂ ಇಲ್ಲಿ ನಿರಂತರ ಪ್ರೋತ್ಸಾಹ ಸಿಗುತ್ತಿದೆ ಎಂದರು.ಈ ಸಂದರ್ಭದಲ್ಲಿ ಅಂಕೋಲಾ ಉತ್ಸವಕ್ಕೆ ಬೆಂಬಲ ನೀಡಿದ ರೂಪಾಲಿ ನಾಯ್ಕ ಅವರನ್ನು ಗೌರವಿಸಲಾಯಿತು. ರಾಜಗೋಪಾಲ ಗುರೂಜಿ, ನೃತ್ಯಪಟು ಸಂಕೇತ ಗಾಂವಕರ್, ಗಾಯಕ ಜೀವು ಮಂಜು, ಪುರಸಭಾಧ್ಯಕ್ಷ ಸೂರಜ ನಾಯ್ಕ, ಆ್ಯಂಕರ್ ನಾಗರಾಜ ಭಟ್ಕಳ ಅವರನ್ನು ಸನ್ಮಾನಿಸಲಾಯಿತು.ಪಪಂ ಮಾಜಿ ಅಧ್ಯಕ್ಷ ರಾಜೇಂದ್ರ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಪಂ ಮಾಜಿ ಸದಸ್ಯ ಜಗದೀಶ ನಾಯಕ ಮೊಗಟಾ, ಪತ್ರಕರ್ತ ವಿಠ್ಠಲದಾಸ ಕಾಮತ್, ಪ್ರಮುಖರಾದ ಸಂಜಯ ನಾಯ್ಕ ಭಾವಿಕೇರಿ, ಹೂವಾ ಖಂಡೇಕರ್ ಉಪಸ್ಥಿತರಿದ್ದರು.ಉತ್ಸವ ಸಂಘಟಕ ಕೆ. ರಮೇಶ ಸ್ವಾಗತಿಸಿದರು. ಪತ್ರಕರ್ತ ರಾಘು ಕಾಕರಮಠ ವಂದಿಸಿದರು. ನಂತರ ನಡೆದ ಮನರಂಜನಾ ಕಾರ್ಯಕ್ರಮದಲ್ಲಿ ಗಾಯಕಿ ದೀಪ್ತಿ ಅರ್ಗೇಕರ್ ಅವರ ಹಾಡುಗಾರಿಕೆ, ಡ್ಯಾನ್ಸರ್ ಸಂಕೇತ್ ಗಾಂವಕಾರ್ ತಂಡದ ನೃತ್ಯ ವೈಭವ, ಪ್ರಸಿದ್ಧ ಗಾಯಕ ರಾಜೇಶ ಕೃಷ್ಣನ್ ತಂಡದವರಿಂದ ಸಂಗೀತ ರಸಮಂಜರಿ ಶೋತೃಗಳ ಮನಗೆದ್ದಿತು. ಆ್ಯಂಕರ್ ನಾಗರಾಜ, ಪತ್ರಕರ್ತರಾದ ಅರುಣ ಶೆಟ್ಟಿ ಮತ್ತು ಮೋಹನ್ ದುರ್ಗೇಕರ್ ಕಾರ್ಯಕ್ರಮ ನಿರ್ವಹಿಸಿದರು.ಹುಚ್ಚೆದ್ದು ಕುಣಿದರು: ಇಲ್ಲಿಯ ಜೈಹಿಂದ ಮೈದಾನ ಸೋಮವಾರ ಅಕ್ಷರಶಃ ಸಂಗೀತದ ಕಡಲಲ್ಲಿ ತೇಲಿಹೋಗಿತ್ತು. ಸುಮಾರು ರಾತ್ರಿ 10.30ರ ಸಮಯದಲ್ಲಿ ಅಂಕೋಲಾ ಉತ್ಸವದ ಬೃಹತ್ ವೇದಿಕೆಯಲ್ಲಿ ಸಾವಿರಾರು ಜನರ ಹರ್ಷೋದ್ಘಾರದ ನಡುವೆ ಯಾರೋ ಕಣ್ಣಲ್ಲಿ ಕಣ್ಣನಿಟ್ಟು ಮನಸ್ಸಿನಲ್ಲಿ ಮನಸ್ಸನಿಟ್ಟು ನನ್ನ ಒಳಗಿಂದಾನೆ ನನ್ನ ಕದ್ದವರ್ಯಾರೊ ಎನ್ನುವ ಚಲನಚಿತ್ರದ ಹಾಡು ಹೇಳುತ್ತಲೇ ವೇದಿಕೆಯ ಮೇಲೆ ಪ್ರತ್ಯಕ್ಷರಾದ ಮೆಲೋಡಿ ಕಿಂಗ್ ರಾಜೇಶ ಕೃಷ್ಣನ್ ಸೇರಿದ ಸಹಸ್ರಾರು ಜನರ ಮನಸ್ಸನ್ನು ಗೆದ್ದರು.ಹಾಗೆಯೇ 20ಕ್ಕೂ ಹೆಚ್ಚು ಕನ್ನಡ ಮತ್ತು ಹಿಂದಿ ಚಲನಚಿತ್ರಗೇತೆ ಹಾಡುಗಳನ್ನು ಹಾಡುವ ಮೂಲಕ ಸೇರಿದ ಜನರನ್ನು ಸಂಗೀತ ಲೋಕಕ್ಕೆ ಕೊಂಡೊಯ್ದರು. ಕಲಾಪ್ರೇಮಿಗಳು ಹುಚ್ಚೆದ್ದು ಕುಣಿಯುವ ಹಾಗೇ ಹಾಡನ್ನು ಹಾಡಿ ಯುವಕರ ಮನ ಗೆದ್ದರು. ಇವರ ಜತೆ ಚಲನಚಿತ್ರ ಹಿನ್ನೆಲೆ ಗಾಯಕಿಯರಾದ ಪೃಥ್ವಿ ಭಟ್, ಶ್ರುತಿ ಪ್ರಭು, ಸಂತೋಷ ದೇವ, ರವಿರಾಜ, ನಟರಾಜ ಧ್ವನಿಗೂಡಿಸಿದರು.