ಜಿಲ್ಲೆಯಲ್ಲಿ ನಡೆಯುತ್ತಿದೆ ಅನ್ನಭಾಗ್ಯ ಅಕ್ಕಿ ಮಾರಾಟ

KannadaprabhaNewsNetwork | Published : Oct 5, 2024 1:38 AM

ಸಾರಾಂಶ

ಅಕ್ರಮ ಅಕ್ಕಿ ಸಾಗಾಟ ಪ್ರಕರಣಗಳು ರೋಣ, ಮುಂಡರಗಿ ತಾಲೂಕಿನಲ್ಲಿ ನಡೆದಿದ್ದರೂ ಜಿಲ್ಲೆಯಲ್ಲಿ ಅಂತಹ ಯಾವುದೇ ಸಮಸ್ಯೆಗಳಿಲ್ಲ

ಕನ್ನಡಪ್ರಭ ವಾರ್ತೆ ಗದಗ

ರಾಜ್ಯ ಸರ್ಕಾರ ಬಡವರಿಗಾಗಿ ನೀಡುವ ಅನ್ನಭಾಗ್ಯ ಅಕ್ಕಿಯ ಮಾರಾಟ ಗದಗ ಜಿಲ್ಲೆಯಾದ್ಯಂತ ಎಗ್ಗಿಲ್ಲದೇ ನಡೆಯುತ್ತಿದೆ. ಹಲವಾರು ಬಾರಿ ಪ್ರಕರಣಗಳು ದಾಖಲಾಗುತ್ತಿದ್ದರೂ ಅದು ಕೇವಲ ಕಾಟಾಚಾರಕ್ಕೆ ಎನ್ನುವಂತಾಗಿದೆ. ಅಕ್ರಮ ಅಕ್ಕಿ ಮಾರಾಟ, ಸಾಗಾಟದಲ್ಲಿರುವ ಕಿಂಗ್‌ ಪಿನ್‌ಗಳು ಮಾತ್ರ ಪ್ರತಿ ಬಾರಿಯೂ ಸೇಫ್ ಆಗುತ್ತಿರುವುದು ಎಲ್ಲರಲ್ಲಿಯೂ ಆಶ್ಚರ್ಯಕ್ಕೆ ಕಾರಣವಾಗಿದೆ.

ಅಕ್ರಮ ಅಕ್ಕಿ ಸಾಗಾಟ ಪ್ರಕರಣಗಳು ರೋಣ, ಮುಂಡರಗಿ ತಾಲೂಕಿನಲ್ಲಿ ನಡೆದಿದ್ದರೂ ಜಿಲ್ಲೆಯಲ್ಲಿ ಅಂತಹ ಯಾವುದೇ ಸಮಸ್ಯೆಗಳಿಲ್ಲ, ಆಹಾರ ಇಲಾಖೆ ಅಧಿಕಾರಿಗಳು ಏನೂ ನಡೆದೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಇದರ ಮಧ್ಯೆ ಗುರುವಾರ ಗದಗ ತಾಲೂಕಿನ ನರಸಾಪುರ ಗ್ರಾಮದ ಗೋದಾಮಿನಲ್ಲಿ 50 ಚೀಲಕ್ಕೂ ಅಧಿಕ ಪ್ರಮಾಣದ ಅಕ್ಕಿ ಸಂಗ್ರಹಿಸಿರುವುದು ಪತ್ತೆಯಾಗಿದೆ. ಈ ಕುರಿತು ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಗುರುವಾರ ಸಂಜೆಯ ವರೆಗೂ ಪ್ರಕರಣ ಮಾತ್ರ ದಾಖಲಾಗಿಲ್ಲ.

ಗದಗ ಬೆಟಗೇರಿ ಅವಳಿ ನಗರದಲ್ಲಿ ಸದ್ಯ ನಡೆಯುತ್ತಿರುವ ಅಕ್ರಮ ಅಕ್ಕಿ ದಂಧೆಯನ್ನು ಅತ್ಯಂತ ಪ್ರಭಾವಿಗಳೇ ನಡೆಸುತ್ತಿದ್ದಾರೆ. ಅವರಿಗೆ ಆಡಳಿತಾರೂಢ ಪಕ್ಷದ ಹಿರಿಯ ನಾಯಕರು, ನಗರಸಭೆಯ ಸದಸ್ಯರು ಕೃಪಾಶೀರ್ವಾದವಿದೆ, ಅವರ ಯಾವುದೇ ರೀತಿಯ ಸಮಸ್ಯೆಗಳು ಬಂದರೂ ಪ್ರಭಾವಿಗಳೇ ಮುಂದೆ ನಿಂತು ರಾಜೀ ಮಾಡಿಸಿ, ಸಮಸ್ಯೆ ಇತ್ಯರ್ಥಪಡಿಸಿ ಮತ್ತೆ ಅವರನ್ನು ಅಕ್ರಮ ಅಕ್ಕಿ ದಂಧೆಗೆ ಅಣಿಗೊಳಿಸುವ ಕಾರ್ಯ ಅವ್ಯಾಹತವಾಗಿ ನಡೆಯುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.

ಅನ್ನಭಾಗ್ಯ ಪ್ರಕರಣ: ಪ್ರಸಕ್ತ ಸಾಲಿನ (2024) ಏಪ್ರಿಲ್‌ರಿಂದ ಈ ವರೆಗೆ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಾಗಿಸುತ್ತಿದ್ದ 6 ಪ್ರಕರಣ ದಾಖಲಿಸಲಾಗಿದೆ. ಗದಗ ತಾಲೂಕಿನಲ್ಲಿ 3 ಪ್ರಕರಣ, ಮುಂಡರಗಿಯಲ್ಲಿ 2 ಹಾಗೂ ರೋಣದಲ್ಲಿ 1 ಪ್ರಕರಣ ದಾಖಲಿಸಿ ಒಟ್ಟು ₹5.82 ಲಕ್ಷ ಮೌಲ್ಯದ 171.30 ಕ್ವಿಂಟಲ್ ಅಕ್ಕಿ ವಶಪಡಿಸಿಕೊಳ್ಳಲಾಗಿದೆ. 9 ಜನರ ಮೇಲೆ ಪ್ರಕರಣ ದಾಖಲಾಗಿದೆ. ₹1 ಲಕ್ಷ ಮೌಲ್ಯದ ಎರಡು ವಾಹನಗಳನ್ನು ಜಪ್ತಿ ಮಾಡಲಾಗಿದೆ. ಎಲ್ಲ ಪ್ರಕರಣಗಳಲ್ಲಿಯೂ ಕೇವಲ ಚಾಲಕರ ಮೇಲೆ ಪ್ರಕರಣ ದಾಖಲಿಸಿ, ಮೂಲ ಅಕ್ಕಿ ಸಾಗಾಟಗಾರರ ಮೇಲೆ ಪ್ರಕರಣ ದಾಖಲಿಸದೇ ಇರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.

Share this article