ಮುಂಡರಗಿ: ಡಾ. ಡಿ.ಎಂ. ನಂಜುಂಡಪ್ಪ ಅವರ ಪ್ರಕಾರ ಅತ್ಯಂತ ಹಿಂದುಳಿದ ಪ್ರದೇಶವಾಗಿರುವ ಮುಂಡರಗಿಯಲ್ಲಿ ಕಳೆದ 100 ವರ್ಷಗಳಿಂದ ಅಕ್ಷರ, ಅನ್ನ, ಆಶ್ರಯ ನೀಡುವ ಮೂಲಕ ನಾಡಿನ ಅಭಿವೃದ್ಧಿಯಲ್ಲಿ ಅನ್ನದಾನೀಶ್ವರ ಮಠದ ಕೊಡುಗೆ ಅಪಾರವಾಗಿದೆ ಎಂದು ಹೂವಿನಶಿಗ್ಲಿಯ ಚನ್ನವೀರ ಸ್ವಾಮೀಜಿ ತಿಳಿಸಿದರು.
ಪ್ರತಿವರ್ಷ ಯಾತ್ರಾ ಮಹೋತ್ಸವದ ಅಂಗವಾಗಿ ಶ್ರೀಗಳು ಒಬ್ಬೊಬ್ಬ ಶರಣರ ಕುರಿತು ಪ್ರವಚನ ಮಾಡಿಸುತ್ತಾ, ಇಲ್ಲಿನ ಜನತೆಗೆ ತಿಳಿವಳಿಕೆ ನೀಡುತ್ತಾ ಬರುತ್ತಿದ್ದಾರೆ. ನಿರಂತರವಾಗಿ ಬರದ ನಾಡೆಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ಮುಂಡರಗಿಯನ್ನು ಭರವಸೆಯ ನಾಡಾಗಿ ಮಾಡಿದ್ದು ಅನ್ನದಾನೀಶ್ವರರು. ಅವರ ಕೃಪೆಯಿಂದಾಗಿ ಅನೇಕರ ಬದುಕಿನಲ್ಲಿ ಬೆಳಕು ಮೂಡಿದೆ ಎಂದರು.
ಇಳಕಲ್ಲಿನ ಅನ್ನದಾನಸ್ವಾಮಿ ಪ್ರವಚನ ಪ್ರಾರಂಭಿಸಿ, ಶಿವಯೋಗ ಮಂದಿರ ನಿರ್ಮಾಣದ ಸಂದರ್ಭದಲ್ಲಿ ಹಾನಗಲ್ಲ ಗುರು ಕುಮಾರ ಸ್ವಾಮೀಜಿಯವರು ಸಲಹೆ ಕೇಳಲು ಮುಂಡರಗಿ ಮಠದ ಆಗಿನ ಸೊರಟೂರು ಅಜ್ಜನವರಿಗೆ ಪತ್ರ ಬರೆದು ಮಾಹಿತಿ ಕೇಳುತ್ತಿದ್ದರು ಎಂದರೆ ಮುಂಡರಗಿ ಅನ್ನದಾನೀಶ್ವರ ಮಠ ಹಿಂದಿನಿಂದ ಇಂದಿನವರೆಗೂ ಉತ್ತಮವಾಗಿ ಜ್ಞಾನವನ್ನು ಹೊಂದಿರುವಂಥ ಮಠವಾಗಿ ಹೆಸರು ಮಾಡಿದೆ. ಅದು ಈಗಲೂ ಮುಂದುವರಿದಿದೆ. ಮಠಕ್ಕೆ ಬಂದವರನ್ನು ಕರ ಮುಗಿದು ಕರೆಯುವುದು ನಮ್ಮ ಶ್ರೀಮಠದ ಪ್ರತೀತಿಯಾಗಿದೆ. ಯಾತ್ರಾ ಮಹೋತ್ಸವದ ಅಂಗವಾಗಿ 11 ದಿನಗಳ ಕಾಲ ಪ್ರವಚನ ಜರುಗಲಿದೆ ಎಂದರು.ಡಾ. ಅನ್ನದಾನೀಶ್ವರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶ್ರೀಮಠದ ಉತ್ತರಾಧಿಕಾರಿ ಡಾ. ಮಲ್ಲಿಕಾರ್ಜುನ ಸ್ವಾಮೀಜಿ, ಗುರುದೇವ ದೇವರು ಕಮತಾನಟ್ಟಿ ಸೇರಿದಂತೆ ಅನೇಕ ಹರಗುರು ಚರಮೂರ್ತಿಗಳು, ಯಾತ್ರಾ ಸಮಿತಿ ಅಧ್ಯಕ್ಷ ಕೈಲಾಸಪತಿ ಹಿರೇಮಠ, ಕರಬಸಪ್ಪ ಹಂಚಿನಾಳ, ದೊಡ್ಡಪ್ಪ ಅಂಗಡಿ, ವೀರನಗೌಡ ಗುಡಪದಪ್ಪನವರ, ಎಂ.ಎಸ್. ಶಿವಶೆಟ್ಟ, ನಾಗೇಶ ಹುಬ್ಬಳ್ಳಿ, ಈರಣ್ಣ ಹಣಜಿ, ಎಂ.ಜಿ. ಗಚ್ಚಣ್ಣವರ, ಬಸಪ್ಪ ಬನ್ನಿಕೊಪ್ಪ, ಎಂ.ಎಸ್. ಹೊಟ್ಟೀನ, ವಿ.ಆರ್. ಹಿರೇಮಠ, ವೀರೇಶ ಸಜ್ಜನರ, ಬಸವರಾಜ ಅಂಕದ,ಪ್ರಶಾಂತ ಗುಡದಪ್ಪನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.