ವಿಮಾ ಕಂಪನಿ ವಿರುದ್ಧ ಅನ್ನದಾತರ ಆಕ್ರೋಶ

KannadaprabhaNewsNetwork |  
Published : May 05, 2026, 01:15 AM IST
ಚಿತ್ರದುರ್ಗ  ಎರಡನೇ ಪುಟದ ಲೀಡ್      | Kannada Prabha

ಸಾರಾಂಶ

ಬೆಳೆ ವಿಮೆಪಾವತಿಗೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಬೆಳೆ ವಿಮೆ ಪಾವತಿಸದ ವಿಮಾ ಕಂಪನಿ ವಿರುದ್ಧ ಸಿಡಿದೆದ್ದಿರುವ ರೈತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ವಿಮೆ ಕಂತು ಪಾವತಿಸಿರುವ ರೈತರಿಗೆ ಇನ್ನೆರಡು ದಿನಗಳಲ್ಲಿ ವಿಮೆ ಹಣ ಬಿಡುಗಡೆ ಮಾಡದಿದ್ದರೆ ಮೇ 7 ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ರೈತ ಸಂಘದ ಕಾರ್ಯಕರ್ತರು ಎಚ್ಚರಿಕೆ ನೀಡಿದರು.

ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸಭೆ ನಡೆಸಿ ತೀವ್ರ ಆಕ್ರೋಶ ಹೊರ ಹಾಕಿದರು. ಈ ವೇಳೆ ಮಾತನಾಡಿದ ರೈತ ಸಂಘದ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಎಚ್ಚರಿಸಿದರು. ಬೆಳೆ ವಿಮೆ ಕೊಡಿಸುವ ವಿಚಾರದಲ್ಲಿ ಜಿಲ್ಲಾಡಳಿತ, ಕೃಷಿ ಇಲಾಖೆ ಅಧಿಕಾರಿಗಳು ರೈತರ ಬದುಕಿನೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆಂದು ದೂರಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ವಿರೋಧಿ ನೀತಿ ಅನುಸರಿಸುತ್ತಿರುವುದನ್ನು ವಿರೋಧಿಸಿ ಮೊದಲಿನಿಂದಲೂ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಮಾ.3 ರಂದು ಬೆಳೆವಿಮೆ ಪಾವತಿಸುವಂತೆ ಚಳ್ಳಕೆರೆ ತಾಲೂಕು ಕಚೇರಿ ಮುಂಭಾಗದಲ್ಲಿ ಧರಣಿ ಕುಳಿತಾಗ ಜಂಟಿ ಕೃಷಿ ನಿರ್ದೇಶಕರು ಹಾಗೂ ತಹಸೀಲ್ದಾರ್ ಅವರು ಸ್ಥಳಕ್ಕೆ ಆಗಮಿಸಿ ಬೆಳೆವಿಮೆ ಪಾವತಿಸುತ್ತೇವೆ. ಧರಣಿಯನ್ನು ಹಿಂದಕ್ಕೆ ಪಡೆಯುವಂತೆ ಮನವೊಲಿಸಿದಾಗ ಉಪವಾಸ ಸತ್ಯಾಗ್ರಹ ಕೈಬಿಟ್ಟೆವು. ಆದರೆ ಇದುವರೆವಿಗೂ ಬೆಳೆವಿಮೆ ರೈತರ ಬ್ಯಾಂಕ್ ಖಾತೆಗಳಿಗೆ ಜಮ ಆಗಿಲ್ಲ ಎಂದು ಆರೋಪಿಸಿದರು.

ಚಳ್ಳಕೆರೆ ತಾಲೂಕಿನ ಹಿರೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 80 ರೈತರಿಗೆ ಓರಿಯಂಟಲ್ ವಿಮಾ ಕಂಪನಿ ಬೆಳೆ ವಿಮೆ ಪಾವತಿಸಿದ್ದು, ಜಿಲ್ಲೆಯ ಇತರೆ ರೈತರನ್ನೇಕೆ ಪರಿಗಣಿಸಿಲ್ಲ ಎಂದು ಪ್ರಶ್ನಿಸಿದ ಕೆ.ಪಿ.ಭೂತಯ್ಯ, ಇಂತಹ ತಾರತಮ್ಯವೆಸಗುತ್ತಿರುವ ಈ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ರೈತ ಮುಖಂಡ ಕೆ.ಸಿ.ಹೊರಕೇರಪ್ಪ ಮಾತನಾಡಿ ಪ್ರಧಾನ ಮಂತ್ರಿಗಳ ಫಸಲ್ ಭೀಮ ಯೋಜನೆಯಡಿ ಅನುಕೂಲವಾಗುತ್ತದೆಂದು ನಂಬಿ ಬೆಳೆ ವಿಮೆ ಕಟ್ಟಿರುವ ರೈತರಿಗೆ ವಿಮೆ ಕಂಪನಿಗಳು ಪರಿಹಾರ ಕೊಡದೆ ಮೋಸ ಮಾಡುತ್ತಿವೆ. ಸರ್ಕಾರವೇ ನೇರವಾಗಿ ಜವಾಬ್ದಾರಿ ವಹಿಸಿಕೊಳ್ಳಬೇಕು. ಜಿಲ್ಲಾಡಳಿತ ಕೃಷಿ ಇಲಾಖೆ, ಬೆಳೆ ವಿಮೆ ಕಂಪನಿಗಳು ನಿರಂತರವಾಗಿ ರೈತರಿಗೆ ಮೋಸ ಮಾಡುತ್ತಿವೆ. ಜಿಲ್ಲೆಯಾದ್ಯಂತ ಪ್ರತಿ ತಾಲೂಕಿನಲ್ಲಿಯೂ ಬೆಳೆ ವಿಮೆ ಹಣ ನೀಡುವಂತೆ ನವೆಂಬರ್ ನಿಂದಲೂ ಹೋರಾಟ ಮಾಡುತ್ತಿದ್ದೇವೆ. ಮೂರ್ನಾಲ್ಕು ದಿನಗಳಲ್ಲಿ ಬೆಳೆ ವಿಮೆ ಪಾವತಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಬೀಗ ಹಾಕಿ ಹೆದ್ದಾರಿ ಬಂದ್ ಮಾಡುವುದಾಗಿ ಗಡುವು ನೀಡಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯ ಹಂಪಯ್ಯನಮಾಳಿಗೆ ಮಾತನಾಡಿ,ಕಂತು ಪಾವತಿಸಿದರೂ ವಿಮಾ ಕಂಪನಿಗಳು ವಿಮೆ ಮೊತ್ತ ನೀಡುತ್ತಿಲ್ಲ. ಬೇಸಗೆ ಈ ದಿನಗಳಲ್ಲಿ ಜಮೀನುಗಳಿಗೆ ನೀರು ಹಾಯಿಸುವುದ ಬಿಟ್ಟು ರೈತರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ಮಾಡುವ ಪರಿಸ್ಥಿತಿ ಎದುರಾಗಿದೆ. ಉತ್ತಮ ಮಳೆಯಾದರೆ ಮುಂಗಾರು ಚಟುವಟಿಕೆ ಶುರುವಾಗುತ್ತವೆ. ಬೆಳೆ ವಿಮೆ ಬಂದರೆ ರೈತರು ಬಿತ್ತನೆ ಬೀಜ, ರಸಗೊಬ್ಬರ ಕೊಳ್ಳಲು ಅನುಕೂಲವಾಗುತ್ತದೆ . ಮೂರ್ನಾಲ್ಕು ದಿನಗಳಲ್ಲಿ ವಿಮೆ ಮೊತ್ತ ಪಾವತಿಸದಿದ್ದರೆ ಹೋರಾಟ ಉಗ್ರ ರೂಪಕ್ಕೆ ಕೊಂಡೊಯ್ಯುವುದು ಅನಿವಾರ್ಯ ಎಂದರು ರೈತ ಸಂಘದ ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಬಸ್ತಿಹಳ್ಳಿ ಜಿ.ಸುರೇಶ್‍ಬಾಬು, ತಾಲೂಕು ಅಧ್ಯಕ್ಷ ಟಿ.ಹಂಪಣ್ಣ, ಆರ್.ಚೇತನ್ ಯಳನಾಡು, ಎಂ.ಎಸ್.ಪ್ರಭು, ಬಿ.ಓ.ಶಿವಕುಮಾರ್, ಎಂ.ಶಶಿಕಲ ಪ್ರತಿಭಟನೆ ನೇತೃತ್ವ ವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭ್ರಷ್ಟಾಚಾರ, ತುಷ್ಠೀಕರಣ ರಾಜಕಾರಣಕ್ಕೆ ತಕ್ಕ ಪಾಠ
ಪಿಡಿಒಗಳಿಗೆ ಸೂಕ್ತ ಸೇವಾ ಭದ್ರತೆ ಒದಗಿಸಿ