ನರಗುಂದ: ನರಗುಂದ ಪುರಸಭೆಗೆ ಅಧ್ಯಕ್ಷರಾಗಿ ಬಿಜೆಪಿಯ 8ನೇ ವಾರ್ಡ್ ನ ಸದಸ್ಯೆ ಅನ್ನಪೂರ್ಣ ಸಿದ್ದಪ್ಪ ಯಲಿಗಾರ, ಉಪಾಧ್ಯಕ್ಷರಾಗಿ 20 ನೇ ವಾರ್ಡ್ ನ.ಕಾಶವ್ವ ಬಸಪ್ಪ ಮಳಗಿ ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
ಎರಡೂ ಸ್ಥಾನಕ್ಕೆ ತಲಾ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ತಹಸೀಲ್ದಾರ್ ಶ್ರೀಶೈಲ ತಳವಾರ ಅಧ್ಯಕ್ಷ, ಉಪಾಧ್ಯಕ್ಷರನ್ನು ಘೋಷಣೆ ಮಾಡಿದರು. ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಶಾಸಕ ಸಿ.ಸಿ. ಪಾಟೀಲ, ಸಂಸದ ಪಿ.ಸಿ.ಗದ್ದಿಗೌಡ್ರ ಅಭಿನಂದಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಿ.ಸಿ. ಪಾಟೀಲ, ಪುರಸಭೆ ನೂತನ ಅಧ್ಯಕ್ಷೆ, ಉಪಾಧ್ಯಕ್ಷೆ ಅಭಿವೃದ್ಧಿ ಪರ ಆಡಳಿತ ನಡೆಸಬೇಕು. ಪಟ್ಟಣದ ಪ್ರತಿ ವಾರ್ಡ್‌ನಲ್ಲೂ ಸಂಚರಿಸಿ ಸಮಸ್ಯೆ ಆಲಿಸಬೇಕು. ಪುರಸಭೆಯಲ್ಲಿ 25 ವರ್ಷಗಳ ಸುದೀರ್ಘ ಅವಧಿಯ ಆಡಳಿತ ಬಿಜೆಪಿ ನಡೆಸುತ್ತಾ ಬಂದಿದೆ. ಬೆಂಬಲ ನೀಡಿದ ಎಲ್ಲ ಸದಸ್ಯರುಗಳಿಗೆ ಅಭಿನಂದನೆ ಸಲ್ಲಿಸಿದರು. ಪಟ್ಟಣ ಅಭಿವೃದ್ಧಿಯಾಗಿದೆ. ಉಳಿದ ಅಭಿವೃದ್ಧಿ ಕೆಲಸ ಪೂರ್ಣಗೊಳಿಸಬೇಕು. ಕಾಂಗ್ರೆಸ್ ಸರ್ಕಾರ ಬಂದ ಪರಿಣಾಮ ಯಾವುದೇ ಅಭಿವೃದ್ಧಿಗೆ ಅನುದಾನವಿಲ್ಲ. ಆದ್ದರಿಂದ ಇದರ ನಡುವೆ ಪಟ್ಟಣವನ್ನು ಅಭಿವೃದ್ಧಿಯತ್ತ ಮುನ್ನಡೆಸಬೇಕೆಂದರು.
ನರಗುಂದದ ಮಾಜಿ ಶಾಸಕರು ತಾವೇ ಶಾಸಕರಂತೇ ವರ್ತಿಸುತ್ತಿದ್ದಾರೆ. ಅವರ ಮಗ ಬೆಂಗಳೂರಿನಲ್ಲಿದ್ದುಕೊಂಡು ವರ್ಗಾವಣೆ ಕಾರ್ಯಕ್ಕೆ ಇಳಿದರೆ, ಅವರ ಇನ್ನೊಬ್ಬ ಮಗ ನರಗುಂದ ಕ್ಷೇತ್ರದಲ್ಲಿ ಮರಳು ಮಾಫಿಯಾದ ವಸೂಲಿಯಲ್ಲಿ ತೊಡಗಿದ್ದಾರೆ, ಇವರು ಮೂರು ಜನ ಅಘೋಷಿತ ಶಾಸಕರಂತೆ ವರ್ತಿಸುತ್ತಿದ್ದಾರೆ. ಈ ರೀತಿ ಆಡಳಿತ ವ್ಯವಸ್ಥೆ ರಾಜ್ಯದಲ್ಲಿ ಎಲ್ಲಿಯೂ ಇಲ್ಲ ಎಂದು ಮಾಜಿ ಶಾಸಕರ ವಿರುದ್ಧ ಹರಿಹಾಯ್ದರು.ಈ ಸಂದರ್ಭದಲ್ಲಿ ಸಂಸದ ಪಿ.ಸಿ. ಗದ್ದಿಗೌಡರ, ಪುರಸಭೆ ಸದಸ್ಯರಾದ ಪ್ರಶಾಂತ ಜೋಶಿ, ಸುನೀಲ್ ಕುಷ್ಟಗಿ, ಚಂದ್ರಗೌಡ ಪಾಟೀಲ, ಭಾವನಾ ಪಾಟೀಲ, ಮಹೇಶ ಬೋಳಶೆಟ್ಟಿ, ರಾಮನಗೌಡ ಪಾಟೀಲ, ಪ್ರಕಾಶ ಹಾದಿಮನಿ, ಬಸವಣ್ಣಿವ್ವ ವಡ್ಡಿಗೇರಿ, ದೇವಣ್ಣ ಕುಲಾಲ, ಹಸನ ಗೋಟರ್, ರೇಣವ್ವ ಕಿಲಾರಿ, ಶಿವಾನಂದ ಮುತ್ತವಾಗ, ಬಸು ಪಾಟೀಲ, ಸಂಭಾಜೀ ಕಾಶ್ಮೀರ, ಎ.ಎಂ. ಹುಡೇದ, ಅನೀಲ ಧರಿಯಣ್ಣವರ, ವಿಠಲ ಹವಾಲ್ದಾರ, ಪುರಸಭೆ ಅಧಿಕಾರಿ ಪಿ.ಕೆ. ಗುಡದೇರಿ ಹಾಗೂ ಬಿಜೆಪಿ ಮುಖಂಡರಿದ್ದರು.
ಸಿಎಂ ಸಿದ್ದರಾಮಯ್ಯ ಅಪರಾಧಿಯಲ್ಲ, ಆರೋಪಿ ಮಾತ್ರ. ಕಾನೂನು ಬಲ್ಲ ಅವರು, ರಾಜೀನಾಮೆ ಕೊಡುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರ 13 ವರ್ಷದ ಹಿಂದೆ ಯಡಿಯೂರಪ್ಪನವರಿಗೆ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿದ್ದರು. ಈಗ ಅವರೇ ಆರೋಪಿಯಾಗಿದ್ದಾರೆ. ಆದ್ದರಿಂದ ತನಿಖೆ ಪೂರ್ಣಗೊಳ್ಳುವವರೆಗೂ ರಾಜೀನಾಮೆ ಕೊಟ್ಟು ಹೊರಬರಬೇಕು ಎಂದು ಶಾಸಕ ಸಿ.ಸಿ.ಪಾಟೀಲ ಹೇಳಿದ್ದಾರೆ.