ಹಸಿದವರಿಗೆ ಆಸರೆಯಾದ ಅಣ್ಣಿಗೇರಿ ಇಂದಿರಾ ಕ್ಯಾಟೀನ್‌

KannadaprabhaNewsNetwork |  
Published : Aug 25, 2025, 01:00 AM IST
 ಅಣ್ಣಿಗೇರಿ ಇಂದಿರಾ ಕ್ಯಾಂಟೀನ್‌ | Kannada Prabha

ಸಾರಾಂಶ

ಪುರಸಭೆ ಆಡಳಿತವಿರುವ ಪಟ್ಟಣ ಪ್ರದೇಶಗಳಲ್ಲೂ ಇಂದಿರಾ ಕ್ಯಾಂಟೀನ್‌ಗಳು ಆರಂಭವಾಗಿದ್ದು, ಅಣ್ಣಿಗೇರಿಯಲ್ಲಿ ₹87 ಲಕ್ಷ ವೆಚ್ಚದಲ್ಲಿ ಇಂದಿರಾ ಕ್ಯಾಟೀನ್‌ ನಿರ್ಮಿಸಲಾಗಿದೆ. ಕಳೆದ ಮೇ 26ರಂದು ಈ ಕ್ಯಾಟೀನ್‌ ಉದ್ಘಾಟನೆಯಾಗಿದ್ದು, ಅತ್ಯಲ್ಪ ಅವಧಿಯಲ್ಲಿ ಶುಚಿ-ರುಚಿಯಾದ ಉಪಾಹಾರ, ಊಟ, ಶುದ್ಧ ನೀರು ಮೂಲಕ ಜನಪ್ರಿಯತೆ ಗಳಿಸಿದೆ.

ಶಿವಾನಂದ ಅಂಗಡಿ

ಅಣ್ಣಿಗೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಹತ್ವಾಕಾಂಕ್ಷೆಯ "ಇಂದಿರಾ ಕ್ಯಾಂಟೀನ್‌ " ಅಣ್ಣಿಗೇರಿಯಲ್ಲಿ ಪ್ರಾರಂಭವಾದ 3 ತಿಂಗಳಲ್ಲೇ ಜನಪ್ರಿಯತೆ ಪಡೆಯುತ್ತಿದ್ದು, ನಿತ್ಯ ಶಾಲಾ ಕಾಲೇಜುಗಳಿಗೆ ಆಗಮಿಸುವ ವಿದ್ಯಾರ್ಥಿಗಳು, ಸಣ್ಣಪುಟ್ಟ ವ್ಯಾಪಾರಸ್ಥರು, ವೃದ್ಧರಿಗೆ ಆಸರೆಯಾಗಿದೆ.

2013- 2018ರ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ರಾಜ್ಯಾದ್ಯಂತ ನಗರಪ್ರದೇಶ, ಮಹಾನಗರಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಲಾಯಿತು. ಈಗ ಎರಡನೇ ಅವಧಿಯಲ್ಲಿ ಪುರಸಭೆ ಆಡಳಿತವಿರುವ ಪಟ್ಟಣ ಪ್ರದೇಶಗಳಲ್ಲೂ ಇಂದಿರಾ ಕ್ಯಾಂಟೀನ್‌ಗಳು ಆರಂಭವಾಗಿದ್ದು, ಅಣ್ಣಿಗೇರಿಯಲ್ಲಿ ₹87 ಲಕ್ಷ ವೆಚ್ಚದಲ್ಲಿ ಇಂದಿರಾ ಕ್ಯಾಟೀನ್‌ ನಿರ್ಮಿಸಲಾಗಿದೆ. ಕಳೆದ ಮೇ 26ರಂದು ಈ ಕ್ಯಾಟೀನ್‌ ಉದ್ಘಾಟನೆಯಾಗಿದ್ದು, ಅತ್ಯಲ್ಪ ಅವಧಿಯಲ್ಲಿ ಶುಚಿ-ರುಚಿಯಾದ ಉಪಾಹಾರ, ಊಟ, ಶುದ್ಧ ನೀರು ಮೂಲಕ ಜನಪ್ರಿಯತೆ ಗಳಿಸಿದೆ.

ಡಾ. ಮಯೂರ ಮೋರೆ ಎಂಬವರಿಗೆ ಏಜೆನ್ಸಿ ನೀಡಲಾಗಿದ್ದು, ಇಂದಿರಾ ಕ್ಯಾಟೀನ್‌ದಲ್ಲಿ ಪ್ರತಿದಿನ ಬೆಳಗಿನ ಉಪಾಹಾರ, ಆಹಾರ ಸಿದ್ಧಪಡಿಸುತ್ತಾರೆ. ಅಡುಗೆ ಮನೆಯಲ್ಲಿ ಆಹಾರ ತಯಾರಿಗಾಗಿಯೇ ₹33 ಲಕ್ಷ ವೆಚ್ಚದಲ್ಲಿ ಅಡುಗೆ ಉಪಕರಣಗಳನ್ನು ಅಳವಡಿಸಲಾಗಿದೆ. ಅಡುಗೆ ಸಿದ್ಧತೆ ಸೇರಿ ಆಹಾರ ವಿತರಣೆಗೆ ನಾಲ್ವರು ಸಿಬ್ಬಂದಿ ಇದ್ದಾರೆ.

ಇಡ್ಲಿ-ಚಟ್ನಿ ಫೇಮಸ್‌: ₹ 5ರಲ್ಲಿ ಬೆಳಗಿನ ಉಪಹಾರ ಸಿಗುತ್ತದೆ. ವಾರದ ಎಲ್ಲಾ ದಿನಗಳಲ್ಲೂ 3 ಇಡ್ಲಿ, ಪುದೀನಾ ಸೇರಿ ಬೇರೆ ಬೇರೆ ವಿಧದ ಚಟ್ನಿ, ಸಾಂಬಾರ್‌ ಅಥವಾ ಮಂಡಕ್ಕಿ-ಬಜ್ಜಿ, ಖಾರಾ ಬಾತ್‌, ಅವಲಕ್ಕಿ, ವೆಜ್‌ ಪಲಾವ್‌-ರೈತಾ, ಚಿತ್ರಾನ್ನ-ಚಟ್ನಿ, ಆಲುಬಾತ್‌-ಚಟ್ನಿ ನೀಡಲಾಗುತ್ತದೆ. ಮಧ್ಯಾಹ್ನ ಊಟಕ್ಕೆ ₹10ರಲ್ಲಿ ಅಲಸಂದಿ ಕಾಳು ಸಾಂಬಾರ್, ಕೀರ್‌ ಅಥವಾ ಜೋಳದ ರೊಟ್ಟಿ- ಸೊಪ್ಪಿನ ಪಲ್ಯ, ಮೊಸರನ್ನ, ಚಪಾತಿ, ಅನ್ನ-ಸಾಂಬಾರ್‌, ರಾಗಿ ಅಂಬಲಿ, ರಾತ್ರಿ ಊಟಕ್ಕೆ ಮೊಳಕೆಕಾಳು ಸಾಂಬಾರು, ಜೋಳದ ರೊಟ್ಟಿ-ಪಲ್ಯ ನೀಡಲಾಗುತ್ತಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ವೃದ್ಧರು, ಸಣ್ಣಪುಟ್ಟ ವ್ಯಾಪಾರಸ್ಥರು ಹೆಚ್ಚಿನ ಪ್ರಮಾಣದಲ್ಲಿನಿಲ್ಲಿ ಊಟ ಮಾಡುತ್ತಾರೆ.

ಪುರಸಭೆ ಉಸ್ತುವಾರಿ: ಸ್ಥಳೀಯ ಪುರಸಭೆ ಅಧಿಕಾರಿಗಳು ಇಂದಿರಾ ಕ್ಯಾಂಟೀನ್‌ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ಪ್ರತಿ ಹಂತದಲ್ಲಿ ಪರಿಶೀಲನೆ ನಡೆಸಲು ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಆ್ಯಪ್‌ ಮೂಲಕ ಅಡುಗೆ ತಯಾರಿಯಿಂದ ಹಿಡಿದು, ವಿತರಣೆ, ಊಟ ಮಾಡುವುದು, ಉಪಾಹಾರ ವಿತರಣೆ ಪರಿಶೀಲಿಸುತ್ತಾರೆ. ಈ ಸಂಬಂಧ ವಾಟ್ಸಾಪ್‌ ಗ್ರೂಪ್‌ ಸಹ ರಚಿಸಲಾಗಿದ್ದು, ಪುರಸಭೆ ಮುಖ್ಯಾಧಿಕಾರಿ, ಆರೋಗ್ಯಾಧಿಕಾರಿ, ಕ್ಯಾಂಟೀನ್‌ ಸಿಬ್ಬಂದಿ ತಂದ ಕಾಯಿಪಲ್ಲೆದಿಂದ ಹಿಡಿದು ದಿನಸಿವರೆಗೂ ಪೋಟೋಗಳನ್ನು ಗ್ರೂಪ್‌ಗೆ ಹಾಕುತ್ತಾರೆ.

ಅಭಿಪ್ರಾಯ ಸಂಗ್ರಹಣೆ ಇಲ್ಲವೇ ದೂರುಗಳಿದ್ದಲ್ಲಿ ದಾಖಲಿಸಲು ಕ್ಯಾಟೀನ್‌ನಲ್ಲಿಯೇ ನೋಟ್‌ ಬುಕ್‌ವೊಂದನ್ನು ಇಡಲಾಗಿದೆ. ಉಪಾಹಾರ, ಊಟದ ಬಳಿಕ ರುಚಿ, ಗುಣಮಟ್ಟ ಸೇರಿದಂತೆ ಅಲ್ಲಿನ ಸ್ವಚ್ಛತೆ ಹೀಗೆ ಪ್ರತಿಯೊಂದನ್ನು ಗ್ರಾಹಕರು ದಾಖಲಿಸಿ ಹೋಗಿದ್ದಾರೆ.

ನಾನು ಸಹ ಒಂದೊಂದು ಸಲ ಮಧ್ಯಾಹ್ನ ಇಂದಿರಾ ಕ್ಯಾಟೀನಿನಲ್ಲೇ ಊಟ ಮಾಡಿದ್ದೇನೆ. ಶನಿವಾರವಂತೂ ವಿದ್ಯಾರ್ಥಿಗಳು ಸರದಿ ಸಾಲಿನಲ್ಲಿ ನಿಂತು ಉಪಾಹಾರ ಮಾಡುತ್ತಾರೆ. ಅಣ್ಣಿಗೇರಿಯಲ್ಲಿ ಕಡಿಮೆ ದರದಲ್ಲಿ ಗುಣಮಟ್ಟದ ಊಟ, ಉಪಾಹಾರ, ಶುದ್ಧ ನೀರು ನೀಡುವ ಹೋಟೆಲ್‌ ಕೊರತೆ ಇತ್ತು. ಈ ಇಂದಿರಾ ಕ್ಯಾಟೀನ್‌ ಶುರುವಾದ ಮೇಲೆ ವಿದ್ಯಾರ್ಥಿಗಳು ಹೆಚ್ಚು ಪ್ರಯೋಜನ ಪಡೆಯುತ್ತಿದ್ದಾರೆ. ಸಂತೆ ದಿನವಾದ ಶುಕ್ರವಾರ ರಾತ್ರಿ ಹೆಚ್ಚು ವ್ಯಾಪಾರಸ್ಥರು ಊಟ ಮಾಡುತ್ತಾರೆ. ಬೀಜ, ಗೊಬ್ಬರಕ್ಕಾಗಿ ರೈತ ಸಂಪರ್ಕ ಕೇಂದ್ರಕ್ಕೆ ಬಂದ ರೈತರು ಸಹ ಮಧ್ಯಾಹ್ನ ಕ್ಯಾಟೀನ್‌ನಲ್ಲೇ ಊಟ ಮಾಡುತ್ತಾರೆ ಎಂದು ಪುರಸಭೆ ಮುಖ್ಯಾಧಿಕಾರಿ ವೈ.ಜಿ. ಗದ್ದಿಗೌಡರ ಹೇಳಿದರು.

ವಾಕ್‌ ಮಾಡಿಕೊಂಡು ಮನೆಗೆ ಹೋಗುವಾಗ ಹಸಿವೆಯಾಗಿ ಇಂದಿರಾ ಕ್ಯಾಟೀನ್‌ ಕಂಡೆ, ಬರೀ ₹10 ದಲ್ಲಿ ಇಡ್ಲಿ, ಅವಲಕ್ಕಿ ತಿಂದೆ ತೃಪ್ತಿಯಾಯಿತು. ಕ್ಯಾಟೀನ್‌ ಸ್ವಚ್ಛತೆ, ನೀರಿನ ವ್ಯವಸ್ಥೆ ಉತ್ತಮವಾಗಿದೆ. ಇಲ್ಲಿಯ ವ್ಯವಸ್ಥೆಯನ್ನು ಜೀವನದಲ್ಲಿ ಮರೆಯಲಾರೆ ಎಂದು ಇಂಗಳಹಳ್ಳಿಯ ನಿವೃತ್ತ ಉಪನ್ಯಾಸಕ ಬಸವರಾಜ ಕುಸುಗಲ್ಲ ಹೇಳಿದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ