ಆಸ್ತಿ ತೆರಿಗೆಯನ್ನು ಶೇ. 5ರ ಬದಲಾಗಿ ಶೇ. 3ರಷ್ಟು ಮತ್ತು ಕುಡಿಯುವ ನೀರು ಪ್ರತಿ ತಿಂಗಳು ₹185ರ ಬದಲಾಗಿ ₹100ಕ್ಕೆ ಏರಿಕೆ ಮಾಡಿ ಸಭೆಯಲ್ಲಿ ಸರ್ವಾನುಮತದಿಂದ ಠರಾವು ಪಾಸ್ ಮಾಡಲಾಯಿತು.
ಅಣ್ಣಿಗೇರಿ:
ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಆಸ್ತಿ ತೆರಿಗೆ, ಕುಡಿಯುವ ನೀರಿನ ತೆರಿಗೆ ಏರಿಕೆ ಕುರಿತು ತೀವ್ರ ಚರ್ಚೆ ನಡೆಯಿತು. ಕೊನೆಗೆ ಶೇ. 3ರಷ್ಟು ಸಾರ್ವಜನಿಕ ಆಸ್ತಿ ಹಾಗೂ ₹ 100 ನೀರಿಗೆ ಹೆಚ್ಚಳ ಮಾಡಿ ಅನುಮೋದನೆ ಪಡೆಯಲಾಯಿತು.ಸಭೆಯಲ್ಲಿ ಮುಖ್ಯಾಧಿಕಾರಿ ವೈ.ಜಿ. ಗದ್ದಿಗೌಡ್ರ ಮಾತನಾಡಿ, ಸರ್ಕಾರದ ಕ್ರಮದ ಅನುಸಾರವಾಗಿ 2025-26ರ ಸಾರ್ವಜನಿಕ ಆಸ್ತಿ ತೆರಿಗೆ ಶೇ. 5, ಪಟ್ಟಣದ 24/7 ಕುಡಿಯುವ ನೀರು 8 ಸಾವಿರ ಲೀಟರ್‌ಗೆ ಪ್ರತಿ ತಿಂಗಳು ಕನಿಷ್ಠ ₹ 56 ತೆರಿಗೆ ಇದೆ. ಇದನ್ನು ₹185ಕ್ಕೆ ಏರಿಸಬೇಕೆಂದು ಅನುಮೋದನೆ ಕೇಳಿದರು. ಈ ವೇಳೆ ಕೆಲ ಸದಸ್ಯರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪುರಸಭೆ ಮೂಲ ಸೌಕರ್ಯ ನಿರ್ವಹಣೆ ಮತ್ತು ಸರ್ಕಾರದ ಆದೇಶವಿದ್ದು, ಏರಿಕೆ ವಸೂಲಾತಿ ಅನಿವಾರ್ಯ ಎಂದು ಮುಖ್ಯಾಧಿಕಾರಿ ಸ್ಪಷ್ಟಪಡಿಸಿದರು.
ಈ ವೇಳೆ ಸದಸ್ಯ ಸಿ.ಜಿ. ನಾವಳ್ಳಿ, ಬಾಬಾಜಾನ ಮುಲ್ಲಾ ಮತ್ತು ವಿ.ಪಿ. ಗುರಿಕಾರ ಮಾತನಾಡಿ, ಸಾರ್ವಜನಿಕರಿಗೆ ಹೆಚ್ಚಿನ ಹೊರೆಯಾಗದಂತೆ ತೆರಿಗೆ ಹೆಚ್ಚಳ ಮಾಡುವಂತೆ ಮನವಿ ಮಾಡಿದರು. ಕೊನೆಗೆ ಆಸ್ತಿ ತೆರಿಗೆಯನ್ನು ಶೇ. 5ರ ಬದಲಾಗಿ ಶೇ. 3ರಷ್ಟು ಮತ್ತು ಕುಡಿಯುವ ನೀರು ಪ್ರತಿ ತಿಂಗಳು ₹185ರ ಬದಲಾಗಿ ₹100ಕ್ಕೆ ಏರಿಕೆ ಮಾಡಿ ಸಭೆಯಲ್ಲಿ ಸರ್ವಾನುಮತದಿಂದ ಠರಾವು ಪಾಸ್ ಮಾಡಲಾಯಿತು. ಯಾವುದೇ ತೆರಿಗೆ ಪ್ರತಿ ವರ್ಷದಲ್ಲಿ ಏಪ್ರಿಲ್‌ನಲ್ಲಿ ಕಟ್ಟಿದರೆ ಶೇ. 5ರಷ್ಟು ವಿನಾಯಿತಿ ದೊರೆಯಲಿದೆ. ಆದರೆ, ಮೇ, ಜೂನ್‌ನಲ್ಲಿ ಕಟ್ಟಿದರೆ ಶೇ. 2ರಷ್ಟು ದಂಡ ವಿಧಿಸಲಾಗುವುದು ಎಂದರು,
ಪುರಸಭೆ ಅಧ್ಯಕ್ಷ ಶಿವಾನಂದ ಬೆಳಹಾರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ನಾಗಪ್ಪ ದಳವಾಯಿ, ಸ್ಥಾಯಿ ಸಮಿತಿ ಅಧ್ಯಕ್ಷ ಮುದಕಣ್ಣ ಕೊರವರ, ಸದಸ್ಯರಾದ ಈಶ್ವರ ಕಾಳಪ್ಪನವರ, ರೈಮಾನಸಾಬ್ ಹೊರಗಿನಮನಿ, ಮೆಹಬೂಬಿ ನವಲಗುಂದ, ರಜಿಯಾಬೇಗಂ ರೊಕ್ಕದಕಟ್ಟಿ, ಪರವೀನಬಾನು ಬಸಾಪುರ, ನೀಲವ್ವ ಕುರಹಟ್ಟಿ, ಬಸವಣ್ಣೆವ್ವ ದಿಡ್ಡಿ, ವಿಜಯಲಕ್ಷ್ಮಿ ಜಕರಡ್ಡಿ, ಗಂಗಾ ಕರೆಂಟನವರ, ಸಾದಿಕ್, ದಾವಲಸಾಬ್ ಸುಂಕದ ಸೇರಿದಂತೆ ಹಲವರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.