ಜನವರಿ ೨೬ರಿಂದ ೨೮ರ ವರೆಗೆ ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಉಪಸ್ಥಿತಿಯಲ್ಲಿ ದೇವರ ವರ್ಧಂತ್ಯುತ್ಸವ ಹಾಗೂ ರಥೋತ್ಸವ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಲಿದೆ.
ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಉಪಸ್ಥಿತಿಕನ್ನಡಪ್ರಭ ವಾರ್ತೆ ಭಟ್ಕಳ
ತಾಲೂಕಿನ ಶಕ್ತಿಕ್ಷೇತ್ರಗಳಲ್ಲೊಂದಾದ ಶ್ರೀ ಕ್ಷೇತ್ರ ದೇವಿಮನೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜನವರಿ ೨೬ರಿಂದ ೨೮ರ ವರೆಗೆ ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಉಪಸ್ಥಿತಿಯಲ್ಲಿ ದೇವರ ವರ್ಧಂತ್ಯುತ್ಸವ ಹಾಗೂ ರಥೋತ್ಸವ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಲಿದೆ. ದೇವಿಮನೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಶಕ್ತಿಕ್ಷೇತ್ರವಾಗಿದೆ. ಈ ದೇವಸ್ಥಾನದಲ್ಲಿರುವುದು ಉದ್ಭವ ಲಿಂಗವಾಗಿದ್ದು, ಇದು ಹಿಂದೆ ಗೋವು ನಿತ್ಯವೂ ಹರಿಸುತ್ತಿದ್ದ ಕ್ಷೀರಧಾರೆಯಿಂದ ಲೋಕಕ್ಕೆ ಪರಿಚಯವಾಗಿದೆ. ಭಕ್ತರ ಆಶೋತ್ತರಗಳನ್ನು ಅತ್ಯಂತ ಕ್ಷಿಪ್ರಗತಿಯಲ್ಲಿ ನೆರವೇರಿಸುವ, ಸರ್ವರ ದುಃಖ ನಿವಾರಣೆ ಮಾಡುವ, ಸರ್ವರ ಇಷ್ಟಾರ್ಥ ಸಿದ್ಧಿಗೊಳ್ಳುವ ಸಿದ್ಧಿಕ್ಷೇತ್ರವೆಂದೇ ಖ್ಯಾತಿ ಪಡೆದಿರುವ ಶ್ರೀ ದೇವಿ ನೆಲೆಸಿರುವ ದೇವಿಮನೆ ಕ್ಷೇತ್ರವಿಂದು ರಾಜ್ಯ, ದೇಶದಾದ್ಯಂತ ಭಕ್ತರನ್ನು ಹೊಂದಿದೆ. ವರ್ಧಂತ್ಯುತ್ಸವ ಮತ್ತು ರಥೋತ್ಸವದ ಪ್ರಯುಕ್ತ ಜ.೨೬ರಂದು ಬೆಳಿಗ್ಗ ಗಣೇಶ ಪೂಜಾ, ದೇವತಾಪ್ರಾರ್ಥನೆ, ನಾಂದಿ, ಪುಣ್ಯಾಹ, ಮಹಾಸಂಕಲ್ಪ, ಋತ್ವಿಗ್ವರಣ, ಬ್ರಹ್ಮಕೂರ್ಚಾ ಹವನ, ಮಹಾಗಣಪತಿ ಪ್ರೀತ್ಯರ್ಥ ಅರ್ಥರ್ವಶೀರ್ಷ ಹವನ, ಮಹಾಪೂಜೆ ತೀರ್ಥಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ೩ ಗಂಟೆಯಿಂದ ಭವತಾರಿಣಿ ವಲಯದ ಮಾತೆಯರಿಂದ ಭಜನಾ ಕಾರ್ಯಕ್ರಮ, ರಾತ್ರಿ ೮ಗಂಟೆಯಿಂದ ೯ರವರೆಗೆ ಭರತನಾಟ್ಯ ನಡೆಯಲಿದೆ. ಜ.೨೭ರಂದು ಬೆಳಗ್ಗೆ ಗಣೇಶ ಪೂಜೆ, ಪುಣ್ಯಾಹ, ರುದ್ರಹವನದ ಮಹಾಸಂಕಲ್ಪ, ಶ್ರೀದೇವರಿಗೆ ಕಲಾವೃದ್ಧಿ-ಯಾದಿ ಹವನ, ವೀರಭದ್ರ ದೇವರ ಪ್ರೀತ್ಯರ್ಥ ರುದ್ರವನದ ಪೂರ್ಣಾಹುತಿ, ಬಲಿ, ರಥ ಸಂಪ್ರೋಕ್ಷಣೆ, ಶ್ರೀದೇವರ ರಥಾರೋಹಣ, ಮಹಾರಥೋತ್ಸವ, ಅನ್ನ ಸಂತರ್ಪಣೆ ನಡಯಲಿದೆ. ಮಧ್ಯಾಹ್ನ ರಾಘವೇಶ್ವರ ಭಾರತಿ ಸ್ವಾಮೀಜಿಯವರಿಂದ ಧರ್ಮಸಭೆ ಮತ್ತು ಆಶೀರ್ವಚನ ನಡೆಯಲಿದೆ. ದೇವಸ್ಥಾನದ ವತಿಯಿಂದ ಉದ್ಯಮಿ ಅಶೋಕ ಶಂಕರ ಭಟ್ಟ ಅವರನ್ನು ಗೌರವಿಸಲಾಗುತ್ತದೆ. ಸಂಜೆ ೬ ಗಂಟೆಯಿಂದ ಹೊನ್ನಾವರದ ಮೇಲಿನ ಮಣ್ಣಿಗೆಯ ಶ್ರೀ ಗಜಾನನ ಕಲೆ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಟ್ರಸ್ಟ ಇವರಿಂದ ವರದಯೋಗಿ ಶ್ರೀಧರ ಎನ್ನುವ ನಾಟಕ ನಡೆಯಲಿದೆ. ಜ.೨೮ರಂದು ಗಣೇಶ ಪೂಜಾ, ಪುಣ್ಯಾಹ, ಪಂಚದುರ್ಗಾ ಹವನ, ಮಹಾಸಂಕಲ್ಪ, ಹವನದ ಪೂರ್ಣಾಹುತಿ, ದೇವರಿಗೆ ಕಲಶಾಭಿಷೇಕ, ತೀರ್ಥ ಪ್ರಸಾದ ವಿತರಣೆ, ಆಶೀರ್ಗ್ರಹಣ ಹಾಗೂ ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ವಿನಾಯಕ ಭಟ್ಟ ಬೆಟ್ಕೂರು ಮತ್ತು ಆಡಳಿತ ಮಂಡಳಿಯ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.