- ಶಾಸಕರು ಅನ್ಯಾಯ ಸರಿಪಡಿಸಲು ಶೀಘ್ರ ಕ್ರಮ ಕೈಗೊಳ್ಳಲು ಕೆ.ಪಿ.ಕುಬೇಂದ್ರಪ್ಪ ಆಗ್ರಹ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಸ್ಥಾನಗಳ ಚುನಾವಣೆಗೆ ಮೀಸಲಾತಿ ಪಟ್ಟಿ ಬಿಡುಗಡೆ ಮಾಡಲಾಗಿದೆ. ಆದರೆ, ಇದರಲ್ಲಿ ವಿಶೇಷವಾಗಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ, ನ್ಯಾಮತಿ ತಾಲೂಕುಗಳ ಒಟ್ಟು 6 ಜಿಪಂ ಸ್ಥಾನಗಳಲ್ಲಿ ತಾಲೂಕಿನಲ್ಲಿ ಬಹುದೊಡ್ಡ ಸಮಾಜವಾದ ಕುರುಬ ಸಮಾಜಕ್ಕೆ ಒಂದೂ ಸ್ಥಾನ ನಿಗದಿಪಡಿಸಿಲ್ಲ. ಇದು ಕುರುಬ ಸಮಾಜ ಹಾಗೂ ಸಾಮಾಜಿಕ ನ್ಯಾಯ ತತ್ವಕ್ಕೆ ಸರ್ಕಾರ ಮಾಡಿರುವ ಅನ್ಯಾಯವಾಗಿದೆ ಎಂದು ಬಿಜೆಪಿ ರಾಜ್ಯ ಒಬಿಸಿ ಮೋರ್ಚಾ ಉಪಾಧ್ಯಕ್ಷ ಕೆ.ಪಿ. ಕುಬೇಂದ್ರಪ್ಪ ಆರೋಪಿಸಿದರು.ಭಾನುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಿಂದುಳಿದ ಹಾಗೂ ಕುರುಬ ಸಮಾಜದ ಮುಖಂಡರೊಂದಿಗೆ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಳೆದ ಚುನಾವಣೆಯಲ್ಲಿ ಹಿಂದುಳಿದ ಹಾಗೂ ಕುರುಬ ಸಮುದಾಯದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ಅವಕಾಶವಿದೆ ಎನ್ನುವ ಕಾರಣಕ್ಕೆ ಇಡೀ ಹಿಂದುಳಿದ ಮತ್ತು ಕುರುಬ ಸಮಾಜದವರು ಕಾಂಗ್ರೆಸ್ ಬೆಂಬಲಿಸಿ ಮತ ಹಾಕಿದ್ದರು. ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಆದರೆ, ಇದೀಗ ಘೋಷಣೆಯಾಗಿರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಮೀಸಲಾತಿ ಪಟ್ಟಿಯಲ್ಲಿ ಹಿಂದುಳಿದ ಮತ್ತು ಕುರುಬ ಸಮಾಜಕ್ಕೆ ಅನ್ಯಾಯವಾಗಿದೆ ಎಂದು ಆಕ್ಷೇಪಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿ.ಪಂ. ಮಾಜಿ ಸದಸ್ಯ ಎಂ.ಆರ್. ಮಹೇಶ್, ಕುರುಬ ಸಮಾಜ ಅಧ್ಯಕ್ಷ ಎಂ.ಎಸ್. ಪಾಲಾಕ್ಷಪ್ಪ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಅಧ್ಯಕ್ಷ ಎಸ್.ಎಸ್. ಬೀರಪ್ಪ ಮಾತನಾಡಿ, ಅವಳಿ ತಾಲೂಕುಗಳಲ್ಲಿ ಕುರುಬ ಸಮಾಜದ ಸುಮಾರು 45 ರಿಂದ 50 ಸಾವಿರ ಜನಸಂಖ್ಯೆ ಹೊಂದಿದೆ. ಆದ್ದರಿಂದ ಈಗ ಘೋಷಣೆ ಮಾಡಿರುವ ಜಿ.ಪಂ. ಮತ್ತು ತಾ.ಪಂ. ಮೀಸಲಾತಿ ಪಟ್ಟಿಯನ್ನು ಪರಿಷ್ಕರಿಸಿ, ಹಿಂದುಳಿದ ಮತ್ತು ಕುರುಬ ಸಮಾಜಕ್ಕೆ ಸೂಕ್ತ ರಾಜಕೀಯ ಪ್ರಾಧಾನ್ಯತೆ ಸಿಗುವಂತೆ ಕ್ರಮ ವಹಿಸಬೇಕು ಎಂದು ಒತ್ತಾಯಪಡಿಸಿದರು.
- - -
ಜಿ.ಪಂ, ಮತ್ತು ತಾ.ಪಂ. ಮೀಸಲಾತಿ ಪಟ್ಟಿಯಲ್ಲಿ ಕುರುಬ ಸಮಾಜಕ್ಕೆ ಆಗಿರುವ ಅನ್ಯಾಯ ಸರಿಪಡಿಸುವಂತೆ ಬಿಜೆಪಿ ಹಿಂದುಳಿದ ಮೋರ್ಚಾ ಪದಾಧಿಕಾರಿಗಳು, ಕುರುಬ ಸಮಾಜ ಮುಖಂಡರು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.