ಕೊಪ್ಪಳ: ಭಾರತರತ್ನ ಪ್ರಶಸ್ತಿಗೆ ಪುರಸ್ಕೃತರಾದ ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಕೊಪ್ಪಳಕ್ಕೂ ಆಗಮಿಸಿದ್ದರು. ಅವರ ಕಟ್ಟಾ ಅನುಯಾಯಿಗಳು ಈಗಲೂ ಅವರು ಇಲ್ಲಿಗೆ ಬಂದಿದ್ದನ್ನು ಸ್ಮರಿಸಿಕೊಂಡು ಸಂತಸಪಡುತ್ತಿದ್ದಾರೆ.
ಜಿಲ್ಲೆಯ ನಾಯಕರ ಮೇಲೂ ಅಡ್ವಾಣಿ ಪ್ರಭಾವ ಬೀರಿದ್ದಾರೆ. ಅವರ ಹೋರಾಟವನ್ನು ಬೆಂಬಲಿಸಿ ಅವರ ಜೊತೆಯಲ್ಲಿಯೇ ಪಾಲ್ಗೊಂಡವರೂ ಇದ್ದಾರೆ. ಎಲ್.ಕೆ. ಅಡ್ವಾಣಿ ರಥಯಾತ್ರೆಗೆ ರಾಯಚೂರು ಜಿಲ್ಲೆಗೆ ಮತ್ತು ಪಕ್ಕದ ಬಳ್ಳಾರಿ ಜಿಲ್ಲೆಗೆ ಆಗಮಿಸಿದ್ದಾಗ ಅವರನ್ನು ಖುದ್ದು ಭೇಟಿಯಾಗಿ ಬಂದವರು ಇದ್ದಾರೆ.ಜಿಲ್ಲೆಗೆ 2008ರ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೂ ಎಲ್.ಕೆ. ಅಡ್ವಾಣಿ ಆಗಮಿಸಿದ್ದರು. ಕೊಪ್ಪಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಅಂದಾನಪ್ಪ ಅಗಡಿ ಪರ ಚುನಾವಣೆ ಪ್ರಚಾರಕ್ಕಾಗಿ ಆಗಮಿಸಿ ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದರು. ಆಗ ಅವರ ಕಾರ್ಯಕ್ರಮದಲ್ಲಿ ಜಿಲ್ಲೆಯ ನಾಯಕರು ಭಾಗವಹಿಸಿದ್ದರು.ಪ್ರೀತಿಯ ಮಾತು:ಲಾಲಕೃಷ್ಣ ಅಡ್ವಾಣಿ ರಾಷ್ಟ್ರೀಯ ನಾಯಕರಾಗಿದ್ದರೂ ಸ್ಥಳೀಯ ನಾಯಕರನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಕೊಪ್ಪಳ, ರಾಯಚೂರಿಗೆ ಅಡ್ವಾಣಿ ಬಂದಾಗ ಭೇಟಿಯಾದರೆ ನಮ್ಮನ್ನು ಆತ್ಮೀಯವಾಗಿ ಮಾತನಾಡಿಸುವ ಮೂಲಕ ಹುರಿದುಂಬಿಸುತ್ತಿದ್ದರು. ಈಗ ಅವರಿಗೆ ಭಾರತ ರತ್ನ ಬಂದಿರುವುದು ನಿಜಕ್ಕೂ ತುಂಬ ಸಂತೋಷವಾಗಿದೆ ಎನ್ನುತ್ತಾರೆ ಬಿಜೆಪಿಯ ನಾಯಕರ ಅಪ್ಪಣ್ಣ ಪದಕಿ.ಅಡ್ವಾಣಿ ಬಳ್ಳಾರಿಗೆ ಬಂದಾಗ ಅವರನ್ನು ಖುದ್ದು ಭೇಟಿಯಾಗುವ ಅವಕಾಶ ದೊರೆತಿತ್ತು ಎಂದು ಹಿರಿಯ ನಾಯಕ ಡಾ.ಕೆ.ಜಿ. ಕುಲಕರ್ಣಿ ಹೇಳಿಕೊಂಡರು.ಈಗ ಅವರಿಗೆ ಭಾರತರತ್ನ ಬಂದಿರುವುದರಿಂದ ಅದೆಲ್ಲವೂ ನೆನಪಾಗುತ್ತದೆ. ಬಳ್ಳಾರಿಯಲ್ಲಿ ಭೇಟಿಯಾದ ಸಂದರ್ಭದಲ್ಲಿ, ನಾನು ಡಾ. ಕೆ.ಜಿ. ಕುಲಕರ್ಣಿ ಎಂದು ಪರಿಚಯ ಮಾಡಿಕೊಂಡಾಗ, ಕೊಪ್ಪಳದಿಂದ ಸ್ಪರ್ಧೆ ಮಾಡಿದ್ದ ಡಾಕ್ಟ್ರು ನೀವೇನಾ ಎಂದು ಪ್ರಶ್ನಿಸಿದ್ದರು. ಆಗ ನಾನು, ಅಲ್ಲ ಸಾರ್ , ಅವರು ಡಾ.ಶಂಕರಗೌಡ ಸಿಂಗಟಾಲೂರು ಎಂದು ಹೇಳಿದ್ದೆ. ಹೀಗೆ, ಪ್ರತಿಯೊಂದನ್ನು ಅವರು ನೆನಪಿನಲ್ಲಿಟ್ಟುಕೊಂಡು ಪ್ರಶ್ನೆ ಮಾಡುತ್ತಾರೆ. ಇಂಥ ಮಹಾನ್ ನಾಯಕನಿಗೆ ಭಾರತ ರತ್ನ ಬಂದಿರುವುದು ಖುಷಿಯಾಗಿದೆ ಎನ್ನುತ್ತಾರೆ.