ಭಗವಂತ ಖೂಬಾಗೆ ಟಿಕೆಟ್ ಘೋಷಣೆ: ಜಿಲ್ಲಾ ಬಿಜೆಪಿ ಸ್ವಾಗತ

KannadaprabhaNewsNetwork |  
Published : Mar 14, 2024, 02:01 AM IST
ಚಿತ್ರ 13ಬಿಡಿಆರ್‌10ಬೀದರ್‌ ಲೋಕಸಭಾ ಟಿಕೆಟ್‌ ಭಗವಂತ ಖೂಬಾ ಅವರಿಗೆ ಘೋಷಣೆಯಾಗುತ್ತಲೇ ಪಕ್ಷದ ಕಾರ್ಯಕರ್ತರು ಸಿಹಿಹಂಚಿ ಸಂಭ್ರಮಿಸಿದರು.  | Kannada Prabha

ಸಾರಾಂಶ

ಬಿಜೆಪಿ ಭರ್ಜರಿ ಜಯ ಗಳಿಸುವುದು ಖಚಿತ ಎಂದು ಜಿಲ್ಲಾ ಅಧ್ಯಕ್ಷ ಸೋಮನಾಥ ಪಾಟೀಲ್‌ ಹುಡಗಿ ತಿಳಿಸಿದರು. ಎಲ್ಲರಂತೆ ಭಗವಂತ ಖೂಬಾ ಅವರು ಸಹ ಪಕ್ಷದ ಚೌಕಟ್ಟಿನಲ್ಲಿ ಟಿಕೆಟ್‌ ಕೇಳಿದ್ದರು. ಎಲ್ಲರೂ ಒಟ್ಟಾಗಿ, ಸಂಘಟಿತರಾಗಿ ಕೆಲಸ ಮಾಡಲಿದ್ದು, ಬಿಜೆಪಿ ಜಯವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸೋಮನಾಥ ಪಾಟೀಲ್‌ ಸ್ಪಷ್ಟಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೀದರ್‌

ಲೋಕಸಭಾ ಚುನಾವಣೆಯಲ್ಲಿ ಬೀದರ್‌ ಕ್ಷೇತ್ರದಿಂದ ಸ್ಪರ್ಧಿಸಲು‌ ಮತ್ತೆ ಹಾಲಿ ಸಂಸದರು ಮತ್ತು ಕೇಂದ್ರ ಸಚಿವರಾದ ಭಗವಂತ ಖೂಬಾ ಅವರಿಗೆ ಟಿಕೆಟ್‌ ಘೋಷಿಸಿರುವುದಕ್ಕೆ ಜಿಲ್ಲಾ ಬಿಜೆಪಿ ಸ್ವಾಗತಿಸಿದೆ.

ಬಿಜೆಪಿ ಕೇಂದ್ರೀಯ ಚುನಾವಣೆ ಸಮಿತಿ ಹಾಗೂ ವರಿಷ್ಠ‌ ಮಂಡಳಿಯು ಎಲ್ಲವೂ ಪರಾಮರ್ಶಿಸಿ ಭಗವಂತ ಖೂಬಾ ಅವರನ್ನು ಅಖಾಡಕ್ಕಿಳಿಸಿದೆ. 2014 ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ ಭಗವಂತ ಖೂಬಾ ಅವರು ಜಯ ಸಾಧಿಸಿದ್ದರು. ಇದೀಗ ಮೂರನೇ ಬಾರಿಯೂ ಭರ್ಜರಿ ಜಯ ಸಾಧಿಸಿ ಹ್ಯಾಟ್ರಿರ್‌ ಹೀರೋ ಆಗಿ ಹೊರಹೊಮ್ಮುವುದು ಖಚಿತ ಎಂದು ಬಿಜೆಪಿ‌ ಜಿಲ್ಲಾ ಅಧ್ಯಕ್ಷ ಸೋಮನಾಥ ಪಾಟೀಲ್‌ ಹುಡಗಿ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಬಿಜೆಪಿ ಟಿಕೆಟ್‌ ಯಾರಿಗೆ ಸಿಗಲಿದೆ ಎಂಬುದು ಕಳೆದ ಕೆಲವು ದಿನಗಳಿಂದ ಸಹಜವಾಗಿ ಭಾರಿ ಚರ್ಚೆಯ ಜೊತೆಗೆ ಕುತೂಹಲವೂ ಮೂಡಿಸಿತ್ತು. ಪಕ್ಷದ ವರಿಷ್ಠರು ಭಗವಂತ ಖೂಬಾ ಅವರಿಗೇ ಮತ್ತೆ ಟಿಕೆಟ್‌ ಘೋಷಣೆ ಮಾಡುವ ಮುಖಾಂತರ ಎಲ್ಲ ಚರ್ಚೆ ಹಾಗೂ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಈ ಬಾರಿ ಕ್ಷೇತ್ರದಿಂದ ಬಿಜೆಪಿಗೆ ಕನಿಷ್ಠ 2 ಲಕ್ಷ ಮತಗಳಿಂದ ಜಯ ತಂದು ಕೊಟ್ಟು ಕಾಂಗ್ರೆಸ್‌ಗೆ ಹೀನಾಯವಾಗಿ ಸೋಲಿಸುವುದೆ ನಮ್ಮ ಮುಂದಿನ ಏಕೈಕ ಗುರಿಯಾಗಿದೆ.

ಮತ್ತೆ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಬೇಕಿದೆ. ದೇಶ ಬಲಿಷ್ಠ ಹಾಗೂ ಅಭಿವೃದ್ಧಿಶೀಲ ಮಾಡಲು ಬಿಜೆಪಿ ಗೆಲ್ಲಿಸಿ ಮೋದಿ ಅವರ ಕೈಬಲಪಡಿಸುವ ಸಂಕಲ್ಪ ನಮ್ಮದಾಗಿದೆ. ಜಿಲ್ಲೆಯಲ್ಲಿ ಬಿಜೆಪಿ ತಳಮಟ್ಟದಿಂದ ಸಾಕಷ್ಟು ಬಲಿಷ್ಠವಿದ್ದು, ಸಮರೋಪಾದಿ ರೀತಿಯಲ್ಲಿ ಕೆಲಸ‌ ಮಾಡಿ ಭರ್ಜರಿ ಜಯ ದಾಖಲಿಸಲು ಜಿಲ್ಲಾ ಟೀಮ್‌ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದ್ದಾರೆ.

ಜಿಲ್ಲೆಯ ಬಿಜೆಪಿಯಲ್ಲಿ ಯಾವುದೇ ಗೊಂದಲ‌ ಇಲ್ಲ. ಭಿನ್ನಾಭಿಪ್ರಾಯ ಅಥವಾ ಭಿನ್ನಮತ ಇಲ್ಲವೇ ಇಲ್ಲ. ಚುನಾವಣೆ ಸಮಯದಲ್ಲಿ ಮುಖಂಡರು, ಕಾರ್ಯಕರ್ತರು ಟಿಕೆಟ್‌ ಕೇಳುವುದು ಸಾಮಾನ್ಯ. ಪಕ್ಷವು ಎಲ್ಲರಿಗೂ ಇದಕ್ಕಾಗಿ ಮುಕ್ತ ಅವಕಾಶ ನೀಡಿತ್ತು. ಹಲವು ಆಕಾಂಕ್ಷಿಗಳು ಟಿಕೆಟ್‌ ಕೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ. ಎಲ್ಲರಂತೆ ಭಗವಂತ ಖೂಬಾ ಅವರು ಸಹ ಪಕ್ಷದ ಚೌಕಟ್ಟಿನಲ್ಲಿ ಟಿಕೆಟ್‌ ಕೇಳಿದ್ದರು. ಎಲ್ಲರೂ ಒಟ್ಟಾಗಿ, ಸಂಘಟಿತರಾಗಿ ಕೆಲಸ ಮಾಡಲಿದ್ದು, ಬಿಜೆಪಿ ಜಯವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸೋಮನಾಥ ಪಾಟೀಲ್‌ ಸ್ಪಷ್ಟಪಡಿಸಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ