ಬಜೆಟ್‌ನ ಕಡತದಲ್ಲಿ ಘೋಷಣೆಯಾಗೇ ಉಳಿದ ಘೋಷಣೆಗಳು

KannadaprabhaNewsNetwork |  
Published : Mar 07, 2025, 12:49 AM IST

ಸಾರಾಂಶ

ಪ್ರತಿ ವರ್ಷ ಬಜೆಟ್‌ ಮಂಡನೆಯಾಗುತ್ತಲೇ ಇದೆ. ಅದರಲ್ಲಿ ಜಿಲ್ಲೆಗೆ ಘೋಷಣೆಯಾಗುವ ಸವಲತ್ತುಗಳನ್ನು ನೋಡಿದಾಗ ಹಾಸನ ಜಿಲ್ಲೆಯ ಬಗ್ಗೆ ರಾಜ್ಯ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಸ್ಪಷ್ಟವಾಗುತ್ತಿದೆ. ಬಜೆಟ್‌ನಲ್ಲಿ ಆಗುವ ಘೋಷಣೆಗಳೇ ಕಡಿಮೆ. ಅದರಲ್ಲೂ ಅವುಗಳ ಅನುಷ್ಟಾನವಾಗುವುದು ಇನ್ನೂ ವಿರಳ. ಹಾಗೆಯೇ ಕಳೆದ ವರ್ಷದ ಬಜೆಟ್‌ ಇರಲಿ 2023ರಲ್ಲಿ ಆಗಿದ್ದ ಘೋಷಣೆಗಳ ಪೈಕಿಯೇ ಹಲವು ಇನ್ನೂ ಈಡೇರಿಲ್ಲ. ಇಡೀ ಬಜೆಟ್‌ನಲ್ಲಿ ಜಿಲ್ಲೆಯ ಪಾಲಿಗೆ ಘೋಷಣೆಯಾಗಿದ್ದು, ಮೂರೇಮೂರು ಯೋಜನೆಗಳು. ಅವುಗಳ ಪೈಕಿ ಮೊದಲಿನದ್ದರಲ್ಲಿ ಅವರು ಘೊಷಣೆ ಮಾಡಿದ್ದಷ್ಟು ಹಣ ಬಿಡುಗಡೆಯಾಗಿಲ್ಲ. ಇನ್ನು ಉಳಿದ ಎರಡು ಬಜೆಟ್‌ನ ಘೋಷಣೆಗಷ್ಟೇ ಸೀಮಿತವಾಗಿವೆ.

ಕನ್ನಡಪ್ರಭ ವಾರ್ತೆ ಹಾಸನ

ಪ್ರತಿ ವರ್ಷ ಬಜೆಟ್‌ ಮಂಡನೆಯಾಗುತ್ತಲೇ ಇದೆ. ಅದರಲ್ಲಿ ಜಿಲ್ಲೆಗೆ ಘೋಷಣೆಯಾಗುವ ಸವಲತ್ತುಗಳನ್ನು ನೋಡಿದಾಗ ಹಾಸನ ಜಿಲ್ಲೆಯ ಬಗ್ಗೆ ರಾಜ್ಯ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಸ್ಪಷ್ಟವಾಗುತ್ತಿದೆ. ಬಜೆಟ್‌ನಲ್ಲಿ ಆಗುವ ಘೋಷಣೆಗಳೇ ಕಡಿಮೆ. ಅದರಲ್ಲೂ ಅವುಗಳ ಅನುಷ್ಟಾನವಾಗುವುದು ಇನ್ನೂ ವಿರಳ. ಹಾಗೆಯೇ ಕಳೆದ ವರ್ಷದ ಬಜೆಟ್‌ ಇರಲಿ 2023ರಲ್ಲಿ ಆಗಿದ್ದ ಘೋಷಣೆಗಳ ಪೈಕಿಯೇ ಹಲವು ಇನ್ನೂ ಈಡೇರಿಲ್ಲ.

2024ರ ಬಜೆಟ್‌ನಲ್ಲಿ ಹಾಸನ ಜಿಲ್ಲೆ ಪಾಲಿಗೆ ಮಾಡಿದ್ದ ಘೋಷಣೆಗಳು:

- ಬೂವನಹಳ್ಳಿ ಬಳಿಯ ವಿಮಾನ ನಿಲ್ದಾಣ ಅಭಿವೃದ್ಧಿಗೆ ಬಾಕಿ ಇರುವ 33 ಕೋಟಿ ರು. ಬಿಡುಗಡೆ- ವಿಜ್ಞಾನ ಕೇಂದ್ರ ಮತ್ತು ತಾರಾಲಯ ಸ್ಥಾಪನೆ

- ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಸ್ಥಾಪನೆ

ಇಡೀ ಬಜೆಟ್‌ನಲ್ಲಿ ಜಿಲ್ಲೆಯ ಪಾಲಿಗೆ ಘೋಷಣೆಯಾಗಿದ್ದು, ಮೂರೇಮೂರು ಯೋಜನೆಗಳು. ಅವುಗಳ ಪೈಕಿ ಮೊದಲಿನದ್ದರಲ್ಲಿ ಅವರು ಘೊಷಣೆ ಮಾಡಿದ್ದಷ್ಟು ಹಣ ಬಿಡುಗಡೆಯಾಗಿಲ್ಲ. ಇನ್ನು ಉಳಿದ ಎರಡು ಬಜೆಟ್‌ನ ಘೋಷಣೆಗಷ್ಟೇ ಸೀಮಿತವಾಗಿವೆ.

ಹಾಸನ ನಗರದ ಹೊರವಲಯದ ಬೂವನಹಳ್ಳಿ ಬಳಿ ನಿರ್ಮಾಣ ಹಂತದಲ್ಲಿರುವ ವಿಮಾನ ನಿಲ್ದಾಣ ಕಾಮಗಾರಿಗೆ 1996ರಲ್ಲಿ ಎಚ್‌.ಡಿ.ದೇವೇಗೌಡರು ಮೊದಲಿಗೆ ಗುದ್ದಲಿಪೂಜೆ ನೆರವೇರಿಸಿದ್ದರು. ಅದಾದ ನಂತರದಲ್ಲಿ ಅದರ ಭೂ ಸ್ವಾಧೀನವಾಗಿದ್ದು ಬಿಟ್ಟರೆ ಮತ್ತೇನೂ ಆಗಲಿಲ್ಲ. ಅದಕ್ಕೆ ಮತ್ತೆ ಮರುಜೀವ ಸಿಕ್ಕಿದ್ದು 2007ರಲ್ಲಿ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದಾಗ. ಆಗಲೂ ಎಚ್‌.ಡಿ.ದೇವೇಗೌಡರೇ ಮತ್ತೊಮ್ಮೆ ಗುದ್ದಲಿಪೂಜೆ ಮಾಡಿದರು. ಆ ಸಂದರ್ಭದಲ್ಲಿ ರಾಜ್ಯ ಸರ್ಕಾರ ಒಂದಷ್ಟು ಅನುದಾನ ಬಿಡುಗಡೆ ಮಾಡಿದ್ದರಿಂದ ಭೂ ಸ್ವಾಧೀನ, ಅದಕ್ಕೆ ಸಂಬಂಧಪಟ್ಟ ವ್ಯಾಜ್ಯಗಳ ಪರಿಹಾರದ ಜತೆಗೆ ಕಾಮಗಾರಿ ಆರಂಭಕ್ಕೆ ಹಣ ಬಿಡುಗಡೆ ಮಾಡಿ ಏವಿಯೇಷನ್‌ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಲಾಯಿತು. ಆಗ ಆರಂಭವಾದ ಕಾಮಗಾರಿ ಕುಂಟುತ್ತಾ, ತೆವಳುತ್ತಾ ಸಾಗಿದೆ. ನಂತರದ ಸರ್ಕಾರಗಳು ಸರಿಯಾಗಿ ಅನುದಾನ ಬಿಡುಗಡೆ ಮಾಡದ ಕಾರಣ ಕನಿಷ್ಠ ಕಾಮಗಾರಿಗಳು ಕೂಡ ಆಗಿಲ್ಲ. ಈಗಿನ ಸರ್ಕಾರವೂ ಕೂಡ ಹಾಸನ ಜಿಲ್ಲೆಯ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿರುವುದರಿಂದ ವಿಮಾನ ನಿಲ್ದಾಣ ಕಾಮಗಾರಿ ನಿಂತಲ್ಲೇ ನಿಂತಿದೆ.

ಇನ್ನು ಜಿಲ್ಲೆಯ ಚಿಂತಕರು, ವಿಚಾರವಾದಿಗಳು, ಖಗೋಳ ಪ್ರಿಯರು ಜಿಲ್ಲೆಯಲ್ಲೊಂದು ತಾರಾಲಯ ಮಾಡಿ ಎನ್ನುವ ಬೇಡಿಕೆ ಇಟ್ಟಿದ್ದರು. ಅದಕ್ಕೆ ತಕ್ಕಂತೆ ಕಳೆದ ಬಜೆಟ್‌ನಲ್ಲಿ ಘೋಷಣೆಯೇನೋ ಆಯಿತು. ಆದರೆ, ಈವರೆಗೆ ಅದರ ಯಾವುದೇ ಪ್ರಕ್ರಿಯೆಗಳೂ ನಡೆದಿಲ್ಲ.

ಮತ್ತೊಂದು ಘೋಷಣೆಯಾದ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಕೂಡ ಘೋಷಣೆಗಷ್ಟೇ ಸೀಮಿತವಾಗಿದೆ. ಇರುವ ಜಿಲ್ಲಾ ಆಸ್ಪತ್ರೆಯಲ್ಲಿರುವ ಪ್ರಯೋಗಾಲಯಗಳಿಗೇ ಸರಿಯಾದ ಪರಿಕರಗಳಿಲ್ಲ, ಸೂಕ್ತ ಸಿಬ್ಬಂದಿಯಿಲ್ಲ. ಇರುವ ಗುತ್ತಿಗೆ ಸಿಬ್ಬಂದಿಗೆ ಕೆಲವು ತಿಂಗಳುಗಳಿಂದ ಸಂಬಳವನ್ನೇ ನೀಡಿಲ್ಲ. ಇದೆಲ್ಲದರ ಮಧ್ಯೆ ಜಿಲ್ಲಾಸ್ಪತ್ರೆಯೇ ಸೊರಗಿರುವಾಗ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಕನಸಿನ ಮಾತು ಎನ್ನುವುದು ಜಿಲ್ಲೆಯ ಜನರಿಗೆ ಅರ್ಥವಾಗಿದೆ.

ನಿರೀಕ್ಷೆಗಳು ಸಾಕಷ್ಟಿವೆ:

ರಾಜ್ಯ ಸರ್ಕಾರದ ಪ್ರತಿ ವರ್ಷದ ಬಜೆಟ್‌ನಲ್ಲೂ ಜಿಲ್ಲೆಯ ಜನರು ನಿರೀಕ್ಷೆಗಳು ಸಾಕಷ್ಟಿವೆ. ಆದರೆ ಪ್ರತಿ ಬಜೆಟ್‌ನಲ್ಲಿ ಜಿಲ್ಲೆಯ ಜನರ ಸ್ಥಿತಿ ಹೇಗಾಗಿದೆ ಎಂದರೆ " ಕೇಳಿದ್ದು ಸೇರು, ಸಿಕ್ಕಿದ್ದು ಚೂರು " ಎನ್ನುವಂತಾಗಿದೆ. ಸಿಕ್ಕ ಆ ಚೂರುಗಳು ಕೂಡ ಕಾರ್ಯರೂಪಕ್ಕೆ ಬರುತ್ತಿಲ್ಲ.

ಜಿಲ್ಲೆಯಲ್ಲಿ ಬೇಡಿಕೆಗಳಿಗಿಂತ ಸಮಸ್ಯೆಗಳೇ ಸಾಕಷ್ಟು ಇವೆ:

- ಮೊದಲನೆಯದಾಗಿ ಕಾಡಾನೆ ಸಮಸ್ಯೆ. ಇತ್ತೀಚಿನ ಎರಡು ದಶಕಗಳಿಂದ ಜಿಲ್ಲೆಯ ಮಲೆನಾಡು ಭಾಗದ ಜನರು ಕಾಡಾನೆ ಸಮಸ್ಯೆಯಿಂದ ರೋಸಿ ಹೋಗಿದ್ದಾರೆ. ಮಲೆನಾಡು ಭಾಗವಾದ ಸಕಲೇಶಪುರ ಹಾಗೂ ಅರೆ ಮಲೆನಾಡು ತಾಲೂಕುಗಳಾದ ಅರಕಲಗೂಡು, ಬೇಲೂರು ಹಾಗೂ ಆಲೂರು ತಾಲೂಕುಗಳಲ್ಲಿ ಈ ಸಮಸ್ಯೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಅದರಲ್ಲೂ ಆಲೂರು ಮತ್ತು ಬೇಲೂರು ತಾಲೂಕುಗಳಲ್ಲಿ ಕಾಡಾನೆಗಳ ಅಟ್ಟಹಾಸ ತೀವ್ರಗೊಂಡಿದೆ. ಸಾಕಷ್ಟು ಜನರನ್ನು ಬಲಿ ತೆಗೆದುಕೊಂಡಿರುವ ಕಾಡಾನೆಗಳು ಕಾಡನ್ನು ತೊರೆದು ಗ್ರಾಮಗಳು ಹಾಗೂ ಕಾಫಿ ತೋಟಗಳನ್ನೇ ಆವಾಸ ಸ್ಥಾನಗಳಾಗಿ ಮಾಡಿಕೊಂಡಿವೆ.

ಜೀವ ಹಾನಿಯ ಜತೆಗೆ ಸಾಕಷ್ಟು ಬೆಳೆ ಹಾನಿಯಲ್ಲೂ ಎದುರಿಸುತ್ತಿರುವ ಈ ಭಾಗದ ಜನರು ಹೊರಗೆ ಹೋದವರು ವಾಪಸ್‌ ಮನೆಗೆ ಬರುತ್ತಾರೆ ಎನ್ನುವ ನಂಬಿಕೆ ಇಲ್ಲದೆ ಬದುಕುವಂತಾಗಿದೆ. ಹಾಗಾಗಿ ಈ ಭಾಗದಲ್ಲಿರುವ ಕಾಡಾನೆಗಳನ್ನು ಹಿಡಿದು ಆನೆಧಾಮಕ್ಕೆ ಸ್ಥಳಾಂತರಿಸಬೇಕು. ಇಲ್ಲವೇ ಇಲ್ಲವೇ ಒಂದು ಆನೆಧಾಮ ಮಾಡಬೇಕು ಎನ್ನುವುದು ಜಿಲ್ಲೆಯ ಪ್ರಮುಖ ಬೇಡಿಕೆ,

- ಹೇಮಾವತಿ ಜಲಾಶಯದ ಮುಂದೆ ಕೆಆರ್‌ಎಸ್‌ ಮಾದರಿಯ ಉದ್ಯಾನವನ ನಿರ್ಮಾಣ ಮಾಡಬೇಕೆನ್ನುವುದು ಹಲವು ವರ್ಷಗಳ ಬೇಡಿಕೆ. ಅದಕ್ಕೆ ಸಾಕಷ್ಟು ಸ್ಥಳಾವಕಾಶವೂ ಅಲ್ಲಿದೆ. ಜಿಲ್ಲೆಯ ನಾಯಕರೇ ಉನ್ನತ ಸ್ಥಾನಗಳಲ್ಲಿದ್ದಾಗಲೂ ಅದರ ಬಗ್ಗೆ ಗಮನ ನೀಡಲಿಲ್ಲ.

- ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿವೆ. ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗಮನಹರಿಸಬೆಕು.

- ಅರಣ್ಯ ಇಲಾಖೆಯ ಕೆಲ ನೀತಿಗಳಿಂದಾಗಿ ಜಿಲ್ಲೆಯಲ್ಲಿ ಸಾಕಷ್ಟು ರೈತರು ಸಮಸ್ಯೆಗೆ ಸಿಲುಕಿದ್ದಾರೆ. ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಘೋಷಣೆ ಆಗಬೇಕು.

- ಎತ್ತಿನಹೊಳೆ ಯೋಜನೆಯಿಂದಾಗಿ ಜಿಲ್ಲೆಯ ಸಾಕಷ್ಟು ರೈತರು ಸಮಸ್ಯೆ ಅನುಭವಿಸುತ್ತಿದ್ದು, ಅದಕ್ಕೆ ಪರಿಹಾರ ಕಲ್ಪಿಸಬೇಕಿದೆ.

- ಜಿಲ್ಲೆಯಲ್ಲಿ ಸಾಕಷ್ಟು ಸರ್ಕಾರಿ ಆಸ್ಪತ್ರೆಗಳು, ಪ್ರಾಥಮಿಕ ಸಮುದಾಯ ಆರೋಗ್ಯ ಕೇಂದ್ರಗಳಿವೆ. ಆದರೆ, ಅಲ್ಲಿ ಅಗತ್ಯ ಸಿಬ್ಬಂದಿಯಿಲ್ಲದೆ ಜನರಿಗೆ ಸೇವೆಗಳು ಸಿಗುತ್ತಿಲ್ಲ. ಅಗತ್ಯ ಸಿಬ್ಬಂದಿಯ ನೇಮಕಾತಿ ಆಗಬೇಕು.

- ಮೂರು ವರ್ಷಗಳ ಹಿಂದಷ್ಟೇ ಆರಂಭವಾದ ಹಾಸನ ವಿಶ್ವವಿದ್ಯಾಲಯವನ್ನು ಮುಚ್ಚುವ ನಿಲುವಿನಿಂದ ಸರ್ಕಾರ ಹಿಂದೆ ಸರಿಯಬೇಕು.

- ಜಿಲ್ಲೆಯ ಏತ ನೀರಾವರಿ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಬೇಕಿದೆ.

- ಕಾಂಗ್ರೆಸ್‌ ಸರ್ಕಾರ ಬಂದ ನಂತರದಲ್ಲಿ ಜಿಲ್ಲೆಯಲ್ಲಿ ರಸ್ತೆಗಳ ಅಭಿವೃದ್ಧಿಯೇ ನಿಂತುಹೋಗಿದೆ. ಕೆಲ ರಸ್ತೆಗಳಿಗೆ ಕೇವಲ ತೇಪೆ ಹಾಕಿದ್ದನ್ನು ಬಿಟ್ಟರೆ ಯಾವುದೇ ಹೊಸ ರಸ್ತೆಗಳಾಗಿಲ್ಲ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಬೇಕಿದೆ.

- ಹಾಸನ ನಗರಕ್ಕೆ ಹಂದಿನಕೆರೆ ಬಳಿ ಯಗಚಿ ನಾಲೆಯಿಂದ ಕುಡಿಯುವ ನೀರಿನ ಯೋಜನೆ ಘೋಷಿಸಬೇಕಿದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ