ಲಕ್ಷ್ಮೀನೃಸಿಂಹ ದೇವರ ವಾರ್ಷಿಕ ರಥೋತ್ಸವ ಸಂಪನ್ನ

KannadaprabhaNewsNetwork |  
Published : May 02, 2026, 02:15 AM IST
ಶಿರಸಿಯ ಸ್ವರ್ಣವಲ್ಲೀಯಲ್ಲಿ ಲಕ್ಷ್ಮೀನೃಸಿಂಹ ದೇವರ ವಾರ್ಷಿಕ ರಥೋತ್ಸವವು ಸಂಪನ್ನಗೊಂಡಿತು. | Kannada Prabha

ಸಾರಾಂಶ

ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಆರಾಧ್ಯ ದೇವರಾದ ಶ್ರೀ ಲಕ್ಷ್ಮೀನೃಸಿಂಹ ದೇವರ ವಾರ್ಷಿಕ ರಥೋತ್ಸವ ಭಕ್ತಿ, ಸಂಪ್ರದಾಯ ಮತ್ತು ಭಾವೈಕ್ಯದ ವಾತಾವರಣದಲ್ಲಿ ಅತ್ಯಂತ ವೈಭವದಿಂದ ಗುರುವಾರವ ರಾತ್ರಿ ನೆರವೇರಿತು.

ಶಿರಸಿ:

ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಆರಾಧ್ಯ ದೇವರಾದ ಶ್ರೀ ಲಕ್ಷ್ಮೀನೃಸಿಂಹ ದೇವರ ವಾರ್ಷಿಕ ರಥೋತ್ಸವ ಭಕ್ತಿ, ಸಂಪ್ರದಾಯ ಮತ್ತು ಭಾವೈಕ್ಯದ ವಾತಾವರಣದಲ್ಲಿ ಅತ್ಯಂತ ವೈಭವದಿಂದ ಗುರುವಾರವ ರಾತ್ರಿ ನೆರವೇರಿತು. ಸಾವಿರಾರು ಭಕ್ತರು ಭಾಗವಹಿಸಿ ಶ್ರೀದೇವರ ಕೃಪೆಗೆ ಪಾತ್ರರಾದರು.

ರಥೋತ್ಸವದ ಅಂಗವಾಗಿ ಕಳೆದ ಮೂರು ದಿನಗಳಿಂದ ಹಾಗೂ ಜಯಂತಿಯ ಮುಂಜಾನೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ದೇವರಿಗೆ ಮಹಾಪೂಜೆ, ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಧ್ವಜಸ್ಥಾಪನೆ, ಅನ್ನಪೂರ್ಣೇಶ್ವರಿ ಪೂಜೆ, ವೇದಘೋಷ, ಮಂಗಳಾರತಿ ಹಾಗೂ ಭಜನಾ ಕಾರ್ಯಕ್ರಮಗಳು ಭಕ್ತಿಭಾವವನ್ನು ಹೆಚ್ಚಿಸಿತು. ಮಠದ ಆವರಣವು ವಿದ್ಯುತ್ ದೀಪಾಲಂಕಾರ ಮತ್ತು ಹೂವಿನ ಅಲಂಕಾರಗಳಿಂದ ಕಂಗೊಳಿಸುತ್ತಿತ್ತು.

ಮಠಾಧೀಶರಾದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ಹಾಗೂ ಶ್ರೀ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ರಥೋತ್ಸವ ನಡೆಯಿತು.

ರಾತ್ರಿ ವಿಶೇಷ ಆಕರ್ಷಣೆಯಾಗಿದ್ದ ಶ್ರೀ ದೇವರ ರಥೋತ್ಸವ ಭಕ್ತರ ಜಯಘೋಷಗಳ ನಡುವೆ ನಡೆಯಿತು. ರಥಾರೂಢನಾದ ಶ್ರೀ ಲಕ್ಷ್ಮೀನೃಸಿಂಹ ದೇವರ ದರ್ಶನ ಪಡೆಯಲು ಭಕ್ತರು ಮುಗಿಬಿದ್ದರು. ರಾತ್ರಿ ೧೧ ಗಂಟೆಗೆ ರಥಾ ರೂಢನಾದ ದೇವರ ರಥೋತ್ಸವ ೧೧.೩೦ಕ್ಕೆ ಆರಂಭವಾಯಿತು. ರಾತ್ರಿ ೧ ಗಂಟೆ ವೇಳೆಗೆ ರಥ ವಾಪಸಾಯಿತು. ರಥೋತ್ಸವದಲ್ಲಿ ಸಂಭ್ರಮದ ಬಾಣಬಿರುಸುಗಳು ಆಕಾಶವನ್ನು ಬೆಳಗಿಸಿದವು. ತಾಳ, ವಾದ್ಯಗಳ ನಿನಾದ, ಭಕ್ತರ ಜಯಘೋಷದ ನಡುವೆ ರಥೋತ್ಸವವು ಮನಸೆಳೆಯಿತು.

ಈ ರಥೋತ್ಸವದ ಮತ್ತೊಂದು ವಿಶೇಷತೆ ಎಂದರೆ ಸರ್ವಧರ್ಮೀಯರ ಸಹಕಾರ. ಹಿಂದೂ ಸಮುದಾಯದೊಂದಿಗೆ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದ ಜನರೂ ಉತ್ಸವದ ವಿವಿಧ ವ್ಯವಸ್ಥೆಗಳಲ್ಲಿ ಕೈಜೋಡಿಸಿದ್ದು, ನಿಜಾರ್ಥದಲ್ಲಿ ಇದು ಭಾವೈಕ್ಯತೆಯ ರಥೋತ್ಸವವಾಗಿ ಮೂಡಿಬಂತು. ಧರ್ಮಗಳ ನಡುವೆ ಸೌಹಾರ್ದ ಮತ್ತು ಪರಸ್ಪರ ಗೌರವವನ್ನು ಸಾರುವ ಅಪೂರ್ವ ಉದಾಹರಣೆಯಾಗಿ ಈ ಉತ್ಸವ ಗಮನ ಸೆಳೆಯಿತು.

ರಥೋತ್ಸವದ ಬಳಿಕ ನಡೆದ ಯಕ್ಷಗಾನ ಕಾರ್ಯಕ್ರಮವೂ ಭಕ್ತರನ್ನು ರಂಜಿಸಿತು. ಯಕ್ಷಶಾಲಾ ಸಂಸ್ಥೆ ನೇತೃತ್ವದಲ್ಲಿ ಖ್ಯಾತ ಕಲಾವಿದರಿಂದ ಪ್ರದರ್ಶಿತವಾದ “ಸುಭದ್ರಾ ಕಲ್ಯಾಣ” ಯಕ್ಷಗಾನ ಪ್ರದರ್ಶನ ಮೆಚ್ಚುಗೆಗೆ ಕಾರಣವಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಕಾಂಗ್ರೆಸ್‌ ವಿರುದ್ಧ ನಿರಂತರ ಹೋರಾಟ: ವಿಜಯೇಂದ್ರ
ಮಸೂದೆಗೆ ಸೋಲಾಗಿದೆ ಎಂದು ಧೃತಿಗೆಡಬೇಡಿ: ವಿಜಯೇಂದ್ರ