ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಸೋಮವಾರ ಸೂರ್ಯೋದಯ ವೇಳೆಗೆ ಗಣಹೋಮದೊಂದಿಗೆ ವಾರ್ಷಿಕ ಹಬ್ಬಕ್ಕೆ ಚಾಲನೆ ನೀಡಲಾಯಿತು. ಶ್ರೀ ಬೈತೂರಪ್ಪ ಪೊವ್ವೆದಿ ಪರಿವಾರ ದೇವರಿಗೆ ವಿಶೇಷ ಪೂಜೆ ಮತ್ತು ರುದ್ರಾಭಿಷೇಕವನ್ನು ದೇವಾಲಯದ ಪ್ರಧಾನ ಆರ್ಚಕರಾದ ನರಸಿಂಹ ಭಟ್, ಚಂದ್ರಶೇಖರ್ ಭಟ್, ರವಿಶಂಕರ್ ಮಂಜುನಾಥ್‌ಭಟ್ ಹಾಗೂ ಕೃಷ್ಣ ಭಟ್ ಅವರ ತಂಡ ನೆರವೇರಿಸಿತು.
ದೇವತಕ್ಕರಾದ ಜಗ್ಗರಂಡ ಹ್ಯಾರಿಕಾರ್ಯಪ್ಪ ಅವರ ಮನೆಯಿಂದ ದೇವರ ಭಂಡಾರವನ್ನು ಆರ್ಚಕ ನರಸಿಂಹ ಭಟ್ ಅವರ ನೇತೃತ್ವದಲ್ಲಿ ಪೂಜೆ ಮತ್ತು ಧಾರ್ಮಿಕ ವಿಧಿವಿಧಾನಗಳನ್ನು ನೇರವೇರಿಸಿ ದುಡಿಕೊಟ್ ಪಾಟ್ ಸಾಂಪ್ರಾದಾಯಿಕ ಕೊಡವ ಓಲಗದೊಂದಿಗೆ ದೇವಾಲಯಕ್ಕೆ ತಂದು ಪೂಜೆ ನೆರವೇರಿಸಲಾಯಿತು.ಮಹಾಪೂಜೆಯ ಬಳಿಕ ತೀರ್ಥ ಪ್ರಸಾದದೊಂದಿಗೆ ಅನ್ನ ಸಂತರ್ಪಣೆ ನೆರವೇರಿತು. ದೇವಾಲಯದ ವಾರ್ಷಿಕ ಹಬ್ಬದ ಸಂದರ್ಭ ದೇವಾಲಯಕ್ಕೆ ಒಳಪಟ್ಟ ಕುಟುಂಬಗಳು ಸಾಂಪ್ರಾದಾಯಿಕ ವೇಷ ಭೂಷಣದೊಂದಿಗೆ ದೇವಾಲಯದ ಆವರಣದಲ್ಲಿ ಸೇರಿ ಸಾಂಪ್ರಾದಾಯಿಕ ಬೊಳಕಾಟ್ ನೃತ್ಯ ಸೇವೆ ಸಲ್ಲಿಸಿದರು. ವಿಶೇಷವೆಂದರೆ ಹಬ್ಬದ ಕಟ್ಟಿನ ಮರುದಿನದಿಂದ 11 ದಿನಗಳ ಕಾಲ ಬೆಳಗಿನ ಜಾವದಲ್ಲಿ ದೀಪದ ಬೆಳಕಿನಲ್ಲಿ ದೇವರಿಗೆ ಬೊಳಕಾಟ್ ನೃತ್ಯ ಸೇವೆ ಸಾಂಪ್ರಾದಾಯಿಕ ಉಡುಪಿನಲ್ಲಿ ಸಲ್ಲಿಸುವುದು ವಿಶೇಷವಾಗಿದೆ.
ಈ ಸಂದರ್ಭ ಕೊಡಗರಹಳ್ಳಿ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.