ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಇಲ್ಲಿನ ಸ್ವರಾಜ್ ಮೈದಾನದಲ್ಲಿ ಗುರುವಾರ ಮುಕ್ತಾಯಗೊಂಡ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ೨೧ನೇ ಅಂತರ್ ಕಾಲೇಜು ವಾರ್ಷಿಕ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ದಾಖಲಾದ ಎಲ್ಲ ೧೦ ಕೂಟ ದಾಖಲೆಗಳು, ೨೦ ಚಿನ್ನ, ೯ ಬೆಳ್ಳಿ ಹಾಗೂ ೫ ಕಂಚಿನ ಪದಕಗಳನ್ನು ಜಯಿಸಿ, ಒಟ್ಟು 154 ಅಂಕ ಪಡೆದ ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜು ಪುರುಷ ಮತ್ತು ಮಹಿಳಾ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ ಆತಿಥ್ಯದಲ್ಲಿ ಮೂರು ದಿನ ನಡೆದ ಕ್ರೀಡಾಕೂಟದಲ್ಲಿ ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸಸ್‌ನ ರಾಕೇಶ್ ಹಾಗೂ ದುರ್ಗಾ ಕ್ರಮವಾಗಿ ಪುರುಷರ ಮತ್ತು ಮಹಿಳಾ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ ಆಗಿ ಮೂಡಿ ಬಂದಿದ್ದಾರೆ.
ಪುರುಷರ ವಿಭಾಗದಲ್ಲಿ ೧೧ ಚಿನ್ನ, ೭ ಬೆಳ್ಳಿ ಹಾಗೂ ೪ ಕಂಚಿನ ಪದಕಗಳ ಮೂಲಕ ೯೧ ಅಂಕಗಳಿಂದ ಅತಿಥೇಯ ಆಳ್ವಾಸ್ ಆಲೈಡ್ ಹೆಲ್ತ್ ಸೈನ್ಸ್ ಕಾಲೇಜು ಪ್ರಶಸ್ತಿ ಗೆದ್ದರೆ, ೩ ಚಿನ್ನ ಮತ್ತು ೨ ಬೆಳ್ಳಿ ಸಹಿತ ೨೬ ಅಂಕ ಪಡೆದ ಮಂಡ್ಯ ವೈದ್ಯಕೀಯ ಕಾಲೇಜು ರನ್ನರ್ ಅಪ್ ಆಯಿತು.ಮಹಿಳೆಯರ ವಿಭಾಗದಲ್ಲಿ ೯ ಚಿನ್ನ, ೨ ಬೆಳ್ಳಿ ಮತ್ತು ೧ ಕಂಚಿನ ಪದಕದ ಮೂಲಕ ೬೩ ಅಂಕ ಗಳಿಸಿದ ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜು ಪ್ರಶಸ್ತಿ ಪಡೆಯಿತು. ೨ ಚಿನ್ನ, ೪ ಬೆಳ್ಳಿ ಮತ್ತು ೨ ಕಂಚು ಸಹಿತ ೩೩ ಅಂಕ ಪಡೆದ ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಕಾಲೇಜು ರನ್ನರ್ ಅಫ್ ಪ್ರಶಸ್ತಿ ಪಡೆಯಿತು. ನೂತನ ಕೂಟ ದಾಖಲೆಗಳು
ಈ ಕ್ರೀಡಾಕೂಟ ಒಟ್ಟು ೧೦ ಕೂಟ ದಾಖಲೆಗಳಿಗೆ ಸಾಕ್ಷಿಯಾಯಿತು. ಹಿಂದಿನ ೮ ಕೂಟ ದಾಖಲೆಗಳನ್ನು ಈ ಬಾರಿ ಕ್ರೀಡಾಪಟುಗಳು ಮುರಿದರೆ, ೨ ದಾಖಲೆಗಳನ್ನು ಸಮಗೊಳಿಸಿದರು. ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸಸ್‌ನ ಕ್ರೀಡಾಪಟುಗಳೇ ಎಲ್ಲ ಕೂಟ ದಾಖಲೆಗಳನ್ನು ಮಾಡಿರುವುದು ವಿಶೇಷ.ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸ್‌ನ ಸರಣ್(ಪುರುಷರ ೨೦೦ಮೀ. ಓಟ, ೪೦೦ ಮೀ ಓಟ ಹಾಗೂ ೪x೪೦೦ ಮೀ.ರಿಲೇ) ಮೂಲಕ ೩ ಕೂಟ ದಾಖಲೆ ಹಾಗೂ ವಿಸ್ಮಯ (ಮಹಿಳೆಯರ ೧೦೦ ಮೀ. ಮತ್ತು ೪೦೦ ಮೀ. ಹರ್ಡಲ್ಸ್) ಎರಡು ಕೂಟ ದಾಖಲೆ ಮೂಲಕ ವಿಶಿಷ್ಟ ಗೌರವಕ್ಕೆ ಪಾತ್ರರಾದರು.
ಸಮಾರೋಪ ಸಮಾರಂಭ:ಗುರುವಾರ ಸಂಜೆ ನಡೆದ ಸಮಾರೋಪದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮೂಡುಬಿದಿರೆಯ ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಮಾತನಾಡಿ, ಸೋಲು-ಗೆಲುವು ಸಹಜ. ಆದರೆ ಶಿಸ್ತಿಗೆ ಇನ್ನೊಂದು ಹೆಸರೇ ಆಳ್ವಾಸ್. ಯಾವುದೇ ಕಾರ್ಯ ಮಾಡಿದರೂ, ಪರಿಪೂರ್ಣವಾಗಿ ನಿರ್ವಹಿಸುತ್ತಾರೆ ಎಂದು ಶ್ಲಾಘಿಸಿದರು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ಡಾ.ವಿನಯ್ ಆಳ್ವ ಮಾತನಾಡಿ, ಮೂರು ದಿನಗಳ ಕಾಲ ಶಿಸ್ತು ಹಾಗೂ ಕ್ರೀಡಾಸ್ಫೂರ್ತಿಯಿಂದ ಪಾಲ್ಗೊಂಡ ಎಲ್ಲ ಕಾಲೇಜುಗಳ ಕ್ರೀಡಾಪಟುಗಳು ಈ ಕ್ರೀಡಾಕೂಟದ ಯಶಸ್ಸಿಗೆ ಕಾರಣರಾಗಿದ್ದಾರೆ ಎಂದರು. ವೇಗದ ಓಟಗಾರ್ತಿ ಸ್ನೇಹಾ ಎಸ್.ಎಸ್., ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಮಂಡಳಿಯ ನಾರಾಯಣ ಪಿ.ಎಂ., ಉದ್ಯಮಿ ಅಬ್ದುಲ್ಲ ಪುತ್ತಿಗೆ, ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ ಡಾ.ಸಜಿತ್ ಎಂ., ಕನ್ನಡ ಭವನದ ವ್ಯವಸ್ಥಾಪಕಿ ರಜನಿ ಶೆಟ್ಟಿ, ಕ್ರೀಡಾಕೂಟದ ಸಂಚಾಲಕ ಅವಿನಾಶ್, ವಿವಿಧ ಕಾಲೇಜುಗಳ ಪ್ರಾಚಾರ್ಯರು ಅಭಿಪ್ರಾಯ ವ್ಯಕ್ತಪಡಿಸಿದರು. ಆಳ್ವಾಸ್ ಪ್ರಕೃತಿಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಡಾ.ವನಿತಾ ಶೆಟ್ಟಿ ಸ್ವಾಗತಿಸಿದರು. ಆಳ್ವಾಸ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಹೆರಾಲ್ಡ್ರೋಶನ್ ಪಿಂಟೊ ವಂದಿಸಿದರು. ಪ್ರಾಧ್ಯಾಪಕಿ ಡಾ.ಸ್ಮಿತಾ ಕಾರ್ಯಕ್ರಮ ನಿರೂಪಿಸಿದರು.