ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಕೋಟ್ಯಂತರ ರುಪಾಯಿ ಖರ್ಚು ಮಾಡಿ ಕಟ್ಟಿದ ಇಂದಿರಾಗಾಂಧಿ ವಸತಿ ಶಾಲೆಯ ಹೊಸ ಕಟ್ಟಡ ವರ್ಷವಾದರೂ ಉದ್ಘಾಟನೆಗೊಳದೇ ಪಾಳು ಬಿದ್ದು ಹಾಳಾಗುತ್ತಿದೆ. ಇತ್ತ ಈ ಶಾಲೆ ಖಾಸಗಿ ಕಟ್ಟಡದಲ್ಲಿ ನಡೆಯುತ್ತಿರುವ ಕಾರಣಕ್ಕೆ ಸರ್ಕಾರಕ್ಕೆ ವಾರ್ಷಿಕ ₹14 ಲಕ್ಷ ನಷ್ಟವಾಗುತ್ತಿದೆ. ಇಷ್ಟಾದರೂ ಸಂಬಂಧಿಸಿದ ಅಧಿಕಾರಿಗಳು ಜಾಣ ಮೌನವಹಿಸಿವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.ಮಕ್ಕಳಿಗೆ ಅನುಕೂಲವಾಗಲಿ, ಖಾಸಗಿ ಕಟ್ಟಡದಲ್ಲಿ ನಡೆಯುತ್ತಿರುವ ಶಾಲೆಗೆ ಸಂತ ಸೂರು ಇರಲಿ, ಬಾಡಿಗೆ ರೂಪದಲ್ಲಿ ಸರ್ಕಾರದ ಆದಾಯ ಖೋತಾ ಆಗಬಾರದು ಎಂಬ ಉದ್ದೇಶದಿಂದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ತಾಲೂಕಿನ ತೂಗುಣಸಿ ಗ್ರಾಮದ ಹತ್ತಿರ ಇಂದಿರಾಗಾಂಧಿ ವಸತಿ ಶಾಲೆಯ ಹೊಸ ಕಟ್ಟಡ ಪೂರ್ಣ ಮಾಡಲಾಗಿದೆ. ಆದರೆ, ಅಧಿಕಾರಿಗಳ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ವರ್ಷ ಗತಿಸಿದರೂ ಉದ್ಘಾಟನೆ ಭಾಗ್ಯವಿಲ್ಲದಂತಾಗಿದೆ.ಯಾಕೆ ಉದ್ಘಾಟನೆ ಆಗ್ತಿಲ್ಲ:
ಗುಳೇದಗುಡ್ಡ ಪಟ್ಟಣದಿಂದ 5 ಕಿಮೀ ದೂರದ ತೋಗುಣಸಿ ಗ್ರಾಮದ ಹತ್ತಿರ ಈ ಕಟ್ಟಡ ನಿರ್ಮಾಣವಾಗಿದೆ. ಕಟ್ಟಡದ ಸಮುಚ್ಚಯದಲ್ಲಿ ಪಾಠ ಮಾಡುವ ಶಿಕ್ಷಕರಿಗೆ, ಓದುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಸತಿ ಕಟ್ಟಡಗಳೂ ಸೇರಿ ಮೂಲ ಸೌಲಭ್ಯಗಳನ್ನೊಳಗೊಂಡ ಬೃಹತ್ ಕಟ್ಟಡ ನಿರ್ಮಾಣವಾಗಿದೆ. ಅಲ್ಲಿ ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲ ಮೂಲಭೂತ ಸಾಮಗ್ರಿಗಳು ಬಂದಿವೆ. ಆದರೂ ಇದುವರೆಗೆ ಸ್ಥಳಾಂತರವಾಗಿಲ್ಲ. ಸಂಬಂಧಿಸಿದವರನ್ನು ವಿಚಾರಿಸಿದಾಗ ಆದಷ್ಟು ಬೇಗನೆ ಸ್ಥಳಾಂತರವಾಗುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ, ಯಾವಾಗ ಎಂಬ ಪ್ರಶ್ನೆಗೆ ಅವರಿಂದ ಉತ್ತರ ಇಲ್ಲ. ಆದರೆ, ಯಾವ ಕಾರಣಕ್ಕೆ ಉದ್ಘಾಟನೆಗೊಳ್ಳುತ್ತಿಲ್ಲ ಎಂಬ ಕಾರಣ ನಿಗೂಢವಾಗಿದೆ. ವಾರ್ಷಿಕ ₹14 ಲಕ್ಷ ಬಾಡಿಗೆ:ಪಟ್ಟಣದ ಖಾಸಗಿ ಕಟ್ಟಡದಲ್ಲಿ 2016-17ನೇ ಸಾಲಿನಿಂದ ಇಂದಿರಾಂಧಿ ವಸತಿ ಶಾಲೆ ಆರಂಭವಾಗಿದೆ. ಇದುವರೆಗೆ ಒಟ್ಟು ಎಸ್.ಎಸ್.ಎಲ್.ಸಿ ಮೂರು ಬ್ಯಾಚ್ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಹೊರ ಹೋಗಿದ್ದಾರೆ. ಪ್ರಸ್ತುತ ಒಟ್ಟು 240ಕ್ಕೂ ಹೆಚ್ಚು ವಿದ್ಯಾರ್ಥಿಗಳು 6 ರಿಂದ 10 ನೇ ತರಗತಿಗಳಲ್ಲಿ ಓದುತ್ತಿದ್ದಾರೆ. ಒಟ್ಟು 19 ಜನ ಸಿಬ್ಬಂದಿ ಕೆಲಸ ಮಾಡುತ್ತಿದ್ದು ಅದರಲ್ಲಿ 8 ಜನ ಹೊರಗುತ್ತಿಗೆಯ ನೌಕರರು ಸೇರಿದ್ದಾರೆ. ಇಲ್ಲಿ ವಸತಿ ಶಾಲೆ ನಡೆಸುವುದಕ್ಕೆ ವಾರ್ಷಿಕ ₹14 ಲಕ್ಷಕ್ಕೂ ಅಧಿಕ ಬಾಡಿಗೆ ಕಟ್ಟಲಾಗುತ್ತಿದೆ. ಆದರೆ ಆಟದ ಬಯಲು ಇರದೆ ಇರುವುದರಿಂದ ಪಠ್ಯೇತರ ಚಟುವಟಿಕೆಗಳಿಗೆ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಎಲ್ಲ ಸೌಲಭ್ಯ ಒಳಗೊಂಡಿರುವ ಕಟ್ಟಡಕ್ಕೆ ಶೀಘ್ರ ಸ್ಥಳಾಂತರವಾಗಬೇಕೆಂದು ಶಿಕ್ಷಣ ಪ್ರೇಮಿಗಳ ಆಗ್ರಹವಾಗಿದೆ. ಕಟ್ಟಡ ಪೂರ್ಣಗೊಂಡರೂ ಇದುವರೆಗೆ ಸ್ಥಳಾಂತರಿಸಿಲ್ಲ. ಮಕ್ಕಳಿಗೆ ಎಲ್ಲ ಸೌಲಭ್ಯ ಇರುವುದರಿಂದ ಆದಷ್ಟು ಬೇಗನೇ ಹೊಸ ಕಟ್ಟಡದಲ್ಲಿ ಪಾಠಗಳು ನಡೆಯುವಂತಾಗಬೇಕು.
-ಶ್ರೀನಿವಾಸ ನೆಲ್ಲೂರ, ಹಾನಾಪೂರ ಎಸ್.ಪಿ.ಗ್ರಾಮ.ಕಟ್ಟಡ ಮುಗಿದಿದ್ದು, ಕಟ್ಟಡದ ಮೂಲಭೂತ ಸೌಲಭ್ಯ ಮತ್ತು ಇತರೆ ಸಾಮಗ್ರಿ ಮತ್ತು ಸಿಸಿ ಟಿವಿ ಅಳವಡಿಸುವುದು ಸೇರಿದಂತೆ ಎಲ್ಲಾ ಮಾಹಿತಿ ನೀಡಿದ್ದು, ಅದರಂತೆ ಎಲ್ಲ ಕೆಲಸ ಮುಗಿದಿದೆ. ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸಾಮಗ್ರಿಗಳು ಬಂದಿವೆ. ಕೆಲವೇ ದಿನಗಳಲ್ಲಿ ಹಸ್ತಾಂತರಿಸುವುದಾಗಿ ಹೇಳಿದ್ದಾರೆ.
-ಆರ್.ಜೆ.ಪವಾರ, ಪ್ರಾಚಾರ್ಯರು, ಇಂದಿರಾಗಾಂಧಿ ವಸತಿ ಶಾಲೆ, ಗುಳೇದಗುಡ್ಡ.ಇಂದಿರಾಗಾಂಧಿ ವಸತಿ ನಿಲಯ ಕಟ್ಟಡ ನಿರ್ಮಾಣವಾಗಿದೆ ಆದರೆ ಅದರ ಹಸ್ಥಾಂತರ ನನ್ನ ವ್ಯಾಪ್ತಿಗೆ ಬರುವುದಿಲ್ಲ. ಅದನ್ನು ಸಂಬಂಧಿಸಿದ ಪ್ರಾಚಾರ್ಯರಿಗೆ ಹಸ್ತಾಂತರ ಮಾಡಬೇಕಾಗುತ್ತದೆ. ಅದು ಯಾವ ಸ್ಥಿತಿಯಲ್ಲಿದೆ ಎನ್ನುವ ಮಾಹಿತಿ ಇಲ್ಲ. ಪಡೆದು ತಿಳಿಸುತ್ತೇನೆ.
-ಸದಾಶಿವ ಬಡಿಗೇರ, ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಬಾಗಲಕೋಟೆ.ಎಲ್ಲ ಕೆಲಸಗಳು ಮುಗಿದಿದ್ದು, ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ಕೆಲಸ ಬಾಕಿ ಇದೆ. ಅದನ್ನು ಈ ವಾರದಲ್ಲಿ ಪೂರ್ಣಗೊಳಿಸಿ 15 ದಿನದಲ್ಲಿ ಪ್ರಾಚಾರ್ಯರಿಗೆ ಕಟ್ಟಡ ಹಸ್ತಾಂತರಿಸಲಾಗುವುದು.
-ನಟರಾಜನ್, ಕಿರಿಯ ಎಂಜಿನಿಯರ್, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ.