ಇನ್ನೂ 10 -15 ತಾಲೂಕು ಶೀಘ್ರವೇ ಬರಪೀಡಿತ ಪಟ್ಟಿಗೆ

KannadaprabhaNewsNetwork |  
Published : Oct 08, 2026, 02:00 AM IST
ಸಸಸಸ | Kannada Prabha

ಸಾರಾಂಶ

ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಪರಿಸ್ಥಿತಿ ನಿಭಾಯಿಸಲು ಒಟ್ಟು ₹ 306 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಲಾಗಿದೆ.

ಬಳ್ಳಾರಿ: ಕರ್ನಾಟಕದಲ್ಲಿ ಕಳೆದ 75 ವರ್ಷಗಳಲ್ಲೇ ಕಾಣದಂತಹ ಭೀಕರ ಬರಗಾಲ ಎದುರಾಗಿದ್ದು, ಸಂಕಷ್ಟದಲ್ಲಿರುವ ಅನ್ನದಾತರ ನೆರವಿಗೆ ನಮ್ಮ ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು.

ಬಳ್ಳಾರಿ ತಾಲೂಕಿನ ಹಲಕುಂದಿ ಗ್ರಾಮದಲ್ಲಿ ಬುಧವಾರ ಮಳೆ ಕೊರತೆಯಿಂದ ಹೊಲದಲ್ಲಿ ಒಣಗುತ್ತಿರುವ ತೊಗರಿ ಬೆಳೆಗಳನ್ನು ಖುದ್ದು ವೀಕ್ಷಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಕರಾವಳಿ ತೀರದ 10–15 ತಾಲೂಕುಗಳನ್ನು ಹೊರತುಪಡಿಸಿ ರಾಜ್ಯದ ಉಳಿದೆಲ್ಲ ಭಾಗಗಳಲ್ಲಿ ಭೀಕರ ಬರ ಆವರಿಸಿದೆ. ಈಗಾಗಲೇ 216 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಉಳಿದ 23 ತಾಲೂಕುಗಳಲ್ಲಿ ಕ್ಷೇತ್ರಗಳ ವಾಸ್ತವಿಕ ಪರಿಶೀಲನೆ ನಡೆಯುತ್ತಿದ್ದು, ಅವುಗಳಲ್ಲಿಯೂ 10 ರಿಂದ 15 ತಾಲೂಕುಗಳನ್ನು ಶೀಘ್ರವೇ ಬರಪೀಡಿತ ಪಟ್ಟಿಗೆ ಸೇರಿಸಲಾಗುವುದು. ರಾಜ್ಯದಲ್ಲಿ ಶೇ. 90 ರಷ್ಟು ಬೆಳೆ ಹಾನಿಯಾಗಿದೆ. ರೈತರು ಬೆಳೆದ ತೊಗರಿ, ಜೋಳ ಸಂಪೂರ್ಣ ನೆಲಕಚ್ಚಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ತಿಳಿಸಿದರು.

ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಪರಿಸ್ಥಿತಿ ನಿಭಾಯಿಸಲು ಒಟ್ಟು ₹ 306 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಲಾಗಿದೆ. ಅಲ್ಲದೆ, ಜಿಲ್ಲಾಧಿಕಾರಿಗಳ ಖಾತೆಯಲ್ಲಿರುವ ಹಣ ಬಳಸಿಕೊಂಡು ತುರ್ತು ಪರಿಹಾರ ಕಾರ್ಯ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.

ರೈತರ ಸಾಲ ವಸೂಲಾತಿ ಮುಂದೂಡಿಕೆ: ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ನಿಲ್ಲಲಿದ್ದು, ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆಯಂತಹ ಕಠಿಣ ನಿರ್ಧಾರ ಕೈಗೊಳ್ಳಬಾರದು ಎಂದು ಮನವಿ ಮಾಡಿದ ಉಪಮುಖ್ಯಮಂತ್ರಿಗಳು, ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಸಾಲ ವಸೂಲಾತಿ ವರ್ಷಕಾಲ ಮುಂದೂಡಲು ಸೂಚನೆ ನೀಡಲಾಗಿದೆ. ಇದಲ್ಲದೆ, ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಹಾಗೂ ವಿದ್ಯುತ್ ಸಬ್ಸಿಡಿ ಮೂಲಕ ಬಡ ಹಾಗೂ ರೈತ ಕುಟುಂಬಗಳಿಗೆ ವಾರ್ಷಿಕ ₹60,000 ದಿಂದ ₹70,000 ಕೋಟಿ ಆರ್ಥಿಕ ನೆರವು ತಲುಪುತ್ತಿದೆ. ಬರ ಪರಿಹಾರ ಕಾಮಗಾರಿಗಳೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಸ್ಪಷ್ಟಪಡಿಸಿದರು.

ರೈತರೊಂದಿಗೆ ಸಂವಾದ: ಇದಕ್ಕೂ ಮುನ್ನ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ,ರೈತರೊಂದಿಗೆ ಸಮಾಲೋಚನೆ ನಡೆಸಿ, ಬೆಳೆ ನಷ್ಟ ಹಾಗೂ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ರೈತ ದುರ್ಗಣ್ಣ, ಒಂದು ಎಕರೆ ತೊಗರಿ ಬೆಳೆಯಲು ಈವರೆಗೆ ಸುಮಾರು ₹15 ಸಾವಿರ ವೆಚ್ಚವಾಗಿದೆ. ಸಮಯಕ್ಕೆ ಸರಿಯಾಗಿ ಉತ್ತಮ ಮಳೆಯಾಗಿದ್ದರೆ ಪ್ರತಿ ಎಕರೆಗೆ 5ರಿಂದ 6 ಕ್ವಿಂಟಲ್‌ವರೆಗೆ ತೊಗರಿ ಇಳುವರಿ ನಿರೀಕ್ಷಿಸಲಾಗಿತ್ತು. ಆದರೆ, ಈ ಬಾರಿ ಮಳೆ ಕೊರತೆಯಿಂದ ಬೆಳೆ ಒಣಗಿ ಸಂಪೂರ್ಣ ಹಾನಿಗೀಡಾಗಿದೆ. ಯಾವುದೇ ಇಳುವರಿ ಬಾರದ ಹಿನ್ನೆಲೆ ಬೆಳೆಗಾರರಿಗೆ ಭಾರಿ ನಷ್ಟವಾಗಿದೆ. ಆದ್ದರಿಂದ ಸರ್ಕಾರ ರೈತರ ಬೆಳೆ ನಷ್ಟ ಪರಿಗಣಿಸಿ ಸೂಕ್ತ ಪರಿಹಾರ ಒದಗಿಸಬೇಕು, ಅಲ್ಲದೆ ಬೆಳೆ ವಿಮೆ ಪರಿಹಾರ ಒದಗಿಸಬೇಕು ಎಂದು ಉಪಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅವರು, ಇನ್ಸೂರೆನ್ಸ್ ಕಂಪನಿಯವರಿಗೆ ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ರೈತರು ಧೃತಿಗೆಡಬಾರದು, ವಿಮಾ ಕಂಪನಿಗಳಿಂದ ರೈತರಿಗೆ ಬರಬೇಕಾದ ಪರಿಹಾರದ ಹಣ ಕೊಡಿಸಿಯೇ ತೀರುತ್ತೇವೆ, ಅದಕ್ಕಾಗಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಸ್ಥಳದಲ್ಲೇ ಭರವಸೆ ನೀಡಿದರು.

ಬಳಿಕ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ, ಬಿ.ಬೆಳಗಲ್ ಗ್ರಾಮಕ್ಕೆ ಭೇಟಿ ನೀಡಿ, ಮಳೆ ಕೊರತೆಯಿಂದ ಹಾನಿಗೊಳಗಾಗಿರುವ ತೊಗರಿ ಹಾಗೂ ಸಜ್ಜೆ ಬೆಳೆಗಳ ಜಮೀನುಗಳನ್ನು ಪರಿಶೀಲಿಸಿದರು. ಮಳೆಯ ಅಭಾವದಿಂದ ತೊಗರಿ ಬೆಳೆ ನಿರೀಕ್ಷಿತ ಪ್ರಮಾಣದಲ್ಲಿ ಬೆಳವಣಿಗೆಯಾಗದೇ ಕುಂಠಿತಗೊಂಡಿರುವುದು ಹಾಗೂ ಸಜ್ಜೆ ಬೆಳೆ ಸಂಪೂರ್ಣವಾಗಿ ಒಣಗಿ ಹೋಗಿರುವುದು ಸ್ಥಳ ಪರಿಶೀಲನೆ ವೇಳೆ ಕಂಡುಬಂದಿತು.

ಈ ಸಂದರ್ಭದಲ್ಲಿ ರೈತರಾದ ಮಲ್ಲಿಕಾರ್ಜುನಗೌಡ ಹಾಗೂ ತಿಪ್ಪೇರುದ್ರಪ್ಪ ಅವರೊಂದಿಗೆ ನೇರವಾಗಿ ಮಾತಿಗಿಳಿದು, ಬೆಳೆ ಹಾನಿ, ಮಳೆ ಕೊರತೆ ಹಾಗೂ ತಾವು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು.

ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ., ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್, ಎಸ್ಪಿ ಡಾ.ಸುಮನ್ ಡಿ. ಪೆನ್ನೇಕರ್, ಎಡಿಸಿ ಮಹಮ್ಮದ್ ಝುಬೇರ್. ಎನ್., ಉಪವಿಭಾಗಾಧಿಕಾರಿ ರಾಜೇಶ್ ಎಚ್.ಡಿ., ಜಂಟಿ ಕೃಷಿ ನಿರ್ದೇಶಕ ಕೆ.ಸೋಮಸುಂದರ್, ತೋಟಗಾರಿಕೆ ಜಂಟಿ ನಿರ್ದೇಶಕ ಶಶಿಕಾಂತ್ ಕೋಟಿಮನಿ, ಬಳ್ಳಾರಿ ತಾಲೂಕು ತಹಸೀಲ್ದಾರ ಟಿ.ರೇಖಾ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ರೈತರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಧಾರ್ ತಿದ್ದುಪಡಿಗೆ ಹಗಲು- ರಾತ್ರಿ ಕಾಯುವ ಜನ
ಮೋದಿಯವರ 25 ವರ್ಷ ಜನಸೇವೆಯೇ ನವಭಾರತಕ್ಕೆ ಪ್ರೇರಣೆ: ವಿಜಯೇಂದ್ರ